ಬೆಂಗಳೂರು: ನಮ್ಮ ರಾಜಧಾನಿ ಬೆಂಗಳೂರು ದೇಶದ ಎರಡನೇಯ ಅತಿದೊಡ್ಡ ವಾಹನ ದಟ್ಟಣೆ ಇರುವ ನಗರ ಎನಿಸಿಕೊಂಡಿದ್ದು, ಟ್ರಾಫಿಕ್ ನರಕವಾಗುವತ್ತ (Bangalore Traffic) ಹಾಗೂ ಮತ್ತಷ್ಟು ವಾಯುಮಾಲಿನ್ಯಕ್ಕೆ (Air pollution, Bangalore Pollution) ತುತ್ತಾಗುವತ್ತ ಶೀಘ್ರವಾಗಿ ಹೆಜ್ಜೆ ಹಾಕುತ್ತಿದೆ.
ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ದೊಡ್ಡ ಗಂಡಾಂತರವೇ ಕಾದಿದೆ ಎನ್ನಲಾಗುತ್ತಿದೆ. ಟ್ರಾಫಿಕ್ ಸಮಸ್ಯೆಯ ಜೊತೆಗೆ ದೆಹಲಿಯಂತೆ ಬೆಂಗಳೂರು ಸಹ ʼಪೊಲ್ಯೂಷನ್ ಸಿಟಿʼ ಆಗುವುದು ಖಚಿತವಾಗಿದೆ. ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನ ವಾಯು ಮಾಲಿನ್ಯ ಮಟ್ಟವೂ ಭಾರೀ ಏರಿಕೆಯಾಗಿದೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಶೇ.20ರಷ್ಟು ಏರಿಕೆಯಾಗಿದ್ದು, ಬೆಂಗಳೂರಿನ ರಸ್ತೆಗಳ ಸಾಮರ್ಥ್ಯಕ್ಕೂ ಮೀರಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇಷ್ಟಿದ್ದರೂ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರೀ ಅಂತರವಿದ್ದು, ಇನ್ನಷ್ಟು ವಾಹನಗಳಿಗೆ ಬೇಡಿಕೆಯಿದೆ.
ಕಳೆದ ವರ್ಷ 2023ರಲ್ಲಿ ಪ್ರತಿ ತಿಂಗಳು ಸರಾಸರಿ 56,124 ವಾಹನಗಳು ನೋಂದಣಿಯಾಗಿವೆ. ಪ್ರತಿ ತಿಂಗಳು 13 ಸಾವಿರ ಹೊಸ ಕಾರುಗಳು, 29 ಸಾವಿರ ಹೊಸ ಬೈಕುಗಳು ಬೆಂಗಳೂರಿನಲ್ಲಿ ನೊಂದಣಿಯಾಗುತ್ತಿವೆ. ಬೆಂಗಳೂರಿನಲ್ಲಿ ಈಗ ಇರುವ ಒಟ್ಟು ವಾಹನಗಳ ಸಂಖ್ಯೆ 1,14,28,331. ಇಲ್ಲಿ 23,51,437 ಕಾರ್‌ಗಳಿದ್ದು, 76,77,541 ಬೈಕ್‌ಗಳು ಇವೆ. ದೆಹಲಿಯಲ್ಲಿ ಒಟ್ಟು 1,42,04,810 ವಾಹನಗಳಿದ್ದು, ಅಲ್ಲಿ ಹೊಸ ನೋಂದಣಿ ಪ್ರಮಾಣ ಇಳಿಕೆಯಾಗಿದೆ.
ಬೆಂಗಳೂರಿಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದಲೂ ಭಾರೀ ಪ್ರಮಾಣದಲ್ಲಿ ವಾಹನಗಳು ಆಗಮಿಸುತ್ತಿವೆ. ಬೆಂಗಳೂರಿನ 1 ಕೋಟಿ ವಾಹನಗಳ ಜೊತೆಗೆ ನಿತ್ಯ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ 15 ಲಕ್ಷ ವಾಹನಗಳು ಎಂಟ್ರಿಯಾಗುತ್ತಿವೆ. ಇದರಿಂದ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ವಾಹನಗಳ ಸಂಖ್ಯೆ ಹೀಗೆ ಏರಿಕೆಯಾದಲ್ಲಿ ಪ್ರತಿ ಚಿಕ್ಕ ಸಿಗ್ನಲ್ ಅನ್ನೂ ದಾಟಲು ಕನಿಷ್ಠ 15 ನಿಮಿಷ ಬೇಕಾಗಲಿದೆ. ದೊಡ್ಡ ಸಿಗ್ನಲ್ ದಾಟಲು ಸರಾಸರಿ 22 ನಿಮಿಷಗಳ ಅವಶ್ಯಕತೆ ಇದೆ ಎಂದು ಐಐಎಸ್‌ಸಿ ಹೇಳಿದೆ.
ವಾಯು ಮಾಲಿನ್ಯ ಹೆಚ್ಚಳ
ವಾಹನಗಳ ಪ್ರಮಾಣ ಅನುಸರಿಸಿ ಪರಿಸರ ಮಾಲಿನ್ಯದಲ್ಲಿಯೂ ಏರಿಕೆಯಾಗಿದೆ. ಕಳೆದ ಎರಡು ತಿಂಗಳಿಂದ ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯುಐ) 100-200 ಇದೆ. ಮುಂದಿನ ದಿನಗಳಲ್ಲಿ ಎಕ್ಯುಐ ಪ್ರಮಾಣ 250-300ರ ವರೆಗೂ ಹೋಗುವ ಸಾಧ್ಯತೆ ಇದೆ.
ಗಾಳಿ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ಪ್ರಕಾರ 0-50 ನಡುವೆ ಇದ್ದರೆ ಉತ್ತಮ, 51-100 ನಡುವೆ ಇದ್ದರೆ ಸಮಾಧಾನಕರ, 101-200 ನಡುವೆ ಇದ್ದರೆ ಮಧ್ಯಮ, 201-300 ಇದ್ದರೆ ಕಳಪೆ ಹಾಗೂ 301-400 ತುಂಬಾ ಕಳಪೆ.
ಸಿಲಿಕಾನ್ ಸಿಟಿಯಲ್ಲಿ ಶೇ. 50ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳೇ ಕಾರಣವಾಗಿವೆ. ವಾಹನಗಳು ಹೊರಬಿಡುವ ಕಾರ್ಬನ್ ಮೊನಾಕ್ಸೈಡ್‌ನಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಹೊಸದಿಲ್ಲಿಗೆ ಹೋಲಿಸಿದರೆ ಬೆಂಗಳೂರಿನ ವಾಯು ಗುಣಮಟ್ಟ ಈಗ ಅಷ್ಟೇನೂ ಅಪಾಯಕಾರಿ ಮಟ್ಟ ತಲುಪಿಲ್ಲವಾದರೂ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಮಿತಿಮೀರುತ್ತಿರುವ ಕಟ್ಟಡ ಕಾಮಗಾರಿಯಿಂದಾಗಿ ಮಾಲಿನ್ಯ ಪ್ರಮಾಣ ಜಾಸ್ತಿಯಾಗುವ ಆತಂಕ ಎದುರಾಗಿದೆ.
ಇದರಿಂದ ನಗರದ ಜನತೆಯ ಆರೋಗ್ಯದ ಮೇಲೆ ದುಷ್ಪ್ರಭಾವ ಉಂಟಾಗಲಿದೆ. ಅಕ್ಟೋಬರ್‌ನಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮಾಲಿನ್ಯ ಹೆಚ್ಚಾಗಿದೆ. ಗಾಳಿಯ ಗುಣಮಟ್ಟ ಹದಗೆಟ್ಟಿದ್ದು ಉಸಿರಾಟದ ಸಮಸ್ಯೆ ತಲೆದೋರುತ್ತಿದೆ. ತ್ವಚೆಯ ಅಲರ್ಜಿ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ.
ಇದನ್ನೂ ಓದಿ: Air pollution: ದಿಲ್ಲಿ ಮಾತ್ರವಲ್ಲ, ಭಾರತದ ಇನ್ನೂ ಎರಡು ನಗರಗಳ ವಾಯು ವಿಶ್ವದಲ್ಲೇ ಅತಿ ಕಳಪೆ