Site icon Vistara News

basavaraj patil yatnal | ಕೂಡಲ ಸಂಗಮ ಸ್ವಾಮೀಜಿ ಬಿಟ್ಟರೆ ಉಳಿದವರೆಲ್ಲ ಬುಕ್ಕಿಂಗ್ ಸ್ವಾಮಿಗಳು ಎಂದ ಯತ್ನಾಳ್‌

basanagowda pateel yatnala

ವಿಜಯಪುರ: ಕೂಡಲ ಸಂಗಮ ಸ್ವಾಮೀಜಿ ಅವರೊಬ್ಬರನ್ನು ಬಿಟ್ಟರೆ ಉಳಿದ ಸ್ವಾಮೀಜಿಗಳೆಲ್ಲ ಬುಕ್ಕಿಂಗ್‌ ಸ್ವಾಮೀಜಿಗಳು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ (basavaraj patil yatnal) ಲೇವಡಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಗಳವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಬೃಹತ್‌ ಸಮಾವೇಶದಲ್ಲಿ ಯತ್ನಾಳ ಅವರು ಈ ಹೇಳಿಕೆ ನೀಡಿದ್ದಾರೆ. ಉಳಿದ ಸ್ವಾಮಿಗಳು ದುಡ್ಡು ಹೊಡೆದು ಫೈವ್ ಸ್ಟಾರ್ ಮಠ ಕಟ್ಟಿಕೊಂಡು ಕುಳಿತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ʻʻಪಂಚಮಸಾಲಿ ಸಮಾಜದ 2A ಮೀಸಲಾತಿಗೆ ಕೆಲವು ಸ್ವಾಮೀಜಿಗಳು ಅಡ್ಡಗಾಲು ಹಾಕುತ್ತಿದ್ದಾರೆ,ʼʼ ಎಂದು ಹೇಳಿದ ಯತ್ನಾಳ್‌, ಹೋರಾಟದ ದಿಕ್ಕು ತಪ್ಪಿಸಲು ಹರಿಹರದ ಸ್ವಾಮೀಜಿ ಷಡ್ಯಂತ್ರ ಮಾಡಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ʻʻನಾವೇನು ಇನ್ನೂ ದನ ಕಾಯೋರಾ? ನಿಮ್ಮ ಜಾಗೃತಿ ಸಭೆ ಉದ್ದೇಶ ನಮಗೆಲ್ಲ ಗೊತ್ತಾಗಿದೆ. ಇದಕ್ಕೆಲ್ಲ ಒಬ್ಬ ಕಾಟಾ ಹೊಡೆದು ದುಡ್ಡು ಕೊಡುವನಿದ್ದಾನೆ. ಇವರೆಲ್ಲಾ ಸಭೆ ಮಾಡ್ತಾ ಇದ್ದಾರೆʼʼ ಎಂದು ಪರೋಕ್ಷವಾಗಿ ಮುರುಗೇಶ ನಿರಾಣಿ ಬಗ್ಗೆಯೂ ಲೇವಡಿ ಮಾಡಿದ್ದಾರೆ. ಯತ್ನಾಳ ಲೇವಡಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೂ ಇಪ್ಪತ್ತು ವರ್ಷ ಏನೂ ಮಾಡೊಕಾಗಲ್ಲ!
ʻʻನನ್ನನ್ನು ಇನ್ನೂ ಇಪ್ಪತ್ತು ವರ್ಷ ಯಾರೂ ಏನು ಮಾಡೋಕೆ ಆಗಲ್ಲ. ಯಾರೋ ವಿಜಯಪುರದಲ್ಲಿ ಈ ಬಾರಿ ಸೋಲಿಸ್ತೀವಿ ಅಂದ್ರು. ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನನ್ನು ಸೋಲಿಸಲಿ ಎಂದು ಚಾಲೆಂಜ್‌ ಹಾಕಿದ್ದೇನೆʼʼ ಎಂದು ಯತ್ನಾಳ್ ಹೇಳಿದರು. ʻʻಯಾರನ್ನು ಸೋಲಿಸ್ತೀರಿ ಬದನೆಕಾಯಿʼʼ ಎಂದು ವ್ಯಂಗ್ಯವಾಡಿದರು.

