ಬೆಂಗಳೂರು: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ (Karnataka Election 2023) ಸಂಬಂಧ ಕಾಂಗ್ರೆಸ್ ಪ್ರಣಾಳಿಕೆಯನ್ನು ಮಂಗಳವಾರ (ಮೇ 2) ಬಿಡುಗಡೆ ಮಾಡಿದ್ದು, ಹಿಂದು ಸಂಘಟನೆ ನಿಷೇಧ ಬಗ್ಗೆ ಪ್ರಸ್ತಾಪ ಮಾಡಿರುವುದಕ್ಕೆ ಬಿಜೆಪಿ ಕೆಂಡಕಾರಿದೆ. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಾತನಾಡಿದ್ದು, ನಿಮ್ಮ ಅಜ್ಜಿ, ತಾತನ ಕಾಲದಲ್ಲಿ ಆರ್‌ಎಸ್‌ಎಸ್ (RSS) ಅನ್ನು ಬ್ಯಾನ್ ಮಾಡಿದ್ದಿರಿ. ಆದರೆ, ಏನೂ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈಗ ನಾವು ವಿಶ್ವದ, ದೇಶದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದಿದ್ದೇವೆ. ನಾನು ನಿಮಗೆ ಬಹಿರಂಗ ಸವಾಲನ್ನು ಹಾಕುತ್ತಿದ್ದೇನೆ. ನಿಮಗೆ ತಾಕತ್ತು ಇದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ. ನನ್ನನ್ನು ಬಂಧಿಸಿ ಎಂದು ಗುಡುಗಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿತ್ತು. ಆದರೆ, ಇವತ್ತು ಜಗತ್ತಿನ ಅತಿ ದೊಡ್ಡ ಸಂಘಟನೆ ಆರ್‌ಎಸ್‌ಎಸ್ ಆಗಿದೆ. ಆರ್‌ಎಸ್‌ಎಸ್ ವಿವಿಧ ವಿಭಾಗ ಕೆಲಸ ಮಾಡುತ್ತಿದೆ. ನಿಮ್ಮ ಅಜೆಂಡಾ ಹಿಂದುಗಳ ಹತ್ಯೆ, ಬಾಂಬ್ ಬ್ಲಾಸ್ಟ್, ಹಿಂದು ಯುವತಿಯರನ್ನು ಲವ್ ಜಿಹಾದ್ ಮಾಡುವುದಾಗಿದೆ. ಈ ರೀತಿ ಮಾಡುವವರನ್ನು ಬ್ಯಾನ್ ಮಾಡಲು ನಿಮಗೆ ಆಗುವುದಿಲ್ಲ. ನಿಮಗೆ ತಾಕತ್ತು ಇದ್ದರೆ ಬಜರಂಗದಳವನ್ನು ಬ್ಯಾನ್ ಮಾಡಿ ತೋರಿಸಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಇದನ್ನೂ ಓದಿ: Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಚ್ಚರಿಕೆ
ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ
ಬಜರಂಗದಳ ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆಯಾಗಿದೆ. ದೇಶ ವಿರೋಧಿ ಸಂಘಟನೆ ಅಲ್ಲ. ನೀವು ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲಿಡುವುದಾಗಿ ಹೇಳಿದ್ದೀರಿ. ಗೋಹತ್ಯೆ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೀರಿ. ಮತಾಂತರ ಕಾಯ್ದೆ ವಾಪಸ್ ಪಡೆಯುತ್ತೇನೆ ಎಂದು ಹೇಳುತ್ತೀರಿ. ತಾಯಿ ಎದೆ ಹಾಲು ಇಲ್ಲದಾಗ ಗೋ ಹಾಲನ್ನು ಕುಡಿಯುತ್ತೇವೆ. ಆದರೆ, ಗೋ ಹತ್ಯೆ ಕಾಯ್ದೆಯನ್ನೇ ತೆಗೆಯುತ್ತೇವೆ ಎಂದು ಹೇಳುತ್ತೀರಿ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ತಾಕತ್ತು ಇದ್ದರೆ ನನ್ನನ್ನು ಬಂಧಿಸಿ
