ರಾಮನಗರ: ಮಾಗಡಿಯ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಹೊಸ ತಿರುವುಗಳನ್ನು ಪಡೆದಿದೆ. ಒಂದು ಕಡೆ ಮಹಿಳೆಯೊಬ್ಬರ ಜೊತೆ ಸ್ವಾಮಿಜಿ ವಿಡಿಯೊ ಕಾಲ್ ಮೂಲಕ ಮಾತನಾಡುವ ವಿಡಿಯೊ ವೈರಲ್ ಆಗಿದೆ. ಇನ್ನೊಂದು ಕಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಅಕ್ಟೋಬರ್ ೨೪ರ ಸೋಮವಾರ ಮುಂಜಾನೆ ಬಂಡೆ ಮಠದ ಬಸವಲಿಂಗ ಶ್ರೀಗಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಡೆತ್ ನೋಟ್ ಬರೆದಿಟ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರೂ ಆತ್ಮಹತ್ಯೆಯ ಪೂರ್ಣವಿವರಗಳು ಇನ್ನೂ ಹೊರಗೆ ಬಂದಿಲ್ಲ. ತಮ್ಮನ್ನು ಒಬ್ಬ ಮಹಿಳೆಯ ಮೂಲಕ ಹನಿ ಟ್ರ್ಯಾಪ್‌ಗೆ ಬೀಳಿಸಲಾಗಿದೆ ಎಂದು ಆತ್ಮಹತ್ಯಾ ನೋಟ್‌ನ ಮೊದಲ ಪುಟದಲ್ಲಿ ಸ್ವಾಮೀಜಿ ಸ್ವಷ್ಟವಾಗಿ ಬರೆದಿದ್ದರು. ಮುಂದಿನ ಪುಟಗಳಲ್ಲಿ ಅವರು ಯಾರು, ಬೆದರಿಕೆ ಹಾಕುತ್ತಿದ್ದ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇತರರು ಯಾರು ಎನ್ನುವ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪತ್ರದಲ್ಲಿ ಬರೆದಿರುವ ಸಾಧ್ಯತೆ ಇದೆಯಾದರೂ ಎಫ್‌ಐಆರ್‌ನಲ್ಲಿ ಈ ಬಗ್ಗೆ ಹೆಚ್ಚು ವಿಚಾರಗಳನ್ನು ಉಲ್ಲೇಖಿಸಿಲ್ಲ. ಹೀಗಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವೇನಾದರೂ ನಡೆಯುತ್ತಿದೆಯಾ ಎಂಬ ಗುಮಾನಿಗಳೂ ಹುಟ್ಟಿಕೊಂಡಿವೆ.
ವಿಡಿಯೊ ವೈರಲ್
ಶ್ರೀಗಳು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಒಂದು ಪುಟ ಮಂಗಳವಾರ ವೈರಲ್ ಅದ ಬೆನ್ನಿಗೇ ಬುಧವಾರ ಶ್ರೀಗಳ ವಿಡಿಯೊ ಕಾಲ್‌ನ ಒಂದು ತುಣುಕು ವೈರಲ್ ಆಗಿದೆ. ಇದರಲ್ಲಿ ಶ್ರೀಗಳು ಒಬ್ಬ ಮಹಿಳೆಯ ಜತೆ ಮಾತನಾಡುತ್ತಿರುವಂತೆ ಹಾವ ಭಾವಗಳನ್ನು ಗುರುತಿಸಬಹುದಾಗಿದೆ. ಸ್ವಾಮೀಜಿ ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಿದ್ದು ಕೈಗಳಲ್ಲಿ ಸೂಪರ್ ಎಂಬ ಸಂಕೇತವನ್ನು ತೋರಿಸುತ್ತಿದ್ದಾರೆ. ಸ್ವಾಮೀಜಿ ತುಂಬ ಖುಷಿಯಾಗಿರುವಂತೆ ಇದರಲ್ಲಿ ಕಾಣುತ್ತದೆ. ಆದರೆ, ಆಚೆ ಕಡೆಯಿಂದ ಮಾತನಾಡುತ್ತಿರುವ ಮಹಿಳೆ ಯಾರು ಎನ್ನುವುದು ವಿಡಿಯೊದಲ್ಲಿ ಕಾಣುವುದಿಲ್ಲ. ಸುಮಾರು ಒಂದು ನಿಮಿಷದ ಈ ವಿಡಿಯೊ ಆತ್ಮಹತ್ಯೆಗೆ ಸಂಬಂಧಿಸಿ ಬೆಳಕನ್ನು ಚೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
ಆರೋಪಿಗಳ ಹೆಸರಿಲ್ಲ ಯಾಕೆ?