ʻʻವಿಜಯಪುರ ನೆಮ್ಮದಿಯಿಂದ ವ್ಯಾಪಾರ ಮಾಡ್ತಾ ಇದ್ರೆ, ನಮ್ಮ ಹಿಂದೂ ಹೆಣ್ಮಕ್ಕಳು ನೆಮ್ಮದಿಯಿಂದ ಓಡಾಡುತ್ತಿದ್ದರೆ ಅದಕ್ಕೆ ಕಾರಣ ನಾನು ಎಂಎಲ್‌ಎ ಆಗಿರುವುದು. ಯಾವ್ನೋ ಸಿನೆಮಾ ನಟ ಹೇಳ್ತಿರ್ತಾನಲ್ಲ… ಕಂಟ್ರೋಲ್ ಕಂಟ್ರೋಲ್ ಕಂಟ್ರೋಲ್ ಅಂತ. ಹಾಗೆ ವಿಜಯಪುರ ನನ್ನ ಕಂಟ್ರೋಲ್‌ನಲ್ಲಿ. ನನ್ನ ವಿಜಯಪುರ ಗಟ್ಟಿಯಾಗಿದೆ. ಹೀಗಾಗಿ ನಾನು ಇಂಡಿ, ಸಿಂದಗಿಗೆ ಹೋಗಿ ಸ್ಪರ್ಧಿಸಲ್ಲ. ಈ ಬಾರಿ ಚುನಾವಣೆಯಲ್ಲಿ 20 ಸಾವಿರ ಲೀಡ್ ನಿಂದ ಗೆದ್ದು ಬರ್ತೀನಿʼʼ ಎಂದು ಹೇಳಿದರು ಯತ್ನಾಳ್‌.

ʻʻವಿಜಯಪುರ ಪಾಲಿಕೆ ಎಲೆಕ್ಷನ್‌ನಲ್ಲಿ ನಮ್ಮ ಸಮಾಜದ ಶಕ್ತಿ ಕಡಿಮೆ ಮಾಡಲು ಬೆಂಗಳೂರಿನಿಂದ ಒಬ್ಬ ಒಂದುವರೆ ಕೋಟಿ ಕಳುಹಿಸಿದ್ದ. ಮುಧೋಳದಿಂದ ಒಬ್ಬ ಎರಡುವರೆ ಕೋಟಿ ಕಳುಹಿಸಿದ. ಎಲ್ಲಾ ಕಡೆ ಆಟೊ ರಿಕ್ಷಾ ನಿಲ್ಲಿಸಿದ್ರು, ಅಭ್ಯರ್ಥಿಗಳಿಗೆ ೨೦ ಲಕ್ಷ ರೂ. ಕೊಟ್ರು.‌ ಆದರೆ ಎಲ್ಲಾ ತಳ ಜಾಡಿಸಿ ಸ್ವಚ್ಛ ಮಾಡಿಕೊಂಡು ನನ್ನ ಅಭ್ಯರ್ಥಿಗಳೇ ಗೆದ್ದು ಬಂದರುʼʼ ಎಂದು ಗೇಲಿ ಮಾಡಿದರು.

ʻʻಪಾಲಿಕೆ ಚುನಾವಣೆಯಲ್ಲಿ ಕೆಲವೊಂದು ಉಪಾದ್ಯಾಪಿ ಇದ್ದವರನ್ನು ಮನೆಗೆ ಕಳುಹಿಸಿದ್ರು. ವಿಜಯಪುರ ಜಿಲ್ಲೆ ದೊಳಗಿನ ಒಂದಿಷ್ಟು ಜನರನ್ನು ಮನೆಗೆ ಕಳುಹಿಸುವುದಿದೆ. ಮುಂದಿನ ಎಂಎಲ್ಎ ಎಲೆಕ್ಷನ್ ನಲ್ಲಿ ಮನೆಗೆ ಕಳುಹಿಸುತ್ತೇವೆ.ʼʼ ಎಂದು ಹೇಳಿದರು ಬಸನಗೌಡ ಪಾಟೀಲ್‌ ಯತ್ನಾಳ್‌.

ಇದನ್ನೂ ಓದಿ | Panchamasali Reservation | ಸಾಹುಕಾರ್‌ ಹೆಸರು ತೆಗೆದರೆ ವೇದಿಕೆಗೆ ನುಗ್ಗಿ ಹೊಡೀತೀವಿ: ಯತ್ನಾಳ್‌ಗೆ ಜಾರಕಿಹೊಳಿ ಬೆಂಬಲಿಗರ ಎಚ್ಚರಿಕೆ

Exit mobile version