ಬಾಗಲಕೋಟೆ: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಕ್ಕೂರಿನಲ್ಲಿ ಬೈಕ್ ಸವಾರನ ಮುಖಕ್ಕೆ ಟ್ರ್ಯಾಕ್ಟರ್ ನೇಗಿಲು ಬಡಿದಿದೆ. ಪರಿಣಾಮ ಚಿಕ್ಕೂರ ಗ್ರಾಮದ ಶಿವಾನಂದ ಪೂಜಾರ (27) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಶಿವಾನಂದ ಹೋಂ ಗಾರ್ಡ್ ಆಗಿದ್ದ. ಲೋಕಾಪುರದಿಂದ ಚಿಕ್ಕೂರಗೆ ಹೋಗುವ ಮಾರ್ಗ ಮಧ್ಯ ದುರ್ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಮುಖದ ಭಾಗ ನಜ್ಜುಗುಜ್ಜಾಗಿ ಸವಾರ ಮೃತಪಟ್ಟಿದ್ದಾನೆ. ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಕ್ರೂಸರ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸಾವು
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಬೆಳಗಲಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಬೆಳಗಲಿ ಗ್ರಾಮದ ಬಳಿ ತಡರಾತ್ರಿ ಕ್ರೂಸರ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಂಕರ್ ಕಡಬಲ್ಲವರ್, ಮಹಾನಿಂಗ ನಂದೆಪ್ಪನವರ ಮೃತರು. ಮುಧೋಳದಿಂದ ಮಹಾಲಿಂಗಪುರ ಕಡೆಗೆ ಹೊರಟಿದ್ದಾಗ ಅಪಘಾತ ಸಂಭವಿಸಿದೆ.
ಹಳಿ ತಪ್ಪಿದ ಡೀಸೆಲ್ ಗೂಡ್ಸ್ ರೈಲು
ಗೂಡ್ಸ್ ರೈಲೊಂದು ಹಳಿ ತಪ್ಪಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಮಹಾರಾಷ್ಟ್ರದ ಪೆನವಲ್‌ನಿಂದ ಆಂಧ್ರದ ಗುಂತ್ಕಲ್‌ಗೆ ಡೀಸೆಲ್ ಟ್ಯಾಂಕರ್ ಗೂಡ್ಸ್ ರೈಲು ಹೊರಟಿತ್ತು.
ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ನಿಲ್ಲಿಸುವಾಗ ಮೂರು ಬೋಗಿಗಳು ಹಳಿ ತಪ್ಪಿದೆ. ಅದೃಷ್ಟವಶಾತ್ ಟ್ಯಾಂಕರ್‌ನಲ್ಲಿ ಡೀಸೆಲ್ ಇರಲಿಲ್ಲ. ತಕ್ಷಣವೇ ಅಲರ್ಟ್ ಆದ ವಾಡಿ ರೈಲ್ವೆ ಸಿಬ್ಬಂದಿ, ಹಳಿ ತಪ್ಪಿದ ಮೂರು ಬೋಗಿಗಳನ್ನು ಹಳಿಗೆ ತಂದರು.
ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ, ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಯ ಹಿಂಬದಿಗೆ ಟ್ಯಾಂಕರ್ ಡಿಕ್ಕಿ; ಸವಾರನ ನರಳಾಟ
ರಾಯಚೂರಿನಲ್ಲಿ ಲಾರಿಯ ಹಿಂಬದಿಗೆ ಟ್ಯಾಂಕರ್ ಡಿಕ್ಕಿಯಾಗಿದೆ. ಈ ವೇಳೆ ಟ್ಯಾಂಕರ್‌ನಲ್ಲಿ ಸಿಲುಕಿ ಚಾಲಕ ನರಳಾಟ ಅನುಭವಿಸಿದರು. ರಾಯಚೂರು ತಾಲೂಕಿನ ಕುಕ್ಕನೂರು ಕ್ರಾಸ್ ಬಳಿ ಘಟನೆ ನಡೆದಿದೆ. ಟ್ಯಾಂಕರ್ ಚಾಲಕ ರಾಜುಗೆ ಗಂಭೀರ ಗಾಯವಾಗಿದೆ. ಲಾರಿಯು ರಾಯಚೂರಿನಿಂದ ಶಕ್ತಿನಗರ ಕಡೆ ಹೊರಟಿತ್ತು. ಇದೇ ಮಾರ್ಗವಾಗಿ ಟ್ಯಾಂಕರ್ ಹೊರಟಿತ್ತು. ವೇಗದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಮುಂದೆ ಹೊರಟಿದ್ದ ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ಯಾಂಕರ್‌ನಲ್ಲಿ ಸಿಲುಕಿ ಕೊಂಡಿದ್ದ ಚಾಲಕ ರಾಜುವನ್ನು ರಾಯಚೂರು ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಚಾಲಕ ರಾಜುಗೆ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ಘಟನೆ ನಡೆದಿದೆ.
ಧಾರವಾಡದಲ್ಲಿ ಪಾದಚಾರಿಗೆ ಚಿಗರಿ ಬಸ್ ಡಿಕ್ಕಿ
ಪಾದಚಾರಿಗೆ ಚಿಗರಿ ಬಸ್ ಡಿಕ್ಕಿಯಾಗಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ. ಧಾರವಾಡದ ಗಾಂಧಿ ನಗರದಲ್ಲಿ ಘಟನೆ ನಡೆದಿದೆ. ವಿಜಯ್ ದಾನ್ ಮೃತ ದುರ್ದೈವಿ. ಮೂಲತಃ ರಾಜಸ್ತಾನದ ವಿಜಯ್ ದಾನ್, ಜೆಎಸ್ಎಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಧಾರವಾಡದ ಗೋವನಕೋಪ್ಪದಲ್ಲಿ ನಿವಾಸಿಯಾಗಿದ್ದ ವಿಜಯ್, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವಿಜಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗಲೇ ಮೃತಪಟ್ಟಿದ್ದಾರೆ. ಸದ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯತಪ್ಪಿ ರೈಲಿನಿಂದ ಬೀಳುತ್ತಿದ್ದ ಯುವಕನ ರಕ್ಷಣೆ
ಆಯತಪ್ಪಿ ರೈಲಿಗೆ ಬೀಳುತ್ತಿದ್ದ ಯುವಕನನ್ನು ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ದುಗ್ಗಾವತಿ ಗ್ರಾಮದ ಪ್ರಜ್ವಲ್ ಆಯತಪ್ಪಿ ರೈಲಿನಿಂದ ಬಿದ್ದವನು. ಕಳೆದ ರಾತ್ರಿ ಬ್ಯಾಡಗಿ ಹೋಗಲು ಗೋಲ್ ಗುಂಬಜ್ ರೈಲನ್ನು ಹತ್ತಿದ್ದ ಪ್ರಜ್ವಲ್, ಬ್ಯಾಡಗಿಯಲ್ಲಿ ನಿಲ್ಲಿಸೋದಿಲ್ಲ ಎಂದು ಹೇಳದ್ದೆ ತಡ ಕೆಳಗಿಳಿಯಲು ಮುಂದಾಗಿದ್ದ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಇಳಿಯಲು ಹೋದಾಗ ಆಯತಪ್ಪಿ ಬಿದ್ದಿದ್ದ. ಕೂಡಲೇ ಅಲ್ಲಿದ್ದ ಆರ್ ಪಿ ಎಫ್ ಮುಖ್ಯ ಪೇದೆ ಓಡೋಗಿ ರಕ್ಷಿಸಿದ್ದಾರೆ. ಯುವಕನ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಆರ್ ಪಿ ಎಫ್ ಮುಖ್ಯ ಪೇದೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