Site icon Vistara News

ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಗುರುತಿಸಲು ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ರಚನೆ

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮುನ್ನ ಮೂರು ಹಂತದ ಪರಿಶೀಲನೆ ಅಗತ್ಯವಿದೆ ಎಂದಿದ್ದ ಸುಪ್ರೀಕೋರ್ಟ್‌ ಆದೇಶದಿಂದ ಉಂಟಾಗಿದ್ದಕಗ್ಗಂಟನ್ನು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಹೊಸ ಸಮಿತಿ ರಚನೆ ಮಾಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಕುರಿತು ಅಧ್ಯಯನ ನಡೆಸಲು ನ್ಯಾಯಮೂರ್ತಿ ಡಾ. ಕೆ. ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಲಾಗಿದೆ.

ದೇಶದ ಜನಸಂಖ್ಯೆಯ ಹೆಚ್ಚಿನ ಭಾಗ ಹಿಂದುಳಿದ ವರ್ಗವಿದೆ. ಆದರೆ ಈ ಸಮುದಾಯಗಳಿಗೆ ಸೂಕ್ತ ರಾಜಕೀಯ ಸ್ಥಾನಮಾನ ದೊರಕಿಲ್ಲ ಎನ್ನುವ ಕೂಗು ಇದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ವೈಜ್ಞಾನಿಕ ಮಾನದಂಡಗಳಿಗಿಂತಲೂ ಹೆಚ್ಚಾಗಿ ರಾಜಕೀಯ ಆದ್ಯತೆಗಳೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದವು. ಇದರಿಂದಾಗಿ ಸುಪ್ರೀಂಕೋರ್ಟ್‌ನಲ್ಲಿ ಅನೇಕ ಪ್ರಕರಣಗಳು ದಾಖಲಾದವು. ಡಾ. ಕೃಷ್ಣಮೂರ್ತಿ v/s ಕೇಂದ್ರ ಸರ್ಕಾರ ಪ್ರಕರಣದ ಜತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶದ ಅನೇಖ ಪ್ರರಕಣ ವಿಚಾರಣೆ ನಡೆದಿತ್ತು.

ಅಧಿಕಾರ ವಿಕೇಂದ್ರೀಕರಣದ ಪ್ರಮುಖ ಅಂಗಗಳಾದ ಪಂಚಾಯತ್‌ ರಾಜ್‌, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮುನ್ನ ಮೂರು ಹಂತದ ಪರಿಶೀಲನೆ ನಡೆಯಬೇಕು. ಮೀಸಲಾತಿಯನ್ನು ನಿಗದಿಪಡಿಸಲು ಪ್ರತ್ಯೇಕ ಹಾಗೂ ಸ್ವತಂತ್ರ ಆಯೋಗವೊಂದನ್ನು ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿತ್ತು. ಈ ತೀರ್ಪಿನಿಂದಾಗಿ ರಾಜ್ಯದ ಅನೇಕ ಕಡೆಗಳಲ್ಲಿ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬ್ರೇಕ್‌ ಬಿದ್ದಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಈ ಹಿಂದೆ ಈ ವಿಚಾರದಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದರು. ಸುಪ್ರೀಂಕೋರ್ಟ್‌ ಆದೇಶವನ್ನು ಒಪ್ಪಿ, ಸದ್ಯಕ್ಕೆ ಹಿಂದುಳಿದ ವರ್ಗದ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬೇಕು ಎಂಬ ಅನೇಕರ ವಾದವನ್ನು ತಳ್ಳಿಹಾಕಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವುದು ಆ ವರ್ಗಗಳಿಗೆ ಅನ್ಯಾ ಮಾಡಿದಂತಾಗುತ್ತದೆ, ಸೂಕ್ತ ಮೀಸಲಾತಿ ಪ್ರಮಾಣ ನಿಗದಿ ಮಾಡುವವರೆಗೂ ಚುನಾವಣೆ ನಡೆಸುವುದಿಲ್ಲ ಎಂದಿದ್ದರು.

