Site icon Vistara News

Bharatiya Janata Party | ಬೃಹತ್‌ ನವಶಕ್ತಿ ಸಮಾವೇಶಕ್ಕೆ ಫುಲ್‌ ರೆಡಿ, ವೇದಿಕೆಯಲ್ಲೇ ವಾಲ್ಮೀಕಿ ಪುತ್ಥಳಿ

Ballary Navashakthi

ಬಳ್ಳಾರಿ: ಮುಂದಿನ ಚುನಾವಣೆಗೆ ಬಿಜೆಪಿಗೆ ಮತ್ತು ಶ್ರೀರಾಮುಲು ಅವರಿಗೆ ನವಚೈತನ್ಯ ತುಂಬುವ ಪರಿಶಿಷ್ಟ ಪಂಗಡದ ನವಶಕ್ತಿ ಸಮಾವೇಶಕ್ಕೆ ಗಣಿನಾಡಿನಲ್ಲಿ ಬೃಹತ್‌ ವೇದಿಕೆಯ ಸಿದ್ಧತೆ ಕಾರ್ಯ ಅಂತಿಮಗೊಂಡಿದೆ. ವೇದಿಕೆ ಮೇಲೆ ಥರ್ಮೋಕೋಲ್‌ನಿಂದ ನಿರ್ಮಿಸಿರುವ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಇನ್ನು ವಾಲ್ಮೀಕಿ ಸಮುದಾಯದ ಮಹಾನ್‌ ನಾಯಕರ ಕಟೌಟ್‌ಗಳನ್ನು ಸ್ಥಾಪಿಸಲಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಪ್ರದೇಶದಲ್ಲಿ ಬೃಹತ್‌ ಸಮಾವೇಶಕ್ಕೆ ವೇದಿಕೆ ಅಣಿಯಾಗಿದೆ. ಭಾನುವಾರ (ನವೆಂಬರ್‌ ೨೦) ನಡೆಯುವ ಸಮಾವೇಶದಲ್ಲಿ ೧೦ ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ವೇದಿಕೆಯ ಹಿಂದೆಯೇ ಹೆಲಿಪ್ಯಾಡ್‌
ಕಾರ್ಯಕ್ರಮಕ್ಕೆ ಆಗಮಿಸುವ ಪ್ರಮುಖ ನಾಯಕರನ್ನು ಕರೆತರಲು ವೇದಿಕೆ ಹಿಂದುಗಡೆಯೇ ಹೆಲಿಪ್ಯಾಡ್‌ ವ್ಯವಸ್ಥೆ ಮಾಡಿದ್ದಾರೆ, ಹೆಲಿಪ್ಯಾಡ್‌ನಿಂದ ವೇದಿಕೆಗೆ ಬರಲು ಅರ್ಧ ಕಿ.ಮೀ. ಪ್ರತ್ಯೇಕ ಡಾಂಬರ್‌ ರಸ್ತೆ ನಿರ್ಮಿಸಿದ್ದಾರೆ, ವೇದಿಕೆಯ ಹಿಂದುಗಡೆಯೇ ಮೆಟ್ಟಿಲು ವ್ಯವಸ್ಥೆ ಮಾಡಿದ್ದಾರೆ, ವೇದಿಕೆ ಹಿಂದುಗಡೆ ವಿವಿಐಪಿಗೆ ವಿಶ್ರಾಂತಿ ಮತ್ತು ಉಪಹಾರದ ವ್ಯವಸ್ಥೆ ಮಾಡಿದ್ದಾರೆ, ವೇದಿಕೆ ಕಾರ್ಯಕ್ರಮದ ಮುಗಿದ ನಂತರವೇ ವೇದಿಕೆಯ ಹಿಂದುಗಡೆ ಇರುವ ಹೆಲಿಪ್ಯಾಡ್‌ ಮೂಲಕವೇ ನಿರ್ಗಮಿಸಲಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಜಿಂದಾಲ್‌ನ ವಿದ್ಯಾನಗರಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಸಮಾವೇಶ ಸ್ಥಳಕ್ಕೆ ಆಗಮಿಸಲಿದ್ದಾರೆ.

ಮೂರು ವೇದಿಕೆಯ ವ್ಯವಸ್ಥೆ
ಕಾರ್ಯಕ್ರಮದಲ್ಲಿ ಮೂರು ವೇದಿಕೆಯ ವ್ಯವಸ್ಥೆ ಮಾಡಲಾಗಿದೆ. ಮಧ್ಯದ ವೇದಿಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪರಿಶಿಷ್ಟ ಪಂಗಡದ ರಾಷ್ಟ್ರೀಯ ನಾಯಕ ಅರ್ಜುನ ಮುಂಡಾ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿರುವ ಕೇಂದ್ರದ ಸಚಿವರು ಮತ್ತು ರಾಜ್ಯದ ಸಚಿವರಿಗೆ ಮೀಸಲಿಡ ಲಾಗಿದೆ. ಇನ್ನು ಪಕ್ಕದಲ್ಲಿರುವ ಒಂದು ವೇದಿಕೆಯಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸುವ ಬುಡಕಟ್ಟು, ಎಸ್‌ಟಿ ಸಮುದಾಯ ಮತ್ತು ಇತರ ಸುಮಾರು ೧೬೧ ಕಲಾ ತಂಡಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದು ವೇದಿಕೆಯಲ್ಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಇತರರಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಿದ್ದಾರೆ. ಮಳೆ ಬಂದರೂ ಸಮಸ್ಯೆಯಾಗದಂತೆ ಸಮಾವೇಶ ಅರ್ಧ ಭಾಗದ ಟೆಂಟಿನ ವ್ಯವಸ್ಥೆ ಆಗಿದೆ.

