ಬೆಂಗಳೂರು: ರಾಜಧಾನಿಯ ಜನಜೀವನವನ್ನು ಮಹಾಮಳೆ ದುರ್ಭರಗೊಳಿಸಿದೆ. ಬೆಳ್ಳದೂರು ಕೆರೆ ಕೋಡಿ ಒಡೆದು ಹರಿಯುತ್ತಿದ್ದು, ಸುತ್ತಮುತ್ತಲಿನ ಲೇಔಟ್‌ಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಸರ್ಜಾಪುರ ರಸ್ತೆ ಮುಳುಗಡೆಯಾಗಿ ಟ್ರಾಫಿಕ್ ನಿಲುಗಡೆ ಸ್ಥಿತಿಗೆ ಬಂದಿದ್ದು, ಹಲವಾರು ಕಡೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಳ್ಳಂದೂರು ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಬೆಳ್ಳಂದೂರು ಇಕೋ ಸ್ಪೇಸ್ ಬಳಿ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಿದ್ದು, ಪ್ರತಿ ಗಂಟೆಗೂ ನೀರಿನ ಮಟ್ಟ ಏರುತ್ತಿದೆ. ಸುತ್ತಲಿನ ಕೆರೆ ನೀರು ಕೋಡಿ ಒಡೆದು ನೀರು ಹೊರಗೆ ಸುರಿಯುತ್ತಿದೆ. ಬೆಳ್ಳಂದೂರು ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳು ಮುಚ್ಚುಗಡೆಯಾಗಿವೆ. ರಸ್ತೆ ಬಳಿಯ ಹೋಟಲ್ ಹಾಗೂ ಅಂಗಡಿಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಹೋಟೆಲ್ ಸಾಮಾಗ್ರಿಗಳೆಲ್ಲ ಸಂಪೂರ್ಣ ಜಲಾವೃತವಾಗಿದ್ದು, ಮಾಲಿಕರಿಗೆ ಭಾರಿ ನಷ್ಟವಾಗಿದೆ.
ಬೆಳ್ಳಂದೂರು ಬಳಿಯ ಮಸ್ಜಿದ್ ಇ ಬಿಲಾಲ್ ಮಸೀದಿಗೆ ರಾಜಕಾಲುವೆ ನೀರು ನುಗ್ಗಿದ್ದು, ಎದೆ ಭಾಗದ ತನಕ ನೀರು ನಿಂತಿದೆ. ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ರಾಜಕಾಲುವೆ ನೀರಿಗೆ ಮಸೀದಿ ಒಳಗಿದ್ದ ಕುರಾನ್ ಸೇರಿದಂತೆ ಸುಮಾರು ೧೦ ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಕಂಪ್ಯೂಟರ್, ಮದರಸ ಮಕ್ಕಳ ಪುಸ್ತಕಗಳು ರಾಜಕಾಲುವೆ ನೀರಿಗೆ ಆಹುತಿಯಾಗಿವೆ. ಟ್ರಾಕ್ಟರ್ ಮೂಲಕ ಮದರಸ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ನಿನ್ನೆ ೨೦ ಮಕ್ಕಳ ರಕ್ಷಣೆ ಮಾಡಲಾಗಿತ್ತು.
ನೆರೆ ಪೀಡಿತ ಪ್ರದೇಶಗಳಲ್ಲಿ NDRF ಕಾರ್ಯಾಚರಣೆ ನಡೆಸುತ್ತಿದ್ದು, ಹಿರಿಯ ನಾಗರಿಕರನ್ನು, ಮಹಿಳೆಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ. ಕರಿಯಮ್ಮ ಅಗ್ರಹಾರ, ಹಳೆ ವಿಮಾನ ನಿಲ್ದಾಣ ರಸ್ತೆ, ಯಮಲೂರುಗಳಲ್ಲಿ ರೋಗಿಗಳು, ವೃದ್ಧರನ್ನು ಮನೆಯಿಂದ ಹೊರಗೆ ಕರೆತಂದು NDRF ತಂಡ ರಕ್ಷಿಸಿದೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಹಾದೇವಪುರ, ಬೊಮ್ಮನಹಳ್ಳಿ, ಕೆ.ಆರ್ ಪುರಂ ಭಾಗದ ಸರ್ಕಾರಿ, ಸರ್ಕಾರಿ ಅನುದಾನಿತ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ವಾಹನಗಳ ಓಡಾಟಕ್ಕೆ ತೊಂದರೆ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಕೆ.ಆರ್ ಪುರಂ ಡಿಡಿಪಿಐ ಮಾಹಿತಿ ನೀಡಿದ್ದಾರೆ.
ರಾಮಯ್ಯ ನಾರ್ತ್ ಸಿಟಿ ಲೇಔಟ್ ಬ್ಲಾಕ್
ನಾಗವಾರ ಬಳಿ ಇರುವ ಪ್ರತಿಷ್ಠಿತ ರಾಮಯ್ಯ ನಾರ್ತ್ ಸಿಟಿ ಲೇಔಟ್‌ನಲ್ಲಿ ಹೊರ ಬರಲಾಗದ ಸ್ಥಿತಿ ಉಂಟಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯಿಂದ ಹೊರ ಬರಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಪಕ್ಕದಲ್ಲೆ ಇರುವ ರಾಜಕಾಲುವೆ ಕೂಡ ಬಹುತೇಕ ತುಂಬಿದ್ದು, ಆತಂಕ ಉಂಟಾಗಿದೆ.