Site icon Vistara News

Bangalore- Chennai Expressway: ಬೆಂಗಳೂರಿನಿಂದ ಚೆನ್ನೈಗೆ 2 ಗಂಟೆಯಲ್ಲಿ ರಸ್ತೆ ಪ್ರಯಾಣ? ನಿತಿನ್ ಗಡ್ಕರಿ ಹೇಳಿದ್ದೇನು?

nitin gadkari highways

ಚೆನ್ನೈ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು (Bangalore- Chennai Expressway) ಈ ವರ್ಷಾಂತ್ಯ ಅಥವಾ ಜನವರಿ 2024ರೊಳಗೆ ಪ್ರಾರಂಭಿಸಲಾಗುವುದು. ಎರಡು ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ ಎರಡು ಗಂಟೆಗಳಿಗೆ ಇಳಿಸಲು ಇದು ನಿರ್ಣಾಯಕ ದಾರಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಅಶೋಕ್ ಲೇಲ್ಯಾಂಡ್‌ ಸಂಸ್ಥೆಯ 75ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತಾಡಿದರು. “ನಾನು ಇಂದು ಚೆನ್ನೈನಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ್ದೇನೆ. ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಈ ವರ್ಷಾಂತ್ಯ ಅಥವಾ ಜನವರಿ 2024ರ ವೇಳೆಗೆ ಪ್ರಾರಂಭವಾಗಲಿದೆ. ಈ ವಲಯದಲ್ಲಿ ಐಷಾರಾಮಿ ಬಸ್‌ಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಪ್ರಾರಂಭಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಅವರು ಅಶೋಕ್ ಲೇಲ್ಯಾಂಡ್‌ನ IeV ಸರಣಿಯ ವಾಹನಗಳನ್ನು ಬಿಡುಗಡೆ ಮಾಡಿದರು. ಇವು ಭಾರತದ ಮೊದಲ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಾಗಿವೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಹೆಚ್ಚಿನ ಅವಶ್ಯಕತೆಯಿದೆ ಎಂದವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ನಾವು ಉತ್ತಮ ರಸ್ತೆಗಳನ್ನು ಕಟ್ಟುತ್ತಿದ್ದೇವೆ. ದೆಹಲಿಯಿಂದ ಚೆನ್ನೈ, ಸೂರತ್, ನಾಸಿಕ್, ಅಹಮದ್‌ನಗರ, ಕರ್ನೂಲ್, ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ, ಬೆಂಗಳೂರು, ಹೈದರಾಬಾದ್‌ಗಳಿಗೆ ಪ್ರವೇಶ ನಿಯಂತ್ರಿತ ಹೆದ್ದಾರಿ ಯೋಜನೆಗಳ ಮೂಲಕ ಸಂಪರ್ಕಿಸುತ್ತಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವೇಗದ ಬಗ್ಗೆ ತನಗೆ ತೃಪ್ತಿಯಿದೆ. ಚೆನ್ನೈ ಬಂದರು-ಮಧುರವಾಯಲ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಯೋಜನೆಯ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸಾರಿಗೆ ಸಚಿವಾಲಯವು ದೆಹಲಿ ಮತ್ತು ಜೈಪುರ ನಡುವೆ ವಿದ್ಯುತ್ ಕೇಬಲ್ ಹೆದ್ದಾರಿಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದರು.

