Site icon Vistara News

ಜನಗಣಮನವನ್ನು ಅವಮಾನಿಸಿದ ಬರಗೂರು ರಾಮಚಂದ್ರಪ್ಪ?: ಕಾದಂಬರಿಯ ಪದ್ಯ ವೈರಲ್‌

baraguru ramachandrappa 1

ಬೆಂಗಳೂರು: ಮೂರು ತಿಂಗಳ ಹಿಂದೆ ರಾಜ್ಯದೆಲ್ಲೆಡೆ, ನಾಡಗೀತೆಗೆ ಅವಮಾನದ ವಿಚಾರ ಚರ್ಚೆಯಾಗಿತ್ತು. ಪ್ರೊ, ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿಯ ಪಠ್ಯವನ್ನು ಪರಿಷ್ಕರಿಸಿದ್ದ ಲೇಖಕ ರೋಹಿತ್‌ ಚಕ್ರತೀರ್ಥ ವಿರುದ್ಧ ಈ ಆರೋಪ ಕೇಳಿಬಂದಿತ್ತು.

ರೋಹಿತ್‌ ಚಕ್ರತೀರ್ಥ ಅವರು ಹಿಂದೊಮ್ಮೆ ನಾಡಗೀತೆಯನ್ನು ತಿರುಚಿ ಅವಮಾನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಪ್ರೊ, ಬರಗೂರು ರಾಮಚಂದ್ರಪ್ಪ ಅವರೇ ಕಾದಂಬರಿಯೊಂದರಲ್ಲಿ ರಾಷ್ಟ್ರಗೀತೆ ಜನಗಣಮನವನ್ನು ಅವಮಾನಿಸಿದ್ದಾರೆ, ಗಂಗೆಯನ್ನು ಹಾದರಕ್ಕೆ ಹೋಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಟ್ವಿಟರ್‌ನಲ್ಲಿ ಕೆಲವರು ಪೋಸ್ಟ್‌ ಹಾಕಿಕೊಂಡಿದ್ದಾರೆ. ಪ್ರೊ. ಬರಗೂರು ರಾಮಚಂದ್ರಪ್ಪ ಅವರು ತಮ್ಮ ʻಭರತನಗರಿʼ ಕಾದಂಬರಿಯಲ್ಲಿ ಪದ್ಯವೊಂದನ್ನು ಬರೆದಿದ್ದಾರೆ.

ಇದನ್ನೂ ಓದಿ | ನನ್ನನ್ನು ತೇಜೋವಧೆ, ಹಣಿಯುವ ಪ್ರಯತ್ನ ಬೇಡ: ರೋಹಿತ್‌ ಚಕ್ರತೀರ್ಥ ಮನವಿ

ಈ ಕುರಿತು ವಿಶ್ಲೇಷಣೆ ಮಾಡಿರುವ ಪುಸ್ತಕದ ಹಾಳೆಯೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

“ಜನಗಣಮನ ಜಡಭಾರತ ಜಯಹೇ
ಬಡವರ ಬಾಳಿನ ಭೂತ
ನಂಜುಳ್ಳ ಸಿಂಧು ಸವಿಮಾತ ಸಪೋಟ
ವೈಭವ ಉತ್ಕಟ ಮಂಗ
ಸತ್ಯ ಸಮಾನತೆ ಹಾದರ ಗಂಗಾ
ಕಚ್ಚೆಯ ಬಿಚ್ಚಿದರಂಗ”

ಈ ಟ್ವೀಟ್‌ನಲ್ಲಿ ಜನಗಣಮನವನ್ನು ತಿರುಚಿರುವುದಲ್ಲದೆ, ಗಂಗಾ, ಮಂಗ ಎಂಬ ಪ್ರಾಸಗಳ ಮೂಲಕವೂ ಅವಮಾನಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರ

ರಾಜಶಾಹಿ ವ್ಯವಸ್ಥೆಯನ್ನು ಅಣಕಿಸಲು ಮುಂದಾಗುವ ಕಾದಂಬರಿಯಲ್ಲಿ, ಪ್ರಾಮಾಣಿಕತೆಯೆಂದರೆ ಏನು ಎಂಬ ಹುಡುಕಾಟ ನಡೆಯುತ್ತದೆ. ಅದು ಹೆಣ್ಣೋ, ಗಂಡೋ ಎಂದು ಶೋಧಿಸಿ ಕೊನೆಯಲ್ಲಿ ಒಬ್ಬ ಯುವಕನನ್ನು ಹಿಡಿದು ತರುತ್ತಾರೆ. ಕಾರಣ, ಅವನು ಪ್ರಾಮಾಣಿಕ ಎಂದು ಜನ ಹೇಳಿದ್ದರಿಂದ. ಮೇಲಿನ ಪದ್ಯವನ್ನು ಹೇಳುವ ಯುವಕ ಸಾವನ್ನಪ್ಪಿತ್ತಾನೆ. ಆದರೆ ಬೆಳಗ್ಗೆ ಪತ್ರಿಕೆಗಳಲ್ಲಿ, ರಾತ್ರೋರಾತ್ರಿ ಸ್ವಾತಂತ್ರ್ಯ ಸೌಧದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕ ನೆಲಕ್ಕಪ್ಪಳಿಸಿ ಸಾವನ್ನಪ್ಪಿದರು ಎಂಬ ಸುದ್ದಿ ಪ್ರಕಟವಾಗುತ್ತದೆ ಎಂದು ಕಾದಂಬರಿಯಲ್ಲಿ ತಿಳಿಸಲಾಗಿದೆ ಎಂಬ ಹಾಳೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ | ನಾಡಗೀತೆಗೆ ಅವಮಾನ ಮಾಡಿದವರ ವಿರುದ್ಧ ತಡಮಾಡದೇ ಕ್ರಮ ಕೈಗೊಳ್ಳಿ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಆಗ್ರಹ

Exit mobile version