Site icon Vistara News

Bangalore-Mysore Expressway: ಮರಣ ಮಾರ್ಗವಾಗಿದ್ದ ಹೆದ್ದಾರಿ ಈಗ ಸೇಫ್‌ ; ಅಪಘಾತಗಳ ಸಂಖ್ಯೆ ಭಾರಿ ಇಳಿಕೆ

Bangalore Mysore expressway

ರಾಮನಗರ: ಕೆಲವೇ ತಿಂಗಳ ಹಿಂದೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore-Mysore Expressway) ಎಂದರೆ ಮರಣ ಮಾರ್ಗ ಎಂಬಷ್ಟು ಭಯ ಸೃಷ್ಟಿಯಾಗಿತ್ತು. ನಿತ್ಯವೆಂಬಂತೆ ಅಪಘಾತಗಳು ಸಂಭವಿಸಿ ಸಾವು ನೋವುಗಳು ನಿರಂತರವಾಗಿದ್ದವು. ಆದರೆ, ಈಗ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ (Accident Cases coming down) ಹೆದ್ದಾರಿ ಸಂಚಾರ ಸುರಕ್ಷಿತ (Safe Journey now) ಎನಿಸುವಂತಿದೆ. ಇದಕ್ಕೆ ಕಾರಣ ಪೊಲೀಸರು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 12ರಂದು ಎಕ್ಸ್‌ಪ್ರೆಸ್‌ ವೇಯನ್ನು ಉದ್ಘಾಟಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಂತರ ಈ ಮಾರ್ಗದಲ್ಲಿ ಹಲವು ಅಪಘಾತಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ರೀತಿ ಅಪಘಾತಗಳು ಸಂಭವಿಸುತ್ತಿವೆ ಎಂದು ಆಪಾದಿಸಲಾಯಿತು. ಆದರೆ, ಯಾರೂ ಅದನ್ನು ಸರಿಪಡಿಸಲು ಮುಂದಾಗಲಿಲ್ಲ.

ಈಗ ಹೆದ್ದಾರಿಯಲ್ಲಿ ಇಂಥ ದೃಶ್ಯಗಳು ಕಾಣಿಸುತ್ತಿಲ್ಲ

ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ ಹೆದ್ದಾರಿಯ ಸಂಚಾಯ ನಿಯಮಗಳ ಬಗ್ಗೆ ಅಧ್ಯಯನ ನಡೆಸಿತು. ಹೆದ್ದಾರಿಯಲ್ಲಿ ಅತಿವೇಗದ ಸಂಚಾರ, ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ಮಾಡಬಾರದ ಲಘು ವಾಹನಗಳ ಸಂಚಾರದಿಂದಲೇ ಅಪಾಯ ಸಂಭವಿಸುತ್ತಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಎಡಿಜಿಪಿ ಅಲೋಕ್‌ ಕುಮಾರ್‌ ನೇತೃತ್ವದ ಪೊಲೀಸ್‌ ತಂಡ ಹೆದ್ದಾರಿಯ ಅಧ್ಯಯನ ನಡೆಸಿ ಸುರಕ್ಷತೆಗೆ ಏನೇನು ಕ್ರಮ ಕೈಗೊಳ್ಳಬಹುದು ಎಂದು ಪಟ್ಟಿ ಮಾಡಿತು. ಅದರ ಪ್ರಮುಖ ಅಂಶವೇ ಹೆದ್ದಾರಿಯಲ್ಲಿ ವೇಗ ಮಿತಿ.

ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನಗಳು ಅತಿಯಾದ ವೇಗದಿಂದ ಸಂಚರಿಸುತ್ತಿರುವುದೇ ಅಪಘಾತಕ್ಕೆ ಮೂಲ ಕಾರಣ ಎಂದು ತಿಳಿದುಕೊಂಡ ಪೊಲೀಸ್‌ ಇಲಾಖೆ ಯಾವುದೇ ವಾಹನ 100 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗುವಂತಿಲ್ಲ ಎಂಬ ನಿಯಮವನ್ನು ಜಾರಿ ಮಾಡಿತು. ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ವಾಹನಗಳ ವೇಗವನ್ನು ಗಮನಿಸಿ ನೋಟ್‌ ಮಾಡಿಕೊಳ್ಳುವ ಕ್ಯಾಮೆರಾಗಳನ್ನು ಅಳವಡಿಸಲಾಯಿತು (ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಈ ವ್ಯವಸ್ಥೆಯ ಪರಿಶೀಲನೆ ನಡೆಸಿದರು).

ಈ ನಡುವೆ ಹೆದ್ದಾರಿಯಲ್ಲಿ ಬೈಕ್‌, ಆಟೋ ರಿಕ್ಷಾ, ಟ್ರಾಕ್ಟರ್‌ ಮತ್ತಿತರ ವಾಹನಗಳ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಈ ನಿಯಮ ಆಗಸ್ಟ್‌ ಒಂದರಿಂದ ಜಾರಿಗೆ ಬಂದಿದೆ. ಇಂಥ ಕೆಲವು ಕಠಿಣ ಕ್ರಮಗಳ ಮೂಲಕ ಅಪಘಾತ ಸಂಖ್ಯೆ ಇಳಿಕೆಯಾಗಿದೆ ಎಂದು ಸ್ವತಃ ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಮೇ, ಜೂನ್‌ ಮತ್ತು ಜುಲೈನಲ್ಲಿ ನಡೆದ ಅಪಘಾತಗಳ ಹೋಲಿಕೆ ಮಾಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೇ ತಿಂಗಳಿನಲ್ಲಿ ನಡೆದ ಅಫಘಾತಗಳಲ್ಲಿ ಒಟ್ಟು 29 ಮಂದಿ ಪ್ರಾಣ ಕಳೆದುಕೊಂಡಿದ್ದರು. ಜೂನ್‌ ತಿಂಗಳಲ್ಲಿ ಈ ಸಂಖ್ಯೆ 28 ಆಗಿತ್ತು. ಆದರೆ ಈ ಸಂಖ್ಯೆ ಜುಲೈ ತಿಂಗಳ ಹೊತ್ತಿಗೆ ಕೇವಲ 8ಕ್ಕೆ ಇಳಿದಿದೆ. ರಾಮನಗರ ವ್ಯಾಪ್ತಿಯಲ್ಲಿ 3, ಮಂಡ್ಯ ವ್ಯಾಪ್ತಿಯಲ್ಲಿ 5 ಮಂದಿ ಸಾವು ಸಂಭವಿಸಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅಪಘಾತ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆ ಪೊಲೀಸ್ ಸಿಬ್ಬಂದಿಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೇಗ ಮಿತಿ ಏರಿಸಲು ಚಿಂತನೆ

ಈ ನಡುವೆ ಮುಂದಿನ ದಿನಗಳಲ್ಲಿ ಅಪಘಾತ ಸಂಖ್ಯೆ ಮತ್ತಷ್ಟು ಇಳಿಮುಖ ಆದ್ರೆ ವೇಗ ಮಿತಿ ಏರಿಕೆಗೆ ಚಿಂತನೆ ಇದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಇದು ನಿಜವಾದರೆ ಈಗ ಇರುವ ಪ್ರತಿ ಗಂಟೆಗೆ 100 ಕಿಮೀ ವೇಗಮಿತಿ 120ಕಿ.ಮೀಗೆ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : Bangalore-Mysore Expressway: ಅತಿ ವೇಗದ ವಾಹನಗಳ ಮೇಲೆ ಕಣ್ಣಿಡಲು ಎಐ ಕ್ಯಾಮೆರಾಗಳ ಅಳವಡಿಕೆ

Exit mobile version