ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮುಕ್ತಾಯವಾದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಹುಮಾನದ ಚೆಕ್ ಬೌನ್ಸ್ ಆಗಿರುವುದರಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಚೆಕ್ ವಾಪಸ್ ಬಂದರೂ ಬ್ಯಾಂಕ್ ಖಾತೆಯಲ್ಲಿ ಹಣ ಕಡಿತವಾಗಿರುವುದಕ್ಕೆ ಕಲಾವಿದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಅ.26 ರಂದು ಮೈಸೂರಿನ ಹವ್ಯಾಸಿ ಛಾಯಾಚಿತ್ರಗಾರ ಎನ್.ಜಿ. ಸುಧೀರ್‌ಗೆ 7 ಸಾವಿರ ರೂ. ಬಹುಮಾನದ ಚೆಕ್ ನೀಡಲಾಗಿತ್ತು. ಅ.27 ರಂದು ಸುದೀರ್ ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಅ.30ರಂದು ಚೆಕ್ ವಾಪಸ್ ಆಗಿದೆ. ಈ ವೇಳೆ ಅಕೌಂಟ್‌ನಿಂದ 118 ರೂ. ಕಟ್ ಮಾಡಲಾಗಿದೆ.
ಇದನ್ನೂ ಓದಿ | Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಜಿ. ಸುಧೀರ್, ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118 ರೂ. ದಂಡ ಬಿದ್ದಿದೆ. ಇಂತಹ ಬೇಜಾವ್ದಾರಿತನ ಏಕೆ? ತಮ್ಮಂತೆ ಸಾಕಷ್ಟು ಕಲಾವಿದರಿಗೆ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.
ದಸರಾ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಕಲಾವಿದರಿಗೆ ನೀಡಿದ್ದ ಬಹುಮಾನದ ಚೆಕ್‌ಗಳು ನಗದಾಗಿ ಪರಿವರ್ತನೆ ಆಗದೆ ವಾಪಸ್ ಆಗುತ್ತಿವೆ. ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ. ಉಪಸಮಿತಿಯ ಈ ಹಿಂದಿನ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಸಹಿಗಳೇ ಚೆಕ್ ಮೇಲೆ ಇದ್ದಿದ್ದರಿಂದ ಚೆಕ್ ಬೌನ್ಸ್ ಆಗಿವೆ ಎನ್ನಲಾಗಿದೆ. ಚೆಕ್ ವಾಪಸ್ ಆಗಿರುವುದು ತಿಳಿದುಬರುತ್ತಿದ್ದಂತೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Politics : ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್. ರಾಜಣ್ಣ
ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಆಕ್ರೋಶ
ಕಲಾವಿದರಿಗೆ ನೀಡಿದ್ದ ಚೆಕ್ ಬೌನ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದಸರಾ ಹಬ್ಬದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಕಲಾವಿದರಿಗೆ ಮಾಡಿದ ಅವಮಾನ. ಗಾಯದ ಮೇಲೆ ಬರೆ ಇಟ್ಟಂತೆ ಬೌನ್ಸ್ ಆದ ಚೆಕ್ ಬ್ಯಾಂಕ್‌ಗೆ ನೀಡಿದ್ದಕ್ಕೆ ಕಲಾವಿದರಿಗೆ ಬ್ಯಾಂಕ್ ದಂಡ ಹಾಕಿದೆ. ದಸರಾ ಹಾಗೂ ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಉತ್ತರದಾಯಿತ್ವವಿಲ್ಲದೆ, ಬೇಜವಾಬ್ದಾರಿ ವರ್ತನೆಯಿಂದ ಕೆಲಸ ಮಾಡುವವರಿಗೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿ. ಉಸ್ತುವಾರಿ ಸಚಿವರ ದುರಾಡಳಿತದಿಂದ ದಸರಾ ಸಂಭ್ರಮದಲ್ಲಿ ವಿದ್ಯುತ್ ಬೇಲಿ ಹಾರಿ ಬಂದು ಭದ್ರತಾ ವೈಫಲ್ಯವೆಸಗಿದ್ದು, ಈಗ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ನೀಡಿ ಸರಣಿ ವೈಫಲ್ಯಗಳು ಆಗಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.