ಅಶೋಕ್ ಲೇಲ್ಯಾಂಡ್ ಮತ್ತಿತರ ವಾಹನ ಸಂಸ್ಥೆಗಳು ಜೈವಿಕ ಇಂಧನಗಳನ್ನು ಅಥವಾ ಇ-ವಾಹನಗಳಂತಹ ಪರ್ಯಾಯ ಶಕ್ತಿಯನ್ನು ಬಳಸುವ ವಾಹನಗಳನ್ನು ದೊಡ್ಡ ರೀತಿಯಲ್ಲಿ ಉತ್ಪಾದಿಸಬೇಕು. ಆ ಮೂಲಕ ಐದು-ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಕೇಂದ್ರಕ್ಕೆ ಸಹಾಯ ಮಾಡಬೇಕು ಎಂದು ಅವರು ಕರೆ ನೀಡಿದರು.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ವಾಯುಯಾನ ಇಂಧನಕ್ಕಾಗಿ ಜೈವಿಕ-ಎಥೆನಾಲ್ ಆಧಾರಿತ ಇಂಧನವನ್ನು ಉತ್ಪಾದಿಸುತ್ತಿದೆ. ಶೀಘ್ರದಲ್ಲೇ, ತಮಿಳುನಾಡಿನ ರೈತರು ಆಹಾರ ಧಾನ್ಯಗಳಿಂದ ಎಥೆನಾಲ್ ಇಂಧನವನ್ನು ಉತ್ಪಾದಿಸಲು ಸಹಾಯ ಮಾಡಬಹುದು ಎಂದು ಸಚಿವರು ಹೇಳಿದರು.

ನಾನು 2004ರಿಂದ ಕೃಷಿಯನ್ನು ಇಂಧನ ಮತ್ತು ವಿದ್ಯುತ್ ವಲಯಕ್ಕೆ ಜೋಡಿಸುವ ಕೆಲಸ ಮಾಡುತ್ತಿದ್ದೇನೆ. ಹತ್ತು ದಿನಗಳ ಹಿಂದೆ ನಾನು 100 ಪ್ರತಿಶತ ಜೈವಿಕ-ಎಥೆನಾಲ್ ವಾಹನವನ್ನು ಲೋಕಾರ್ಪಣೆ ಮಾಡಿದೆ. ಬೆಂಗಳೂರಿನಲ್ಲಿ ಮೆಥನಾಲ್ ಮಿಶ್ರಿತ ಇಂಧನದಿಂದ ಚಲಿಸಬಲ್ಲ ಅಶೋಕ್ ಲೇಲ್ಯಾಂಡ್‌ನ ವಾಹನವನ್ನು ಬಿಡುಗಡೆ ಮಾಡಿದ್ದೇನೆ. ಭಾರತದಲ್ಲಿ ಮೆಥನಾಲ್ ಟ್ರಕ್‌ಗಳ ಉತ್ಪಾದನೆಯಾಗಬೇಕು ಎಂಬುದು ನನ್ನ ಕನಸು ಎಂದರು.

ಹೈಡ್ರೋಜನ್ ಭವಿಷ್ಯದ ಪರ್ಯಾಯ ಇಂಧನ. ಪಳೆಯುಳಿಕೆ ಇಂಧನದ ಆಮದು ಆರ್ಥಿಕತೆ ಮತ್ತು ಮಾಲಿನ್ಯದ ದೃಷ್ಟಿಯಿಂದ ದೇಶಕ್ಕೆ ದೊಡ್ಡ ಸಮಸ್ಯೆ. ಜೈವಿಕ ಇಂಧನಗಳನ್ನು ಅನ್ವೇಷಿಸುವುದು, ಬಳಸಿಕೊಳ್ಳುವುದು ಅತ್ಯಗತ್ಯ. ಮೂರರಿಂದ ನಾಲ್ಕು ವರ್ಷಗಳಲ್ಲಿ ಇದು ಸಾರಿಗೆಯ ವೆಚ್ಚವನ್ನು ಒಂದಂಕಿಗೆ ತಗ್ಗಿಸುತ್ತದೆ. ಪ್ರಸ್ತುತ ಅದು ಶೇ.16ರಷ್ಟಿದೆ. ಇದು ಭಾರತವನ್ನು ರಫ್ತಿನಲ್ಲಿಯೂ ಸಮರ್ಥ ದೇಶವಾಗಿ ಮಾಡುತ್ತದೆ ಎಂದರು.

ಇದನ್ನೂ ಓದಿ: Nitin Gadkari: ‘ರಾಜಕೀಯದಿಂದಲೇ ನಿವೃತ್ತನಾಗುವೆ’; ಚುನಾವಣೆ ಮೊದಲೇ ನಿತಿನ್‌ ಗಡ್ಕರಿ ಹೀಗೆ ಹೇಳಿದ್ದೇಕೆ?

Exit mobile version