ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (Bangalore-Mysore Highway) ಕಾಮಗಾರಿ ಪೂರ್ಣಗೊಳ್ಳುವುದರೊಳಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೆದ್ದಾರಿ ಭಾಗದಲ್ಲಿ ಬರುವಂತಹ ಸರ್ವಿಸ್ ರಸ್ತೆ ಸಹ ಪೂರ್ಣ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಕಣಮಿಣಕಿ ಟೋಲ್ ಫ್ಲಾಜಾಗೆ ಮುತ್ತಿಗೆ ಹಾಕಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಹೆದ್ದಾರಿಗೆ ಬರುವ ವಾಹನಗಳನ್ನು ತಡೆದು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ರಸ್ತೆಯಲ್ಲಿಯೇ ಕುಳಿತ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗ್ಗೆಯೇ ಟೋಲ್ ಫ್ಲಾಜಾ ಬಳಿ ಜಮಾಯಿಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸರ್ವಿಸ್ ರಸ್ತೆಯ ಅವಾಂತರಗಳ ಫೋಟೊ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾಮಗಾರಿ ಪೂರ್ಣವಾಗುವವರೆಗೆ ಟೋಲ್ ಸಂಗ್ರಹ ಮಾಡುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Dharma Dangal : ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಳದ ಜಾತ್ರೆ ವಿಷಯದಲ್ಲಿ ಶುರುವಾಯಿತು ವ್ಯಾಪಾರ ದಂಗಲ್
ಈ ಕಾರಣಕ್ಕಾಗಿ ಮೈಸೂರು ಕಡೆಗೆ ಹೋಗುವ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ವಾಹನಗಳಿಗೆ ಅಡ್ಡಲಾಗಿ ನುಗ್ಗಿ ಸಂಚಾರಕ್ಕೆ ತಡೆಯುಂಟು ಮಾಡಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವನ್ನೇ ಪಡೆಬೇಕಾಯಿತು. ನಿಖಿಲ್ ಕುಮಾರಸ್ವಾಮಿ ಹಾಗೂ ಮಾಗಡಿ ಶಾಸಕ ಎ.ಮಂಜುನಾಥ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು. ಪ್ರತಿಭಟನಾಕಾರರ ನಿಯಂತ್ರಣಕ್ಕಾಗಿ ಸುಮಾರು 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಒಂದು ಹಂತದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯ ತಳ್ಳಾಟ, ನೂಕಾಟ ನಡೆದಿದೆ.
ಲೋಕಾರ್ಪಣೆಯಾಗಿದೆಯಾ? ಇಲ್ಲವೇ ಟೋಲಾರ್ಪಣೆ ಆಗಿದ್ಯಾ?- ನಿಖಿಲ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಟೋಲ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಇಲ್ಲಿ ಹೆದ್ದಾರಿ ಲೋಕಾರ್ಪಣೆ ಆಗಿದೆಯಾ ಅಥವಾ ಟೋಲಾರ್ಪಣೆ ಆಗಿದೆಯಾ ಎಂದು ಜನರು ಕೇಳುತ್ತಲಿದ್ದಾರೆ. ಸರ್ವಿಸ್ ರಸ್ತೆ ಓಪನ್ ಆಗಿಲ್ಲ. ತರಾತುರಿಯಲ್ಲಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
120 ಕಿ.ಲೋ. ಮೀಟರ್ ಪ್ರಯಾಣಿಸುವವರು 120 ರೂಪಾಯಿ ಕಟ್ಟಬೇಕು. ಸ್ಥಳೀಯ ಊರುಗಳಿಗೆ ಹೋಗುವವರೂ ಕೂಡ ಇಷ್ಟು ಕಟ್ಟಬೇಕಾ? ಇದು ಯಾವ ನ್ಯಾಯ? ದೊಡ್ಡ ಮಟ್ಟದಲ್ಲಿ ಸ್ವಚ್ಛ ಭಾರತ ಎಂದು ಬಿಜೆಪಿಯವರು ಹೇಳುತ್ತಾರೆ. ಈ ಟೋಲ್‌ನಲ್ಲಿ ಹಾಗೂ ರಸ್ತೆಯಲ್ಲಿ ಶೌಚಾಲಯ ಎಲ್ಲಿದೆ? ಆರ್ಥಿಕವಾಗಿ ಶಕ್ತಿ ಇಲ್ಲದವರು ಈ ರಸ್ತೆಯಲ್ಲಿ ಓಡಾಡಬಾರದಾ? ಎಂದು ನಿಖಿಲ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: CT Ravi: ಸಿ.ಟಿ. ರವಿ ವಿರುದ್ಧ ಸಿಡಿದ ವೀರಶೈವ-ಲಿಂಗಾಯತ ಸಮುದಾಯ; ಕ್ಷಮೆ ಕೇಳದಿದ್ದರೆ ವಾರದಲ್ಲಿ ಮುತ್ತಿಗೆ ಎಚ್ಚರಿಕೆ
ಜನಸಾಮಾನ್ಯರ ಆಕ್ರೋಶ ಹೇಗಿತ್ತು?
ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾತನಾಡುತ್ತಾ, ಮನೆ ಗೃಹಪ್ರವೇಶ ಆದಷ್ಟು ಖುಷಿಯಾಯಿತು ಎಂದು ಹೇಳುತ್ತಾರೆ. ನಿಮ್ಮ ಮನೆ ನಿಮ್ಮ ದುಡ್ಡಲ್ಲಿ ಕಟ್ಟಿದ್ದೀರಾ? ಈ ಟೋಲ್ ಜನಸಾಮಾನ್ಯರ ದುಡ್ಡಲ್ಲಿ ಕಟ್ಟಿರೋದು. ತಾಂತ್ರಿಕ ಸಮಸ್ಯೆ ಸರಿಯಾಗುವವರೆಗೂ ಟೋಲ್ ಕಟ್ಟಬಾರದು ಎಂದು ಹೇಳಿದರು.