Site icon Vistara News

Bagalkote | ಕೆರೂರು ಗುಂಪು ಘರ್ಷಣೆ: ಬಾಗಲಕೋಟೆ ನಗರ ಸ್ತಬ್ಧ

ಕೆರೂರು

ಬಾಗಲಕೋಟೆ: ಇಲ್ಲಿನ ಕೆರೂರು ಗುಂಪು ಘರ್ಷಣೆಗೆ ಸಂಬಂಧಪಟ್ಟಂತೆ ಗಲಭೆಕೋರರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಸೋಮವಾರ ಕರೆ ನೀಡಿದ್ದ ಬಾಗಲಕೋಟೆ ಬಂದ್‌ಗೆ ಬಹುತೇಕ ಯಶಸ್ವಿಯಾಗಿದೆ.

ಬಾಗಲಕೋಟೆ ಬಂದ್‌ ಹಿನ್ನೆಲೆಯಲ್ಲಿ ಹೋಟೆಲ್‌, ಅಂಗಡಿ ‌ಮುಂಗಟ್ಟುಗಳು ಪೂರ್ಣ ಬಂದ್ ಆಗಿದ್ದವು. ಆದರೆ ಬಸ್‌ಗಳ ಸಂಚಾರ, ಶಾಲಾ-ಕಾಲೇಜು ‌ಎಂದಿನಂತೆ ನಡೆದಿದ್ದವು. ಹಿಂದು ಜಾಗರಣ ವೇದಿಕೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಮೂವರು ಡಿಎಸ್ಪಿ, ಐವರು ಸಿಪಿಐ, ಏಳು ಮಂದಿ ಪಿಎಸ್ಐ, ಹೋಮ್‌ ಗಾರ್ಡ್ಸ್‌ ಸೇರಿ 290 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ | ಕೆರೂರು ಗುಂಪು ಗಲಾಟೆ ಪೂರ್ವ ನಿಯೋಜಿತ: ಸಚಿವ ಮುರುಗೇಶ್‌ ನಿರಾಣಿ

ನಗರದ ಕಿಲ್ಲಾ ಗಲ್ಲಿಯಿಂದ ಶುರುವಾದ ಪ್ರತಿಭಟನಾ ರ‍್ಯಾಲಿಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಹಲ್ಲೆ ಖಂಡಿಸಿ ದಿಕ್ಕಾರ ಕೂಗಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಏನಿದು ಪ್ರಕರಣ?

ಕಳೆದ ಜುಲೈ 6ರಂದು ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ ಕೆರೂರಿನ ಅರುಣ್ ಕಟ್ಟಿಮನಿ, ಲಕ್ಷ್ಮಣ್‌ ಕಟ್ಟಿಮನಿ ಹಾಗೂ ಯಮನೂರ ಚುಂಗಿನ್ ಅವರಿಗೆ ಚಾಕು ಇರಿಯಲಾಗಿತ್ತು. ಗಾಯಾಳುಗಳಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version