ಕೇವಲ ಮುಸ್ಲಿಂ ಮತಗಳಲ್ಲಿ ಗೆದ್ದು ಬರುತ್ತೀರಾ? ಕಾಂಗ್ರೆಸ್‌ಗೆ ಆ ತಾಕತ್ತು ಇದೆಯಾ? ಈ ಪ್ರಣಾಳಿಕೆಯಲ್ಲಿ ಕೊಟ್ಟಿರೋದು ಕೇವಲ ಒಂದು ಧರ್ಮದ ಓಲೈಕೆ ಮಾಡಲು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಅವರನ್ನೇ ಓಲೈಕೆ ಮಾಡಿ, ಹಿಂದುಗಳ ಮತ ನಿಮಗೆ ಸಿಗುವುದಿಲ್ಲ. ಮತ್ತೊಮ್ಮೆ ಹೇಳುತ್ತೇನೆ. ತಾಕತ್ತು ಇದ್ದರೆ ನನ್ನನ್ನು ಬಂಧಿಸಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಪಿಎಫ್‌ಐನವರು ಜಮಾತೆ ಇಸ್ಲಾಂ ಜತೆ, ಐಸಿಸ್ ಜತೆ ಸಂಬಂಧ ಇಟ್ಟುಕೊಂಡಿದ್ದರು. ಶಿವಮೊಗ್ಗದಲ್ಲಿ ಎನ್ಐಎ ದಾಳಿ ನಡೆಸಿದಾಗ ಸಿಕ್ಕಿಬಿದ್ದರು. ಅವರೆಲ್ಲರ ಮೇಲೆ ಎನ್ಐಎ ವಿಚಾರಣೆ ನಡೆಸುತ್ತಿದೆ. ಯಾರೆಲ್ಲ ಬಾಂಬ್ ಬ್ಲಾಸ್ಟ್‌ನಲ್ಲಿ ಸಿಕ್ಕಿಬಿದ್ದರು. ಅವರೆಲ್ಲ ನಮ್ಮ ಅಣ್ಣ, ತಮ್ಮಂದಿರು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈಗ ದೇಶದ ವಿರುದ್ಧದ ಅಪರಾಧ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಮತ ಬ್ಯಾಂಕ್ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿರುವ ಈ ಎಲ್ಲ ಕೃತ್ಯಗಳಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾರಣ. ಕರ್ನಾಟಕವನ್ನು ಮಲಪ್ಪುರಂ ಮಾಡಲು ಬಿಡೋದಿಲ್ಲ. ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ಅದು ಹೇಗೆ ಬಜರಂಗದಳವನ್ನು ಬ್ಯಾನ್ ಮಾಡುತ್ತಾರೋ ನಾವೂ ನೋಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದನ್ನೂ ಓದಿ: Congress Manifesto : ಮೀಸಲಾತಿ ಪ್ರಮಾಣ ಶೇ. 50 ರಿಂದ ಶೇ. 75 ಕ್ಕೆ ಹೆಚ್ಚಳ; ಮುಸ್ಲಿಮರ ಶೇ.4 ಮೀಸಲು ಮರುಸ್ಥಾಪನೆ
ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಶೋಭಾ ಕರಂದ್ಲಾಜೆ ಅವರ ಆಕ್ರೋಶದ ಮಾತುಗಳಿವು
ಕಾಂಗ್ರೆಸ್‌ಗೂ ಈಗ ವಿನಾಶ ಕಾಲ ಬಂದಿದೆ
ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಗಾಧೆ ಮಾತಿದೆ. ವಿನಾಶ ಬಂದಾಗ ಬುದ್ಧಿ ಹೊಳೆಯಲ್ಲ, ವಿಪರೀತವಾಗಿ ಯೋಚನೆ ಮಾಡ್ತಾರೆ. ಕಾಂಗ್ರೆಸ್‌ಗೂ ಈಗ ವಿನಾಶ ಕಾಲ ಬಂದಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್‌ಐ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಪಿಎಫ್‌ಐ ಅನ್ನು ಬ್ಯಾನ್ ಮಾಡಲಾಗಿದೆ. ಪಿಎಫ್‌ಐ ಬಾಂಬ್ ಬ್ಲಾಸ್ಟ್ ಮಾಡಿದೆ. ಆದರೆ, ಇಂದು ಕಾಂಗ್ರೆಸ್ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಈಗಾಗಲೇ ಬ್ಯಾನ್ ಮಾಡಲಾಗಿದೆ. ಈಗ ಅವರ ಉದ್ದೇಶ ಬಜರಂಗದಳವನ್ನು ಬ್ಯಾನ್ ಮಾಡಬೇಕು ಎಂಬುದಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.