೧೧೦೦ ಜನರು ಬಾಣಸಿಗರು
ತುಮಕೂರು ಮತ್ತು ಬೆಂಗಳೂರಿನಿಂದ ಮೂರು ತಂಡದಲ್ಲಿ ಸಮಾವೇಶಕ್ಕೆ ಅಡುಗೆ ಮಾಡಲು ೧೧೦೦ ಜನರು ಬಾಣಸಿಗರು ಆಗಮಿಸಿದ್ದಾರೆ. ಸಮಾವೇಶಕ್ಕೆ ಆಗಮಿಸುವ ೫ ಲಕ್ಷ ಜನರಿಗೆ ಗೋದಿ ಹುಗ್ಗಿ, ಪಲಾವ್‌, ಕುರ್ಮಾ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪ್ಪಿಟ್ಟಿನ ಉಪಾಹಾರದ ವ್ಯವಸ್ಥೆ ಆಗಿದೆ. ಬೆಳಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೩.೩೦ರವರೆಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ನ ಊಟಕ್ಕೆ ಪ್ರತ್ಯೇಕವಾಗಿ ಬಿಜೆಪಿಯಿಂದಲೇ ೩೦೦ ಕಾರ್ಯಕರ್ತರು ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಶ್ರಮಿಸಲಿದ್ದಾರೆ. ಸುಮಾರು ೩೦೦ ಕೌಂಟರ್‌ನಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ.

ರಾಜ್ಯದ ತಂಡದಿಂದ ಉಸ್ತುವಾರಿ ಜವಾಬ್ದಾರಿ
ವಿಧಾನ ಪರಿಷತ್‌ ಸದಸ್ಯರಾದ ಕೇಶವ ಪ್ರಸಾದ್‌ ಸಮಾವೇಶದ ಸಂಯೋಜಕರಾಗಿದ್ದಾರೆ, ಪಕ್ಷದ ಅರುಣ್‌ ಮತ್ತು ಸಿದ್ದೇಶ್‌ ಯಾದವ್‌ ಸೇರಿದಂತೆ ಸುಮಾರು ೧೨ ಜನರ ತಂಡವು ಬಳ್ಳಾರಿಯಲ್ಲಿಯೇ ವಾಸ್ತವ್ಯ ಹೂಡಿ ಕಾರ್ಯಕ್ರಮಕ್ಕೆ ವಿವಿಧ ತಂಡಗಳನ್ನು ರಚನೆ ಮಾಡಿದ್ದಾರೆ. ಪ್ರತಿಯೊಂದು ಕೆಲಸಕ್ಕೆ ಮೂರಕ್ಕೂ ಹೆಚ್ಚು ಜನರನ್ನು ನಿಯೋಜನೆ ಮಾಡಲಾಗಿದೆ.

