Site icon Vistara News

ಆಕೆ ಪಾಕ್‌ ಪ್ರಜೆ ಹೌದಾ? ಮೊದಲು ಸರಿಯಾಗಿ ಚೆಕ್‌ ಮಾಡಿ, ಅಲ್ಲಿಯವರೆಗೆ ಡಿಟೆನ್ಶನ್‌ ಸೆಂಟರ್‌ನಲ್ಲಿಡಿ, ಜೈಲಲ್ಲಿ ಅಲ್ಲ ಎಂದ ಹೈಕೋರ್ಟ್

ಹೈಕೋರ್ಟ್‌

ಬೆಂಗಳೂರು: ಆಕೆ ಪಾಕಿಸ್ತಾನಿ ಪ್ರಜೆ ಹೌದಾ? ಕೇವಲ ಅನುಮಾನದ ಆಧಾರದಲ್ಲಿ ಬಂಧಿಸಲಾಗಿದೆಯಾ ಎನ್ನುವುದನ್ನು ಮೊದಲು ಚೆಕ್‌ ಮಾಡಿ. ನಿಮ್ಮ ಸಂಶಯದ ನೆಲೆಯಲ್ಲಿ ಆಕೆಯನ್ನು ಜೈಲಿನಲ್ಲಿ ಇಡುವುದು ಸರಿಯಲ್ಲ. ಅವರನ್ನು ಡಿಟೆನ್ಶನ್‌ ಸೆಂಟರ್‌ಗೆ ಕಳುಹಿಸಿ: ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಹೇಳಿದೆ. ಉತ್ತರ ಕನ್ನಡ ಜಿಲ್ಲೆಯ 33 ವರ್ಷದ ಖತೀಜಾ ಮೆಹ್ರೀನ್‌ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಜತೆಗೆ ಜಾಮೀನು ಕೂಡಾ ಮಂಜೂರು ಮಾಡಿದೆ.

ಎರಡು ಪ್ರಮುಖ ಷರತ್ತು
ಖತೀಜಾ ಅವರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಕೋರ್ಟ್‌ ಎರಡು ಪ್ರಮುಖ ಷರತ್ತು ವಿಧಿಸಿದೆ.
೧. ಜಾಮೀನಿನ ಮೇಲೆ ಅರ್ಜಿದಾರೆಯನ್ನು ವಿಚಾರಣಾಧೀನ ನ್ಯಾಯಾಲಯವು ಬಿಡುಗಡೆ ಮಾಡುವಾಗ ವಿಚಾರಣೆ ಪೂರ್ಣಗೊಳ್ಳುವವರೆಗೆ ಭಟ್ಕಳ ಅಥವಾ ಸಮೀಪದ ಯಾವುದಾದರೂ ಬಂಧನ ಕೇಂದ್ರದಲ್ಲಿ ಇಡಬೇಕು.
೨. ವಿಚಾರಣಾಧೀನ ನ್ಯಾಯಾಲಯವು ಆದ್ಯತೆಯ ಮೇಲೆ ಪ್ರಕರಣವನ್ನು ತುರ್ತಾಗಿ ಇತ್ಯರ್ಥಪಡಿಸಬೇಕು.

