Site icon Vistara News

ಕೆರೂರು ಗುಂಪು ಘರ್ಷಣೆ: 144 ನಿಷೇಧಾಜ್ಞೆ ಜಾರಿ, ಕೆರೂರು ಪಟ್ಟಣ ಸ್ತಬ್ಧ

ಬಾಗಲಕೋಟೆ: ಇಲ್ಲಿನ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಬುಧವಾರ (ಜುಲೈ 6) ಗುಂಪು ಘರ್ಷಣೆ ನಡೆದು, ಮೂವರು ಯುವಕರಿಗೆ ಚಾಕು ಇರಿಯಲಾಗಿದೆ. ಈ ಕಾರಣದಿಂದಾಗಿ ಪಟ್ಟಣದೆಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 144 ನಿಷೇಧಾಜ್ಞೆ ಜಾರಿಗೊಂಡಿದ್ದು, ಕೆರೂರು ಪಟ್ಟಣದಲ್ಲಿ ಯಾವುದೇ ಹಿಂಸಾಚಾರ ನಡೆಯದಂತೆ ತಡೆಯಲು ೧೫೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಪ್ರಕರಣ ನಡೆಯುತ್ತಿದ್ದಂತೆ ಕಾರ್ಯೋನ್ಮುಖರಾದ ಪೊಲೀಸರು ಈವರೆಗೆ ೧೮ ಜನರನ್ನು ವಶಕ್ಕೆ ಪಡೆದಿದ್ದಾರೆ. ೧೫ಕ್ಕೂ ಅಧಿಕ ಆರೋಪಿಗಳು ತಲೆಮರೆಸಿಕೊಂಡಿದ್ದು. ಪೊಲೀಸರು ತೀವ್ರ ಶೋಧನೆಯಲ್ಲಿದ್ದಾರೆ. ಕೆರೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಅಲ್ಲದೆ, ಯಾವುದೇ ಹಿಂಸಾಚಾರ ಘಟನೆ ನಡೆಯದಂತೆ ನಿಭಾಯಿಸಲು ಕೆಎಸ್‌ಆರ್‌ಪಿ, ಡಿಎಆರ್, ಅಗ್ನಿಶಾಮಕ ತುಕುಡಿಗಳನ್ನು ನಿಯೋಜಿಸಲಾಗಿದೆ. ಎಸ್‌.ಪಿ. ಜಯಪ್ರಕಾಶ್‌ ಅವರು ಕೆರೂರು ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಿ ನಿಗಾ ವಹಿಸಿದ್ದಾರೆ. ಅಲ್ಲದೆ, ಎಡಿಜಿಪಿ ಅಲೋಕ್‌ಕುಮಾರ್ ಕೂಡ ಇಲ್ಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಶುಕ್ರವಾರದ ವರೆಗೂ ನಿಷೇಧಾಜ್ಞೆ ಜಾರಿ

ತುರ್ತು ಕಾರ್ಯಗಳಿಗೆ ತೆರಳುವವರಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಅನವಶ್ಯಕವಾಗಿ ಯಾರೂ ರಸ್ತೆಯಲ್ಲಿ ಓಡಾಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸೆಕ್ಷನ್‌ 144 ಜಾರಿಗೊಳಿಸಲಾಗಿದ್ದು, ಶುಕ್ರವಾರ ರಾತ್ರಿ ೮ ಗಂಟೆವರೆಗೂ ಜಾರಿಯಲ್ಲಿ ಇರಲಿದೆ. ಪರಿಸ್ಥಿತಿಯನ್ನು ನೋಡಿಕೊಂಡು ವಿಸ್ತರಣೆ ಮಾಡುವ ಚಿಂತನೆಯಲ್ಲಿ ಪೊಲೀಸ್‌ ಇಲಾಖೆ ಇದೆ. ಎಲ್ಲಿಯೂ ಗುಂಪು ಸೇರಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ | ಕೋಟಿ ಕೋಟಿ ಲೂಟಿ ಮಾಡಿ ಶೋಕಿ ಮಾಡಿದ ಬ್ಯಾಂಕ್‌ ಜವಾನ!

ಏನಿದು ಪ್ರಕರಣ?

ಬುಧವಾರ (ಜುಲೈ 6)ದಂದು ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಕೆರೂರಿನ ಅರುಣ್ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಹಾಗೂ ಯಮನೂರ ಚುಂಗಿನ್ ಅವರಿಗೆ ಚಾಕು ಇರಿಯಲಾಗಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೂರ್ವ ನಿಯೋಜಿತ ಕೃತ್ಯವೆಂದ ಅರುಣ್‌ ತಂದೆ

ಗಾಯಳು ಅರುಣ್ ತಂದೆ ರಾಮಣ್ಣ ಕಟ್ಟಿಮನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಆರೋಪಿಸಿದ್ದಾರೆ. ನನ್ನ ಮಗ ಅರುಣ ಹಿಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆಗಿದ್ದು, ಗ್ರಾಮದಲ್ಲಿ ಏನೇ ಗಲಾಟೆಗಳು ನಡೆದರೂ ಸ್ಥಳಕ್ಕೆ ಹೋಗಿ ಬಗೆಹರಿಸಿ ಬರುತ್ತಿದ್ದ. ಮೊದಲಿಗೆ ಖಾರದ ಪುಡಿ ಎರಚಿ ರಾಡು, ಚಾಕುವಿನಿಂದ ಹಲ್ಲೆ ಮಾಡಿದ್ದು, ಅರುಣನನ್ನು ಮುಗಿಸಿದರೆ ಕೆರೂರು ಭಾಗದಲ್ಲಿ ಹಿಂದು ಸಂಘಟನೆ ಮುಗಿಸಿದಂತೆ ಆಗುತ್ತದೆ ಎಂಬುದು ಕೃತ್ಯ ಮಾಡಿರುವವರ ಉದ್ದೇಶ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತೀವ್ರ ಹಲ್ಲೆಗೆ ಒಳಗಾಗಿರುವ ಲಕ್ಷ್ಮಣ ಕಟ್ಟಿಮನಿ

ಬಿಗುವಿನ ವಾತಾವರಣ ಸ್ಥಳಕ್ಕೆ ಬಂದ ಎಸ್‌ಪಿ

ಕೆರೂರು ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣದಲ್ಲಿ ಹತ್ತು ಅಂಗಡಿಗಳ ಧ್ವಂಸವಾಗಿದ್ದು, ಐದುಕ್ಕೂ ಹೆಚ್ಚು ಬೈಕ್ ಜಖಂಗೊಂಡಿದೆ. ಸ್ಥಳಕ್ಕೆ‌ ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ | ಬಾಗಲಕೋಟೆಯಲ್ಲಿ ರಸ್ತೆ ಬದಿ ನಿಂತಿದ್ದವರಿಗೆ ವಾಹನ ಡಿಕ್ಕಿ, ನಾಲ್ವರ ಸಾವು

Exit mobile version