ಸುಮಾರು ೩ ಸಾವಿರ ಜನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾರ್ಯಕ್ರಮದ ಯಶಸ್ವಿ ಮತ್ತು ಅಚ್ಚುಕಟ್ಟುತನಕ್ಕೆ ಬಳಸಿಕೊಳ್ಳಲಾಗಿದೆ. ಸುಮಾರು ೩೫೭೫ ಸಾರಿಗೆ ಬಸ್‌ಗಳನ್ನು ಬಾಡಿಗೆ ಪಡೆದಿದ್ದಾರೆ, ಇನ್ನುಳಿದಂತೆ ಖಾಸಗಿ ಬಸ್‌ಗಳು ಮತ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮೈದಾನ, ಬ್ಯಾಕ್‌ ಡ್ರಾಪ್‌, ಮೈದಾನ ಬೆಳಕು, ಊಟದ ವ್ಯವಸ್ಥೆ, ಕುಡಿಯುವ ನೀರು ಸರಬರಾಜು, ಮೈದಾನ, ನಗರ ಅಲಂಕಾರ, ಪ್ರಚಾರ ಸಾಮಗ್ರಿಗಳು, ಮುದ್ರಣ, ವಾಹನ ನಿಲುಗಡೆ, ವಸತಿ, ಶೌಚಾಲಯ, ಅತಿಥಿ ಅನುಕರಣ, ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ವ್ಯವಸ್ಥೆ, ವಾಹನ ವ್ಯವಸ್ಥೆ ಸೇರಿದಂತೆ ಇತರ ಕಾರಣಗಳಿಗೆ ಪ್ರತ್ಯೇಕ ತಂಡ ರಚನೆ ಮಾಡಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಮಹಾಚೇತನಗಳ ಸ್ಮರಣೆ, ವೈಭವ
ಸಮಾಜದ ಮಹಾಚೇತನಗಳಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ವಾಲ್ಮೀಕಿ, ಬೇಡರ ಕಣ್ಣಪ್ಪ, ರಾಮನೊಂದಿಗೆ ಇರುವ ಶಬರಿ, ಮದಕರಿ ನಾಯಕ್‌, ಸುರಪುರದ ವೆಂಕಪ್ಪ ನಾಯಕ್‌, ಬಿರ್ಸಾ ಮುಂಡಾ, ಏಕಲವ್ಯ ಸೇರಿದಂತೆ ಮಹಾನ್‌ ನಾಯಕರ ಕಟೌಟ್‌ಗಳನ್ನು ಅಳವಡಿಸುವ ಮೂಲಕ ಸಮಾವೇಶಕ್ಕೆ ಧಾರ್ಮಿಕ ಮತ್ತು ಭಾವನೆಗಳ ಟಚ್‌ ಕೊಡಲು ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬಳ್ಳಾರಿ ಸೇರಿದಂತೆ ವೇದಿಕೆ ಕಾರ್ಯಕ್ರಮ ಆವರಣ ಕೇಸರಿಮಯವಾಗಿದೆ. ಇನ್ನು ಪಾಸ್‌ಗೆ ಅಳವಡಿಸಿರುವ ಟ್ಯಾಗ್‌ ಕೂಡ ಕೇಸರಿ ಬಣ್ಣದ ದಾರವನ್ನು ಬಳಸಲಾಗಿದೆ.

ಮಹಾಚೇತನಗಳ ನೆನಪು

೩ ಸಾವಿರ ಪೊಲೀಸರ ನಿಯೋಜನೆ
ಸಮಾವೇಶಕ್ಕೆ ಬಂದೋಬಸ್ತ್‌ ವ್ಯವಸ್ಥೆ ಮಾಡಲು ೨೫೦ ಅಧಿಕಾರಿಗಳು, ೨೦೦೦ ಪೊಲೀಸ್‌ ಸಿಬ್ಬಂದಿಗಳನ್ನು, ೩ ಕೆಎಸ್‌ಆರ್‌ಪಿ, ೪ ಡಿಎಆರ್‌, ೪೦೦ ಗೃಹ ರಕ್ಷಕ ದಳದವರನ್ನು ನಿಯೋಜಿಸಲಾಗಿದೆ. ಇದರಲ್ಲಿ ಸಂಚಾರಕ್ಕಾಗಿ ೬೦೦ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಇಬ್ಬರು ಎಎಸ್ಪಿ, ಆರು ಡಿವೈಎಸ್ಪಿ, ೩೦ ಸಿಪಿಐ, ೬೦ ಪಿಎಸ್‌ಐ, ೧೨೦ ಎಎಸ್‌ಐ, ೧೫೦೦ ಸಿಬ್ಬಂದಿಗಳು ನಿಯೋಜಿಸಲಾಗಿದೆ. ಬಳ್ಳಾರಿ ರೇಂಜ್‌, ಹುಬ್ಬಳ್ಳಿ-ಧಾರವಾಡ ರೇಂಜ್‌, ಕಲ್ಬುರ್ಗಿ ರೇಂಜ್‌ನಿಂದ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಎನ್‌ಸಿಸಿ ಗ್ರೌಂಡ್‌, ಐಟಿಐ ಕಾಲೇಜು ಮೈದಾನ, ಈದ್ಗಾ ಮೈದಾನ ಸೇರಿದಂತೆ ಬಹಳ ಕಡೆಗಳಲ್ಲಿ ವಾಹನಗಳ ನಿಲುಗಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ, ವಿವಿಐಪಿಗಳಿಗೆ ಮತ್ತು ಸಚಿವರ ವಾಹನಗಳಿಗೆ ಕಾರ್ಯಕ್ರಮದ ನಡೆಯುವ ಆವರಣದ ಒಳಗಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ರಂಜಿತ್‌ಕುಮಾರ್‌ ಬಂಡಾರು ಅವರು ತಿಳಿಸಿದರು.
ಈಗಾಗಲೇ ಬಿಜೆಪಿ ಪಕ್ಷ ಮತ್ತು ನಾಯಕರು ಜನರನ್ನು ಸಮಾವೇಶಕ್ಕೆ ಕರೆತರಲು ಎಲ್ಲಾ ಪ್ರಯತ್ನ ಮಾಡಿದ್ದಾರೆ. ಒಂದೊಂದು ಗ್ರಾಮಕ್ಕೆ ಬಸ್‌, ಕಾರು, ಕ್ರೂಸರ್‌ ಮತ್ತು ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ | Bharatiya Janata Party | ಬಿಜೆಪಿಗೆ ʼನವಶಕ್ತಿʼ ನೀಡಲಿದೆಯೇ ಬಳ್ಳಾರಿ ST ಸಮಾವೇಶ?

Exit mobile version