Site icon Vistara News

Lawyer Murder : ಕಾಣೆಯಾಗಿದ್ದ ಲಾಯರ್‌ ಶವ ಪತ್ತೆ; ಕಲ್ಲಿನಿಂದ ಜಜ್ಜಿ ಮರ್ಡರ್‌

lawyer murder in Bagalakote

lawyer murder in Bagalakote

ಬಾಗಲಕೋಟೆ: ಬೀಳಗಿ ಕೋರ್ಟ್‌ನಲ್ಲಿ (Beelagi court) ಕಾರ್ಯ ನಿರ್ವಹಿಸುತ್ತಿದ್ದ ವಕೀಲರೊಬ್ಬರು (Lawyer murder) ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಈಗ ಅವರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ತುಂಬರಮಟ್ಟಿ ಗ್ರಾಮದ ನಿವಾಸಿಯಾಗಿರುವ ಗಿರೀಶ್ ಕಾಡಣ್ಣವರ್ (38) ಅವರೇ ಕೊಲೆಯಾದ ವಕೀಲ. ಕಾಣೆಯಾಗಿದ್ದ ಅವರ ಶವ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ. ಅವರನ್ನು ತಲೆ ಹಾಗೂ ದೇಹದ ಭಾಗದ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬೀಳಗಿ ಕೋರ್ಟ್ ನಲ್ಲಿ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ ಅವರು ಅಕ್ಟೋಬರ್ 15ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೇಹದ ಹಲವು ಭಾಗಗಳಲ್ಲಿ ಗಾಯಗಳಿವೆ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಇದು ವೈಯಕ್ತಿಕ ಕಾರಣಗಳಿಗಾಗಿ ನಡೆದಿದೆಯೇ ಅಥವಾ ವೃತ್ತಿ ಸಂಬಂಧ ವೈಷಮ್ಯದಿಂದ ನಡೆದಿದೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬಂಡೀಪುರ ಬಳಿ ಒಂಟಿ ಸಲಗ ದಾಳಿಗೆ ರೈತ ಬಲಿ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಆನೆ- ಮಾನವ ಸಂಘರ್ಷ (Human-Animal conflict) ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ಒಂಟಿ ಸಲಗದ ದಾಳಿಗೆ (Elephant Attack) ರೈತರೊಬ್ಬರು ಬಲಿಯಾಗಿದ್ದಾರೆ (Farmer dead). ಮುಂಜಾನೆಯೇ ನಡೆದ ದಾಳಿಯಂದ ಗ್ರಾಮಸ್ಥರು ಭಯಗೊಂಡಿದ್ದಾರೆ.

Child death

ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮೊಳೆಯೂರು ಅರಣ್ಯ ವ್ಯಾಪ್ತಿಯ ನಡಹಾಡಿ ಗ್ರಾಮದಲ್ಲಿ ಚಿಕ್ಕೇಗೌಡ (65) ಎಂಬವರ ಮೇಲೆ ಒಂಟಿ ಸಲಗ ದಾಳಿ ಮಾಡಿ ಕೊಂದು ಹಾಕಿದೆ. ಇದು ಎಚ್‌.ಡಿ. ಕೋಟೆ ತಾಲೂಕಿನ ಒಂದು ಗ್ರಾಮವಾಗಿದ್ದು, ಆನೆ ದಾಳಿ ನಡೆದು ಸಾವೇ ಸಂಭವಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಡಿವೈಎಸ್ಪಿ ಗೋಪಾಲಕೃಷ್ಣ, ಸರಗೂರು ಠಾಣೆಯ ವೃತ್ತ ನಿರೀಕ್ಷಕರಾದ ಲಕ್ಷ್ಮಿಕಾಂತ್, ಪಿಎಸ್ಐ ನಂದೀಶ್ ಕುಮಾರ್, ರವಿಶಂಕರ್ ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳನ್ನು ಕರೆಸುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

ಸಕಾಲಕ್ಕೆ ನಡೆಯದ ಶಸ್ತ್ರಚಿಕಿತ್ಸೆ: ಹೊಟ್ಟೆಯಲ್ಲೇ ಮಗು ಸಾವು

ಕೊಪ್ಪಳ: ಕುಷ್ಟಗಿ ತಾಲೂಕಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮಗುವೊಂದು ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿದೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಜನರು ಸಿಡಿದೆದ್ದಿದ್ದಾರೆ.

Child death

ಲಿಂಗದಳ್ಳಿ ಗ್ರಾಮದ ಹನುಮಂತಿ ಮಾದರ ಎಂಬುವವರು ಹೆರಿಗೆ ದಾಖಲಾಗಿದ್ದರು. ಈ ವೇಳೆ ಹೆರಿಗೆ ತಜ್ಞೆ ಡಾ. ಚಂದ್ರಕಲಾ ಅವರು ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದರು. ಆದರೆ, ಶಸ್ತ್ರಚಿಕಿತ್ಸೆಯನ್ನೇ ನಡೆಸದೆ ವಿಳಂಬ ಮಾಡಿದ್ದರಿಂದ ಮಗು ಹೊಟ್ಟೆಯಲ್ಲೇ ಪ್ರಾಣ ಬಿಟ್ಟಿದೆ ಎಂದು ಜನರು ಆರೋಪಿಸಿದ್ದಾರೆ.

ಕುಷ್ಟಗಿ ತಾಲೂಕಾ ಆಸ್ಪತ್ರೆಯ ಮುಂದೆ ಲಿಂಗದಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಹೆರಿಗೆ ತಜ್ಞೆ ಡಾ. ಚಂದ್ರಕಲಾ ಅವರ ಮೇಲೆ ನಿರ್ಲಕ್ಷ್ಯ ಆರೋಪ ಮಾಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯೆ ವಿರುದ್ದ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version