ಬಳ್ಳಾರಿ: ನಗರದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 19.10 ಲಕ್ಷ ರೂ. ಮೌಲ್ಯದ 19 ಕೆಜಿಯಷ್ಟು ಗಾಂಜಾವನ್ನು (Ballari News) ವಶಪಡಿಸಿಕೊಳ್ಳಲಾಗಿದೆ.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿರುವ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ, ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 19.10 ಲಕ್ಷ ರು. ಮೌಲ್ಯದ 19 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಅಕ್ರಮ ಶೇಖರಣೆ ಪ್ರಕರಣದಲ್ಲಿ ನಗರದ ರಾಣಿತೋಟದ ಬೀರಪ್ಪಗುಡಿ ಹತ್ತಿರದ ನಿವಾಸಿ ವಾಹೀದ್ (38) ಹಾಗೂ ರೂಪನಗುಡಿ ರಸ್ತೆಯ ಮಾರಮ್ಮದೇವಿ ಗುಡಿ ಬಳಿಯ ಪಿ. ಚಾಂದ್ ಬಾಷಾ (40) ಅವರನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಪತ್ತೆಯಾಗಬೇಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ
ಕೂಲಿ ಕೆಲಸ ಮಾಡಿಕೊಂಡಿರುವ ಬಂಧಿತ ಇಬ್ಬರು ಆರೋಪಿಗಳ ಬಳಿ ನಾಪತ್ತೆಯಾಗಿರುವ ನಾಲ್ವರು ಗಾಂಜಾವನ್ನು ತಂದಿಡುತ್ತಿದ್ದರು. ಬಳಿಕ ಇದನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನದ ಬಳಿಕ ಈ ಪ್ರಕರಣದ ಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಎಸ್ಪಿ ಹೇಳಿದರು.
ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ರಾಯದುರ್ಗ ಕಡೆಗಳಿಂದ ಗಾಂಜಾ ಅಕ್ರಮವಾಗಿ ಬಳ್ಳಾರಿಗೆ ಪೂರೈಕೆಯಾಗುತ್ತಿರುವುದು ತನಿಖೆ ವೇಳೆ ದೃಢಪಟ್ಟಿದೆ. ಗಾಂಜಾ ಪೂರೈಕೆ ಮಾಡುವ ಒಂದು ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಗಡಿಪ್ರದೇಶದಲ್ಲಿ ಈ ರೀತಿಯ ಅಕ್ರಮ ಮಾದಕ ದ್ರವ್ಯಗಳ ಸಾಗಾಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಅವರು, ಈ ವರ್ಷದಲ್ಲಿ 13 ಗಾಂಜಾ ಪ್ರಕರಣಗಳು ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿದೆ. ಬಳ್ಳಾರಿಗೆ ಪೂರೈಕೆಯಾಗುವ ಅಕ್ರಮ ಗಾಂಜಾ ಎಲ್ಲಿ ಸರಬರಾಜಾಗುತ್ತದೆ ಎಂಬುದರ ಕಡೆ ನಿಗಾ ಇಡಲಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಪೂರೈಕೆ ಮಾಡಲಾಗುತ್ತಿದೆಯೇ ಎಂಬುದನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ಸೈಬರ್ ಕ್ರೈಂ, ಮಾದಕ ದ್ರವ್ಯ ಅಪರಾಧ ಕುರಿತು ಜಾಗೃತಿ ಮೂಡಿಸುವ ಕಾರ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 45 ಶಾಲಾ-ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ನಡೆದಿವೆ ಎಂದು ಎಸ್ಪಿ ರಂಜೀತ್ ಕುಮಾರ್ ಬಂಡಾರು ವಿವರಿಸಿದರು.
ಗಾಂಜಾ ಪ್ರಕರಣವನ್ನು ಬೇಧಿಸಿದ ಸೈಬರ್ ಹಾಗೂ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ವಿತರಿಸಿದರು.
ಇದನ್ನೂ ಓದಿ: KMH CUP: ʼಕೆಎಂಎಚ್ ಕಪ್ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ
ಈ ವೇಳೆ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಹಾಗೂ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್ ಇದ್ದರು.