ಬಾಗಲಕೋಟೆ : ಬಾಗಲಕೋಟೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ ಪ್ರಕರಣದಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ನೆರೆಮನೆಯ ಮಹಾಂತೇಶ್ ಚೊಳಚಗುಡ್ಡ ಹಲ್ಲೆ ಖಂಡಿಸಿ ಬಾಗಲಕೋಟೆ ವಕೀಲರ ಸಂಘ ಹಾಗೂ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನೆ ಮಾಡಿದವು. ಸಂಗೀತಾ ಮೇಲೆ ಮಹಾಂತೇಶ್ ಹಲ್ಲೆ ಮಾಡುತ್ತಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಇಡೀ ಪ್ರಕರಣ ದಿನೇದಿನೆ ಸಂಕೀರ್ಣವಾಗುತ್ತ ಸಾಗಿದೆ.
ಹಲ್ಲೆಗೆ ಸಂಬಂಧಿಸಿದಂತೆ ಬಾಗಲಕೋಟೆ ಸೇರಿ ರಾಜ್ಯದ ಇತರೆಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಾಗಕೋಟೆ ವಕೀಲರ ಸಂಘ ಭಾನುವಾರ ತಿಳಿಸಿತ್ತು. ಅದರಂತೆ ವಕೀಲರ ಸಂಘ ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಸ್ವಯಂ ಪ್ರೇರಣೆಯಿಂದ ಅನೇಕರು ಕೋರ್ಟ್ ಕಲಾಪ ಬಹಿಷ್ಬೈಕರಿಸಿದ್ಕಾದು, ರಾಜ್ಯದ ವಿವಿದ ಜಿಲ್ಲೆ ಹಾಗೂ ತಾಲೂಕಾ ಮಟ್ಟದಲ್ಲಿ ಪ್ರತಿಭಟನೆ ಆಗುತ್ತಿದೆ. ಮಹಿಳಾ ವಕೀಲೆ ಮೇಲೆ ಹಲ್ಲೆ ಆರೋಪಿಗಳ ಪರ ಯಾರೂ ವಕಲಾತ್ತು ವಹಿಸದಂತೆ ಜಿಲ್ಲಾ ವಕೀಲರ ಸಂಘದಿಂದ ತೀರ್ಮಾನ ಮಾಡಲಾಗಿದೆ.
ಈಗಾಗಲೇ ನವನಗರದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ. ಜಿಲ್ಲಾ ನ್ಯಾಯಾಲಯ ಆವರಣದಿಂದ ಜಿಲ್ಲಾಡಳಿತ ಭವನದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಹಲ್ಲೆ ಮಾಡಿರುವ ಆರೋಪಿಯ ಜತೆಗೆ ದೂರಿನಲ್ಲಿ ದಾಖಲಿಸಿರುವ ಎಲ್ಲ ಆರೋಪಿಗಳನ್ನು ಬಂಧಿಸಲು ಒತ್ತಾಯ ಮಾಡಿದ್ದು, ವಕೀಲೆ ಮನೆಗೆ ಬಂದ್ ಮಾಡಿರುವ ಕುಡಿವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹಿಸಿದ್ದಾರೆ. ಜಿಲ್ಲಾ ವಕೀಲರ ಸಂಘಕ್ಕೆ, ಮಹಿಳಾ ಸಂಘಟನೆಗಳು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ |ಬಾಗಲಕೋಟೆ BJP ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ
ಬಾಗಲಕೋಟೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ್, ಉಪಾಧ್ಯಕ್ಷ ಆನೀಲ ಜಾಧವ, ರಾಜ್ಯ ವಕೀಲರ ಸಂಘದ ಸದಸ್ಯ ಎಸ್.ಎಸ್.ಮಿಠ್ಠಲ ಕೋಡ, ರಮೇಶ ಬದ್ನೂರ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮಹಾಂತೇಶ್ ಕುಟುಂಬದವರಿಂದಲೂ ದೂರು
ಪ್ರಕರಣಕ್ಕೆ ಸಂಭಂದಿಸಿದಂತೆ ಹಲ್ಲೆ ಮಾಡಿದ ಮಹಾಂತೇಶ ಚೊಳಚಗುಡ್ಡ ಅವರ ಕುಟುಂಬದವರಾದ ಮಹಾಂತೇಶ್ ಪತ್ನಿ ಸುಜಾತಾ, ಸಹೋದರ ಯಲ್ಲಪ್ಪ, ಮಹಾಂತೇಶ್ ಮಕ್ಕಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸಂಗೀತಾ ಮೊದಲು ಅಂಗಡಿಗೆ ಬಂದು ಸಹೋದರನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡು ಮಹಂತೇಶ ಹೊಡೆದಿದ್ದಾನೆ. ವಿಡಿಯೊ ಮಾಡುವ ಸಲುವಾಗಿ ಬೇಕೆಂದೇ ಜಗಳ ಮಾಡಿದ್ದಾರೆ. ಹೀಗಾಗಿ ನಮಗೂ ಅನ್ಯಾಯವಾಗಿದೆ. ನಮ್ಮ ಗಿಪ್ಟ್ ಸೆಂಟರ್‌ನಲ್ಲಿ ಕೆಲಸ ಮಾಡುವ ಯುವತಿಯ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸಹೋದರ ಯಲ್ಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ವಿನಾಯಕ ನಗರದಲ್ಲಿನ ಸಂಗೀತಾ ಶಿಕ್ಕೇರಿ ಅವರ ಮನೆಯ ಕಂಪೌಂಡ್ ಧ್ವಂಸ ಮಾಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ರಾಜು ನಾಯ್ಕ ವಿರುದ್ಧ ಸಂಗೀತಾ ಶಿಕ್ಕೇರಿ ಆರೋಪ ಮಾಡಿದ್ದರು. ಜೆಸಿಬಿ ಮೂಲಕ ಮನೆ ಮುಂದಿನ ಗೋಡೆ ಧ್ವಂಸ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ರಮೇಶ್ ನಾಯ್ಕ್, ಯಾರ ಮೇಲೂ ದೌರ್ಜನ್ಯ ಮಾಡಿಲ್ಲ ಎಂದಿದ್ದರು. ನ್ಯಾಯಾಲಯಕ್ಕೆ ನಾನು ದಾಖಲಾತಿಗಳನ್ನು ಹಾಜರುಪಡಿಸುತ್ತೇನೆ ಎಂದು ತಿಳಿಸಿದ್ದರು. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಮಹಾಂತೇಶ್, ನಾನು ಹಲ್ಲೆ ಮಾಡಿಲ್ಲ. ವಕೀಲೆ ಸಂಗೀತಾ ಶಿಕ್ಕೇರಿ ಪತಿ ಹಾಗೂ ಕುಟುಂಬಸ್ಥರೇ ನಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರತ್ಯಾರೋಪಿಸಿದ್ದರು.
ಇದನ್ನೂ ಓದಿ |ಬಾಗಲಕೋಟೆಯಲ್ಲಿ ಮೊಸಳೆ ಪಾರ್ಕ್ ಆರಂಭಿಸಿ ಎಂದು ಅಂಗಲಾಚುತ್ತಿರುವ ಜನರು