Site icon Vistara News

ಕ್ಲಬ್‌ ಹೌಸ್‌ನಲ್ಲಿ ಪಾಕ್‌ ಸ್ವಾತಂತ್ರ್ಯ ದಿನಾಚರಣೆ, ಭಾರತ ವಿರುದ್ಧ ಕೆಟ್ಟ ಮಾತು, ಬೆಂಗಳೂರ ಟೆಕ್ಕಿಗಳ ವರ್ತನೆಗೆ ಆಕ್ರೋಶ

pakistani flag

ಬೆಂಗಳೂರು: ನಮ್ಮ ನಡುವೇ ಇದ್ದುಕೊಂಡು, ನಮ್ಮ ದೇಶದಲ್ಲೇ ಇದ್ದುಕೊಂಡು ದೇಶದ್ರೋಹ ಮಾಡುವ ಜನರಿಗೆ ಏನು ಹೇಳಬೇಕು? ಇಂಥ ಸ್ಯಾಡಿಸ್ಟ್‌ ಮನೋಭಾವದ ಜನ ನಮ್ಮದೇ ಬೆಂಗಳೂರಿನಲ್ಲಿ ಇದ್ದಾರೆ ಎನ್ನುವುದು ಇನ್ನೂ ಬೇಸರ ಮತ್ತು ಆತಂಕ ತರುವ ಸಂಗತಿ.

ದೇಶದ ಜನ, ಕರ್ನಾಟಕದ ನಾಗರಿಕರು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಅಚರಿಸಲು ಅಣಿಯಾಗುತ್ತಿರುವ ನಡುವೆಯೇ ಕೆಲವು ಕಿಡಿಗೇಡಿಗಳು ಆಗಸ್ಟ್‌ ೧೪ರಂದು ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಈ ವಿಕೃತರು ಪಾಕಿಸ್ತಾನಕ್ಕೆ ಜಿಂದಾಬಾದ್‌ ಎಂದಿದ್ದಾರೆ. ಜತೆ ಭಾರತಕ್ಕೆ ಮುರ್ದಾಬಾದ್‌ ಎಂದು ಹೇಳಿದ್ದಾರೆ.

ಸೌರಭ್‌, ರಿಕ್ಕಿ, ರೋಲೆಕ್ಸ್‌, ನ್ಯೂ, ಡಿ ಸ್ನೂಪ್‌ ಮೊದಲಾದ ಹೆಸರಿನಲ್ಲಿರುವ ಒಟ್ಟು ಹತ್ತು ಅಕೌಂಟ್‌ಗಳನ್ನು ಕ್ಲಬ್‌ ಹೌಸ್‌ ಗೆ ಸೇರಿ ಚರ್ಚೆ ನಡೆಸಲಾಗಿತ್ತು. ನಿಜವೆಂದರೆ, ಇವರೆಲ್ಲೂ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು. ಇವರು ಆಗಸ್ಟ್‌ ೧೪ರಂದು ಪಾಕಿಸ್ತಾನದ ರಾಷ್ಟ್ರಗೀತೆ ಹಾಕಿ ಸಂಭ್ರಮಿಸಿದ್ದಾರೆ.

ಇವರೆಲ್ಲರೂ ಪಾಕಿಸ್ತಾನದ ಧ್ವಜವನ್ನು ತಮ್ಮ ಡಿಪಿಯಾಗಿ ಮಾಡಿಕೊಂಡಿದ್ದರು. ಜತೆಗೆ ಯಾರೆಲ್ಲ ಮಾತನಾಡಲು ಬಯಸುತ್ತಾರೋ ಅವರೆಲ್ಲರೂ ಕಡ್ಡಾಯವಾಗಿ ಪಾಕಿಸ್ತಾನದ ಧ್ವಜವನ್ನು ಡಿಪಿಯಾಗಿ ಮಾಡಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿತ್ತು ಎಂದು ತಿಳಿದುಬಂದಿದೆ. ಪಾಕಿಸ್ತಾದ ಪರವಾಗಿ ಜಿಂದಾಬಾದ್‌ ಘೋಷಣೆ ಕೂಗಿದ ಇವರು, ಭಾರತದ ವಿರುದ್ಧ ಅಪಮಾನಕಾರಿ ಪದ ಬಳಸಿದ್ದಾರೆ.

ಕರ್ನಾಟಕ ಮೂಲದ ಟೆಕ್ಕಿಗಳೇ!
ನಿಜವೆಂದರೆ, ಇವರೆಲ್ಲ ಪಾಕಿಸ್ತಾನ ಮೂಲದವರೂ ಅಲ್ಲ. ವಿದೇಶಿಯರೂ ಅಲ್ಲ. ಹೋಗಲಿ ಉತ್ತರ ಭಾರತದವರೇ ಅಂದರೆ ಅವರೂ ಅಲ್ಲ. ಇವರು ಪಕ್ಕಾ ಕರ್ನಾಟಕದವರು. ಕನ್ನಡದಲ್ಲಿ ಅಶ್ಲೀಲವಾಗಿ ಮಾತನಾಡುತ್ತಾ ದೇಶದ್ರೋಹದ ಕೃತ್ಯ ನಡೆಸಿದ್ದಾರೆ. ಇವರು ಮಾಡಿರುವ ಕೃತ್ಯ ಉಗ್ರವಾದಕ್ಕೆ ಸಮವಾಗಿದೆ. ಇನ್ನು ಈ ಆಡಿಯೊ ,ಫೋಟೊಗಳು ವೈರಲ್ ಆಗುತ್ತಿದ್ದಂತೆ ಇದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುವ ಕರ್ನಾಟಕ ಮೂಲದ ಟೆಕ್ಕಿಗಳೇ ಎಂದು ಹೇಳಲಾಗುತ್ತಿದೆ. ಈ ನಡುವೆ, ದೇಶದ್ರೋಹಿ ಕೃತ್ಯ ನಡೆಸಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದೆ. ಶಿಲ್ಪಾ ಎಂಬವರು ಈ ಬಗ್ಗೆ ವಿಡಿಯೊ ಮಾಡಿ ಹೇಳಿಕೆ ನೀಡಿದ್ದಾರೆ.

ಪೊಲೀಸರಿಂದ ಪರಿಶೀಲನೆ
ಮಾನ್ಯತಾ ಟೆಕ್ ಪಾರ್ಕ್ ಪ್ರದೇಶ ಈಶಾನ್ಯ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ| Explainer: ದೇಶದ್ರೋಹ ಕಾಯಿದೆಯ ಸುತ್ತಮುತ್ತ

Exit mobile version