ಜಾಮೀನು ನೀಡಿದ್ದು ಯಾಕೆ?
ಮೇಲ್ನೋಟಕ್ಕೆ ಅರ್ಜಿದಾರೆಯ ವಿರುದ್ಧ ಯಾವುದೇ ಪ್ರಕರಣವಿಲ್ಲ, ದುರದೃಷ್ಟಕರವೆಂದರೆ ದೂರುದಾರ ಪೊಲೀಸರಿಂದಾಗಿ ಅರ್ಜಿದಾರೆಯು ಬಲಪಶುವಾಗಿದ್ದಾರೆ. ಅನುಮಾನದ ಆಧಾರದಲ್ಲಿ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗದು. ಅರ್ಜಿದಾರೆಯು 1 ವರ್ಷದ 4 ತಿಂಗಳಿಂದ ಜೈಲಿನಲ್ಲಿಡಲಾಗಿದೆ. ಅರ್ಜಿದಾರೆಯ ವಿರುದ್ಧ ದೇಶದ ಭದ್ರತೆಗೆ ಧಕ್ಕೆಯಾಗುವ ಯಾವುದೇ ಆರೋಪಗಳಿಲ್ಲ. ಎರಡೂವರೆ ವರ್ಷ ಮಗುವೂ ಅರ್ಜಿದಾರೆಯ ಜೊತೆ ಜೈಲಿನಲ್ಲಿದೆ. ಹೀಗಾಗಿ, ಕಠಿಣ ಷರತ್ತುಗಳನ್ನು ವಿಧಿಸಿ, ಅವರಿಗೆ ಜಾಮೀನು ನೀಡಬಹುದಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಂದೇನು ಎಂಬ ಬಗ್ಗೆಯೂ ನಿರ್ದೇಶನ
“ಅರ್ಜಿದಾರೆಯನ್ನು ತನ್ನ ಮಾತೃ ದೇಶಕ್ಕೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ಸರ್ಕಾರ ನಿರ್ಧರಿಸುವವರೆಗೆ ಅರ್ಜಿದಾರೆಯು ತನ್ನ ಇಚ್ಛೆಯಂತೆ ದೇಶಾದ್ಯಂತ ಓಡಾಡುವಂತಿಲ್ಲ. ಅಲ್ಲಿಯವರೆಗೆ ಆಕೆಗೆ ಎಲ್ಲಾ ಸೌಲಭ್ಯ ಕಲ್ಪಿಸಿ, ಬಂಧನ ಕೇಂದ್ರದಲ್ಲಿ ಇಡಬೇಕು. ಪ್ರಕರಣದಲ್ಲಿ ಆಕೆ ಖುಲಾಸೆಗೊಂಡರೆ, ಸರ್ಕಾರವು ಆಕೆಯ ರಾಷ್ಟ್ರೀಯತೆ ನಿರ್ಧರಿಸುವ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು. ಇಲ್ಲಿ ಆಕೆಯನ್ನು ತನ್ನ ಮಾತೃ ದೇಶಕ್ಕೆ ಕಳುಹಿಸಬೇಕೆ ಎಂಬುದನ್ನು ತಿಳಿದು, ಆನಂತರ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬಹುದಾಗಿದೆ. ಅರ್ಜಿದಾರೆಯು ದೋಷಿ ಎಂದಾದರೆ, ಶಿಕ್ಷೆಯ ಅವಧಿ ಪೂರ್ಣಗೊಳಿಸಿದ ಬಳಿಕ ಆಕೆಯನ್ನು ತನ್ನ ಮಾತೃ ದೇಶಕ್ಕೆ ವರ್ಗಾಯಿಸಲು ಸಕ್ಷಮ ಪ್ರಾಧಿಕಾರವು ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಏನಿದು ಖತೀಜಾ ಮೆಹ್ರೀನ್‌ ಪ್ರಕರಣ?
ಭಟ್ಕಳದಲ್ಲಿ ಪಾಕಿಸ್ತಾನಿ ಪ್ರಜೆ ನೆಲೆಸಿದ್ದಾರೆ ಎಂಬ ಗುಪ್ತಚರ ದಳದ ಮಾಹಿತಿ ಆಧರಿಸಿ ಭಟ್ಕಳ ಪೊಲೀಸ್‌ ಠಾಣೆಯ ಪಿಎಸ್‌ಐ ಸುಮಾ ಅವರು ಖತಿಜಾ ಮೆಹ್ರೀನ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಸರ್ಚ್‌ ವಾರೆಂಟ್‌ ಪಡೆದು ಅರ್ಜಿದಾರೆಯನ್ನು ಬಂಧಿಸಿ, ಆಕೆಯಿಂದ ಏಳು ತಿರುಚಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2014ರಿಂದ ಯಾವುದೇ ವೀಸಾ ಇಲ್ಲದೇ ಅರ್ಜಿದಾರೆಯು ಭಟ್ಕಳದಲ್ಲಿ ನೆಲೆಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ವಿದೇಶಿಯರ ಕಾಯಿದೆ ಸೆಕ್ಷನ್‌ಗಳಾದ 14, 14(ಎ)(ಬಿ), ಐಪಿಸಿ ಸೆಕ್ಷನ್‌ಗಳಾದ 468, 471 ಅಡಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದ ಭಾಗವಾಗಿ ಉತ್ತರ ಕನ್ನಡದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿದಾರೆ ಜಾಮೀನು ಕೋರಿದ್ದರು. ಇದನ್ನು ನ್ಯಾಯಾಲಯವು 2022ರ ಮಾರ್ಚ್‌ 10ರಂದು ತಿರಸ್ಕರಿಸಿತ್ತು. ಹೀಗಾಗಿ, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Exit mobile version