ಮಂಡ್ಯ: ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿರುವ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇಗೆ (Bangalore- Mysore Express way) ಇನ್ನೂ ನಾಮಕರಣ ಆಗಿಲ್ಲ, ತೀರ್ಮಾನವೂ ಆಗಿಲ್ಲ. ಆದರೆ, ಕಾವೇರಿ ಎಕ್ಸ್‌ಪ್ರೆಸ್ ಎಂದು ಹೆಸರಿಡುವುದು ಸೂಕ್ತ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.
ಎಕ್ಸ್‌ಪ್ರೆಸ್ ವೇಗೆ ಹೆಸರಿಡುವ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ವ್ಯಕ್ತಿಗಳ ಹೆಸರನ್ನು ಸೂಚಿಸುತ್ತಿದ್ದಾರೆ. ಅದನ್ನೇ ಇಡಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಆದರೆ, ಇಡೀ ದೇಶದಲ್ಲಿ ಯಾವುದೇ ಹೆದ್ದಾರಿಗೆ ವ್ಯಕ್ತಿ ಹೆಸರಿಟ್ಟ ಉದಾಹರಣೆ ಇಲ್ಲ. ನಗರದ ರಸ್ತೆಗಳಿಗೆ ವ್ಯಕ್ತಿಗಳ ಹೆಸರಿಟ್ಟಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಎಕ್ಸ್‌ಪ್ರೆಸ್ ಹೆದ್ದಾರಿಗೆ ಗಂಗಾ, ಯಮುನಾ ನದಿಗಳ ಹೆಸರು ಇಡಲಾಗಿತ್ತು ಎಂದು ನೆನಪಿಸಿದ್ದಾರೆ ಪ್ರತಾಪ್ ಸಿಂಹ.
ʻʻನದಿಗಳು ಪವಿತ್ರ ಮತ್ತು ಸುಭಿಕ್ಷಕ್ಕೆ ಕಾರಣ ಎಂಬ ನೆಲೆಯಲ್ಲಿ ಅವುಗಳ ಹೆಸರಿಡಲಾಗುತ್ತದೆ. ಮಂಡ್ಯ,, ಮೈಸೂರು, ಬೆಂಗಳೂರು ಸುಭಿಕ್ಷವಾಗಿರಲು ಕಾವೇರಿ ತಾಯಿ ಕಾರಣ. ಈ ನಗರಗಳನ್ನು ಬೆಸೆಯುವ ಕೊಂಡಿಯೂ ಕಾವೇರಿ ನೀರು. ಅದಕ್ಕಾಗಿ ಕಾವೇರಿ ಹೆಸರಿಡಲು ಸೂಚಿಸಿದ್ದೇನೆʼʼ ಎಂದು ಹೇಳಿದರು.
ʻʻಕೆಲವರು ನಾಲ್ವಡಿ ಕೃಷ್ಣರಾಜರ ಹೆಸರು ಹೇಳುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜರ ಹೆಸರು ಮೈಸೂರು ಏರ್‌ಪೋರ್ಟ್‌ಗೆ ಇಡುತ್ತಿದ್ದೇವೆ. ಮೈಸೂರು ಏರ್‌ಪೋರ್‌ಟ್ ವಿಶ್ವ ದರ್ಜೆಗೆ ಸೇರುವ ಸವಲತ್ತುಗಳನ್ನು ಹೊಂದಲಿದೆ. ಇದಕ್ಕಾಗಿ 319 ಕೋಟಿ ರೂ. ನೀಡಲಾಗಿದೆ. ರೈಲ್ವೆ ಸ್ಟೇಷನ್‌ಗೆ ಹಳಿ ಹಾಕಲು ಪ್ರಾರಂಭಿಸಿದ್ದು ಚಾಮರಾಜ ಒಡೆಯರು. ಹಾಗಾಗಿ ರೈಲ್ವೆ ಸ್ಟೇಷನ್‌ಗೆ ಅವರ ಹೆಸರು ನಾಮಕರಣ ಮಾಡಲಾಗಿದೆʼʼ ಎಂದು ವಿವರಿಸಿರುವ ಪ್ರತಾಪ್ ಸಿಂಹ, ʻʻಅನಗತ್ಯ ಗೊಂದಲ ಬೇಡ. ಎಲ್ಲರೂ ಒಪ್ಪಿಗೆ ಕೊಟ್ಟರೆ ಎಕ್ಸ್‌ಪ್ರೆಸ್ ವೇಗೆ ಕಾವೇರಿ ಹೆಸರು ಇಡೋಣ ಎಂದಿದ್ದಾರೆ.