ಸ್ವಾಮಿಗಳ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 306ರಡಿ ಕೇಸು ದಾಖಲಾಗಿದೆ. ಎಫ್ಐಆರ್‌ನಲ್ಲಿ ಅನಾಮಧೇಯ ಹೆಸರಿನಲ್ಲಿ A1 ಆರೋಪಿ ಎಂದು ಹೇಳಲಾಗಿದೆ. ಸ್ವಾಮೀಜಿಗಳು ಡೆತ್ ನೋಟ್‌ನಲ್ಲಿ ಹಲವರ ಹೆಸರು ಉಲ್ಲೇಖ ಮಾಡಿದ್ದರೂ ಎಫ್‌ಐಆರ್‌ನಲ್ಲಿ ಒಬ್ಬರ ಹೆಸರೂ ಇಲ್ಲ! ಇದು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಆರು ತಿಂಗಳಿನಿಂದ ಖೆಡ್ಡಾಕ್ಕೆ ಬೀಳಿಸಲು ಸಂಚು?
ಸಾಕಷ್ಟು ಜನಮನ್ನಣೆ ಪಡೆದಿರುವ ಹಾಗೂ ಹಲವು ಮಠಗಳ ಅಧಿಕಾರ ಹೊಂದಿರುವ ಶ್ರೀಗಳನ್ನು ಖೆಡ್ಡಾಗೆ ಕೆಡವಲು ಆರು ತಿಂಗಳಿನಿಂದ ಕೆಲ ವ್ಯಕ್ತಿಗಳು ಕುತಂತ್ರ ಹೆಣೆಯಲಾಗಿದೆ ಎಂಬ ಮಾಹಿತಿಯೂ ಇದೆ. ಇದನ್ನು ಸ್ವಾಮೀಜಿಯೂ ಪತ್ರದಲ್ಲಿ ಬರೆದಿದ್ದರು. ಆದರೆ, ಕೊನೆಯ ಹಂತದಲ್ಲಿ ತಾನು ಸೋತೆ ಎಂಬರ್ಥದಲ್ಲಿ ಅವರ ಪತ್ರದ ಮೊದಲ ಪುಟ ಮುಗಿದಿತ್ತು. ಮುಂದಿನ ಪುಟಗಳಲ್ಲಿ ಉಳಿದ ವಿವರಗಳು ಇದ್ದವು ಎನ್ನಲಾಗಿದೆ.
ಈ ನಡುವೆ ಸ್ವಾಮೀಜಿ ಒಬ್ಬ ಮಹಿಳೆಯ ಜತೆ ಮೈಚಳಿ ಬಿಟ್ಟು ಮಾತನಾಡುತ್ತಿದ್ದರು ಎಂಬ ಸಂಶಯವಿದ್ದು, ಅದರ ಒಂದು ವಿಡಿಯೊ ಒಂದು ತಿಂಗಳ ಹಿಂದೆ ಯಾರಿಗೋ ಸಿಕ್ಕಿತ್ತು. ಅಂದಿನಿಂದ ಶ್ರೀಗಳು ಖಿನ್ನರಾಗಿದ್ದರು ಎನ್ನಲಾಗಿದೆ. ತಾನು ಆತ್ಮೀಯವಾಗಿ ಒಡನಾಡಿದ್ದ ವಿಡಿಯೊಗಳನ್ನು ಈ ರೀತಿ ಹರಿಯಬಿಡುತ್ತಿದ್ದಾರೆ ಎಂದರೆ ತಮ್ಮನ್ನು ಟ್ರ್ಯಾಪ್‌ಗೆ ಬೀಳಿಸಲಾಗಿದೆ ಎಂದು ತಿಳಿಯುತ್ತಿದ್ದಂತೆಯೇ ಖಿನ್ನಗೊಂಡರು ಎನ್ನಲಾಗಿದೆ. ಇದೀಗ ಶ್ರೀಗಳು ಬಳಸುತ್ತಿದ್ದ ಎರಡು ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಒಂದು ವರ್ಷದ ಕಾಲ್ ಡಿಟೇಲ್ಸ್ ತೆಗೆದು ತನಿಖೆ ನಡೆಸುತ್ತಿದ್ದಾರೆ.