ಇದನ್ನೂ ಓದಿ | ಬಿಜೆಪಿಯೇತರ ಸರ್ಕಾರಗಳಿಂದ ಜನರಿಗೆ ಅನ್ಯಾಯ: ಇಂಧನ ತೆರಿಗೆ ಇಳಿಸಿದ ಬೊಮ್ಮಾಯಿ ಸರ್ಕಾರಕ್ಕೆ ಮೋದಿ ಶ್ಲಾಘನೆ

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಇದೇ ಮಾತನ್ನು ಹೇಳಿದ್ದರು. ಸೂಕ್ತ ಪ್ರಾತಿನಿಧ್ಯ ಸಿಗುವವರೆಗೂ ಚುನಾವಣೆ ನಡೆಸುವುದು ಬೇಡ. ಈಗಾಗಲೆ ತಮ್ಮ ಅಧಿಕಾರಾವಧಿಯಲ್ಲಿ ನಡೆಸಲಾಗಿರುವ ಜಾತಿ ಗಣತಿಯನ್ನು ಆಧರಿಸಿ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಮಾಡಬಹುದು ಎಂದು ತಿಳಿಸಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ಸರ್ವಪಕ್ಷಗಳು ಹಾಗೂ ಅಡ್ವೋಕೇಟ್‌ ಜನರಲ್‌ ಜತೆಗೆ ಎರಡು ಬಾರಿ ಸಭೆ ನಡೆಸಿದ್ದರು. 2022ರ ಮಾರಚ್‌ 23 ಹಾಗೂ 31ರಂದು ನಡೆದಿದ್ದ ಈ ಸಭೆಗಳಲ್ಲಿ, ಸೂಕ್ತ ಪ್ರಾತಿನಿಧ್ಯ ಕಲ್ಪಿಸಿದ ನಂತರವೇ ಚುನಾವಣೆ ನಡೆಸಲು ತೀರ್ಮಾನ ಮಾಡಲಾಗಿತ್ತು.

ಅದರಂತೆ, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಮಕಾಲೀನ ಅಧ್ಯಯನವನ್ನು ನಡೆಸಲು ಪ್ರತ್ಯೇಖ ಆಯೋಗ ರಚನೆ ಮಾಡಲಾಗಿದೆ. ನ್ಯಾಯಮೂರ್ತಿ ಡಾ. ಕೆ. ಭಕ್ತವತ್ಸಲ ಅವರು ಈ ಸಮಿತಿ ಅಧ್ಯಕ್ಷರಾಗಿ, ನಿವೃತ್ತ ಐಎಎಸ್ ಅಧಿಕಾರಿ ಸಿ.ಆರ್. ಚಿಕ್ಕಮಠ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ, ಈ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಅಧ್ಯಯನ ನಡೆಸಿ, ಶಿಫಾರಸನ್ನು ಈ ಆಯೋಗ ಮಾಡಲಿದೆ.

ಸಾಮಾನ್ಯವಾಗಿ ಯಾವುದೇ ಆಯೋಗವನ್ನು ರಚನೆ ಮಾಡಿದಾಗಲೂ ಅವಧಿ ನಿಗದಿಪಸಿಸಲಾಗುತ್ತದೆ. ಇಂತಿಷ್ಟು ಅವಧಿಯಲ್ಲಿ ಪೂರ್ಣ ವರದಿ, ಮಧ್ಯಂತರ ವರದಿ ನೀಡಬೇಕು ಎಂದು ತಿಳಿಸಲಾಗುತ್ತದೆ. ಆದರೆ ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಚಿಸಿರುವ ಈ ಆಯೋಗಕ್ಕೆ ಯಾವುದೇ ಅವಧಿ ನಿಗದಿ ಮಾಡಿಲ್ಲ.

ಇದನ್ನೂ ಓದಿ | ನೇಕಾರರ, ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ : CM ಬಸವರಾಜ ಬೊಮ್ಮಾಯಿ

ಭಕ್ತವತ್ಸಲ ಅವರ ಹಿನ್ನೆಲೆ

ನ್ಯಾಯಮೂರ್ತಿ ಭಕ್ತವತ್ಸಲ ಅವರು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ. 2012ರಲ್ಲಿ ಕೌಟುಂಬಿಕ ದೌರ್ಜನ್ಯ ಕುರಿತ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದಾಗ, “ಗಂಡ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ, ಗಂಡ ಥಳಿಸುವ ಮಾತನ್ನೇ ಆಡುತ್ತಿರುವಿಯಲ್ಲ. ಎಲ್ಲರ ಮದುವೆಯಲ್ಲಿ ಆಗುವಂಥದ್ದೇ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು” ಎಂದು ನ್ಯಾಯಮೂರ್ತಿ ಭಕ್ತವತ್ಸಲ ಅವರು ಹೇಳಿದ್ದು ವಿವಾದವಾಗಿತ್ತು. ಮಹಿಳೆಯರ ಬಗ್ಗೆ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಮಹಿಳಾ ವಕೀಲರು, ಅಂದಿನ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಸೇರಿ ಅನೇಕರು ಪ್ರತಿಭಟಿಸಿದ್ದರು. ನ್ಯಾಯಮೂರ್ತಿ ಭಕ್ತವತ್ಸಲ ಅವರು ನಂತರ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Exit mobile version