ಸಿದ್ದರಾಮಯ್ಯ ಟೀಮ್ ವೀಕ್ಷಣೆ ಜಾಲಿ ರೈಡ್!
ಸಿದ್ದರಾಮಯ್ಯ ಮತ್ತು ಅವರ ತಂಡ ಅಯೋಜಿಸಿರುವ ಹೆದ್ದಾರಿ ವೀಕ್ಷಣೆಯನ್ನು ಜಾಲಿ ರೈಡ್‌ಗೆ ಹೋಲಿಸಿದ್ದಾರೆ ಪ್ರತಾಪಸಿಂಹ.
ʻʻವೀಕ್ಷಣೆಗೂ ಜಾಲಿರೇಡ್ ಗೂ ಬಹಳ ವ್ಯತ್ಯಾಸ ಇದೆ. ಕಾಮಗಾರಿ ಪ್ರಗತಿಯಲ್ಲಿದ್ದಾಗ ನ್ಯೂನತೆಗಳ, ಲೋಪಗಳು ಇದೆಯಾ ಎಂದು ಪರಿಶೀಲನೆ ನಡೆಸಿದರೆ ಅದು ವೀಕ್ಷಣೆ. ರೋಡ್ ಕಂಪ್ಲೀಟ್ ಹಾಗಿ ಉದ್ಘಾಟನೆಗೆ ಮುನ್ನಾ ದಿನ ನಡೆಸುವುದು ಜಾಲಿ ರೈಡ್ʼʼ ಎಂದರು.
ʻʻನಿಜವಾಗಿಯೂ ಎಕ್ಸ್‌ಪ್ರೆಸ್ ವೇಗೆ ಅವರ ಕೊಡುಗೆ ಇದ್ದಿದ್ದರೆ ಕಾಮಗಾರಿ ವೇಳೆ ವೀಕ್ಷಣೆಗೆ ಬರ್ತಿದ್ರು. ಆವಾಗ ಅವೈಜ್ಞಾನಿಕತೆ ಬಗ್ಗೆ ಸಿದ್ದರಾಮಯ್ಯ ಆಗಲಿ, ಮಹಾದೇವಪ್ಪ ಮಾತನಾಡಿಲ್ಲ. ನೀರು ತುಂಬಿದಾಗ ಮಾತನಾಡಿಲ್ಲ.
ಕುಮಾರಣ್ಣ ಬಂದು ಈಜು ಹೊಡಿ ಅಂದಾಗ ಮಾತನಾಡಿಲ್ಲ. ಆವಾಗಲಾದರೂ ಅವರು ಅವೈಜ್ಞಾನಿಕವಾಗಿ ಮಾಡಿದ್ದೇವೆ ಅಂತ ಹೇಳಬಹುದಿತ್ತು. ಇವತ್ತು ಬರುತ್ತಿದ್ದಾರೆ ಅಂದ್ರೆ ಅದು ಜಾಲಿ ರೇಡ್ ಗೆ ಬರ್ತಾರೆ ಅಷ್ಟೆʼʼ ಎಂದರು ಪ್ರತಾಪ್ ಸಿಂಹ.
ಇದನ್ನೂ ಓದಿ : Bangalore Mysore Expressway : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 6 ಮೇನ್ ಲೇನ್, 2 ಸರ್ವೀಸ್ ರಸ್ತೆ