ಸ್ವಾಮೀಜಿಗೆ ಹತ್ತಿರದವರೇ ಖೆಡ್ಡಾ ತೋಡಿದರೇ?
ವೈರಲ್ ವಿಡಿಯೊದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸ್ವಾಮೀಜಿಗೆ ಹತ್ತಿರ ಇದ್ದವರೇ ವಿಡಿಯೊ ವೈರಲ್ ಮಾಡಿದ್ದಾರಾ? ಹಣಕಾಸು, ಜಮೀನು ವಿಚಾರದಲ್ಲಿ ಮೊದಲಿನಿಂದಲೂ ಗಲಾಟೆಯಾಗುತ್ತಿತ್ತು ಅನ್ನುವ ಆರೋಪ ಕೇಳಿಬಂದಿವೆ. ಸ್ವಾಮೀಜಿ ಅವರ ಬಳಿಯೇ ಆಪ್ತರಾಗಿದ್ದವರು ಈ ರೀತಿ ಮೋಸದ ಜಾಲದಲ್ಲಿ ಸಿಲುಕಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕೆ ಶಿಕ್ಷೆಯಾಗೋದು ಖಚಿತ ಅಂತ ಮಠದ ಭಕ್ತರಾಗಿರುವ ರುದ್ರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಏಳು ಮಂದಿ ವಶದಲ್ಲಿ
ಬಸವಲಿಂಗ ಸ್ವಾಮಿ ಶ್ರೀಗಳ ವೈರಲ್ ಆಗಿರೋ ವಿಡಿಯೊ ಆಧರಿಸಿ ಅನುಮಾನಿತ ಮೂವರು ಮಹಿಳೆಯರನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣ ಒಟ್ಟು 7 ಮಂದಿಯನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಠದಲ್ಲಿ ಲಿಂಗಾಯತ ಮುಖಂಡರ ಸಭೆ
ಬಸವಲಿಂಗ ಶ್ರೀಗಳ ಆರಾಧನಾ ಕಾರ್ಯಕ್ರಮ ನಡೆಸುವ ಸಂಬಂಧ ಬುಧವಾರ ಮಠದ ಆವರಣದಲ್ಲಿ ಲಿಂಗಾಯತ ಮುಖಂಡರು ಸಭೆ ನಡೆಸಿದ್ದಾರೆ. ನವೆಂಬರ್ 3ರಂದು ಶ್ರೀಗಳ 11 ನೇ ದಿನದ ಪುಣ್ಯತಿಥಿ ನಡೆಯಲಿದ್ದು, ಕಾರ್ಯಕ್ರಮದ ಉಸ್ತುವಾರಿಯನ್ನ ಬೆಂಗಳೂರಿನ ಬಿನ್ನಿಮಿಲ್ ಗುರುವಣ್ಣದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿ ಅವರಿಗೆ ವಹಿಸಲಾಗಿದೆ. ಪುಣ್ಯತಿಥಿ ಬಳಿಕ ಮಠದ ಮುಂದಿನ ಉತ್ತರಾಧಿಕಾರಿ ನೇಮಕ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ | Seer suicide note | ಬಂಡೆ ಮಠದ ಶ್ರೀಗಳು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಆ ಮಹಿಳೆ ಯಾರು?