Site icon Vistara News

Basanagowda Pateel Yatnal : ಹೊಂದಾಣಿಕೆ ರಾಜಕೀಯದಿಂದಲೇ ಹಿಂದುಗಳ ಕೊಲೆ ಎಂದ ಯತ್ನಾಳ್‌

Basanagowda pateel Yatnal

ಮೈಸೂರು: ಹೊಂದಾಣಿಕೆಯಿಂದಲೇ ಹಲವು ಹಿಂದೂಗಳ ಹತ್ಯೆಯಾಗಿದೆ. ಹೊಂದಾಣಿಕೆಯಿಂದಲೇ ನಮ್ಮ ನಾಶಕ್ಕೆ ಕಾರಣವಾಗಿದೆ- ಹೀಗೆಂದು ಆಕ್ರೋಶದಿಂದ ಹೇಳಿದರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda Pateel Yatnal). ತಿ.ನರಸೀಪುರದಲ್ಲಿ ಕೊಲೆಯಾದ ಹಿಂದು ಕಾರ್ಯಕರ್ತ (Hindu activist) ವೇಣುಗೋಪಾಲ ನಾಯಕ್‌ (Venugopal Nayak) ಅವರ ಶ್ರದ್ಧಾಂಜಲಿ ಸಭೆಯಲ್ಲಿ (Tribute Meeting) ಮಂಗಳವಾರ ಅವರು ಮಾತನಾಡಿದರು.

ವೇಣುಗೋಪಾಲ ನಾಯಕ್‌ ಅವರ ಕೊಲೆಯನ್ನು ಖಂಡಿಸಿ ಮಾತನಾಡಿದ ಅವರು, ನನಗೆ ನ್ಯಾಯ ಅಂದ್ರೆ ನ್ಯಾಯ. ಅನ್ಯಾಯ ಅಂದ್ರೆ ಅನ್ಯಾಯವೇ ಎಂದು ಹೇಳಿದರು. ಕೆಲವರು ಹೊಂದಾಣಿಕೆ ರಾಜಕೀಯ (Adjustment Politics) ಮಾಡಿಕೊಂಡಿರುತ್ತಾರೆ. ಹೀಗಾಗಿ ಬಾಯಿ ಮುಚ್ಚಿಕೊಂಡಿರುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

ನಾನು ಏನೂ ಆಗಲ್ಲ: ಯತ್ನಾಳ್‌ ಬೇಸರ

ʻʻಮುಖ್ಯಮಂತ್ರಿ ಸ್ಥಾನ ಇರಲಿ, ಪ್ರತಿಪಕ್ಷ ನಾಯಕ ಸ್ಥಾನ ಆಗಲಿ ಯತ್ನಾಳ್ ಹೆಸರು ಬರುತ್ತೆ. ಆದರೆ ಈ ಯತ್ನಾಳ್ ಏನೂ ಆಗಲ್ಲ. ಯಾಕೆಂದರೆ, ನಾನು ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಅದಕ್ಕೆ ನಾನು ಏನೂ ಆಗಲ್ಲʼʼ ಎಂದು ಯತ್ನಾಳ್‌ ಬೇಸರದಿಂದ ನುಡಿದರು.

ʻʻಯತ್ನಾಳ್‌ನನ್ನು ಸೋಲಿಸಲು ಭಾರಿ ಪ್ರಯತ್ನ ಮಾಡಿದ್ರು. ವಿಧಾನಸೌಧದಲ್ಲಿ ನನ್ನ ಬಾಯಿ ಮುಚ್ಚಿಸಬೇಕು ಅಂದಿದ್ರು. ಆದರೆ, ನಾವು ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ. ನಾನು ಎಂದಿಗೂ ಹೊಂದಾಣಿಕೆ ಪಾಲಿಟಿಕ್ಸ್ ಮಾಡಲ್ಲ. ನ್ಯಾಯ ಅಂದರೆ ನ್ಯಾಯ, ಅನ್ಯಾಯ ಎಂದರೆ ಅನ್ಯಾಯವೇ. ನಾವು ಯಾವುದಕ್ಕೂ ಸಿದ್ಧರಿರುತ್ತೇವೆʼʼ ಎಂದ ಯತ್ನಾಳ್‌, ಹಾಗಂತ ನಾನು ಯಾರನ್ನೂ ಕಂಟ್ರೋಲ್ ಮಾಡಿಲ್ಲ ಎಂದರು.

ʻʻನಾನು ನ್ಯಾಯ ನಿಷ್ಠುರವಾಗಿ ಏನಾದರೂ ಮಾತನಾಡಿದರೆ ನನಗೆ ನೋಟಿಸ್ ಕೊಡ್ತಾರೆ. ನಮ್ಮ ಪಕ್ಷದವರೇ ನನ್ನನ್ನ ಟೀಕಿಸ್ತಾರೆ. ಯತ್ನಾಳ್‌ಗೆ ಆರ್ಥಿಕ ಜ್ಞಾನ ಇಲ್ಲ, ಹಿಂದುತ್ವ ಮಾತ್ರ ಅಂತ ಹೇಳ್ತಾರೆ. ಅವರ ಬಳಿ ಹಣ ಇಲ್ಲ ಅಂತಾರೆ. ಯಾಕೆ ಸಮಾಜ ಸುಧಾರಕರೂ ಬರಬಾರದ?ʼʼ ಎಂದು ಯತ್ನಾಳ್ ತಿ.ನರಸೀಪುರದಲ್ಲಿ‌ ಪ್ರಶ್ನಿಸಿದರು.

ʻʻಫೇಸ್ ಬುಕ್ ನಲ್ಲಿ ಕೆಲವರು ಕಾಮೆಂಟ್ ಮಾಡ್ತಾರೆ. ಅವರು ಯಾರಿಗೆ ಹುಟ್ಟಿದ್ದಾರೋ ಗೊತ್ತಿಲ್ಲ. ಅವರಿಗೆಲ್ಲ ಹೇಳ್ತೀನಿ. ನರೇಂದ್ರ ಮೋದಿ ಚಿನ್ನದ ರೋಡ್ ಮಾಡ್ತೀನಿ ಅಂತ ಹೇಳಿಲ್ಲ. ಸುರಕ್ಷಿತ ರಸ್ತೆ ಮಾಡುತ್ತೀನಿ ಎಂದಿದ್ದಾರೆʼʼ ಎಂದು ಯತ್ನಾಳ್‌.

ವೇಣುಗೋಪಾಲ್‌ ದೇಶದ್ರೋಹಿ ಚಟುವಟಿಕೆ ಮಾಡಿದ್ರಾ?

ʻʻಪ್ರಸಕ್ತ ಪರಿಸ್ಥಿತಿಯಲ್ಲಿ ಹಿಂದೂಗಳು ಜೀವನ ಮಾಡದ ವಾತಾವರಣ ನಿರ್ಮಾಣವಾಗಿದೆ. ಹತ್ಯೆಗಳು, ಜೋಡಿ ಕೊಲೆಗಳು, ಸಮಾಜ ವಿರೋಧಿ ಕೃತ್ಯದಲ್ಲಿ ಭಾಗಿಯಾಗುವವರಿಗೆ ಹೊಸ ಹುಮ್ಮಸ್ಸು ಬಂದಿದೆ. ವಿಧಾನಸಭೆಯಲ್ಲಿ ಮೊನ್ನೆ ಪೊಲೀಸರ ಮೇಲೆ ಹಲ್ಲೆ ಮಾಡಿದರು. ಆ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆʼʼ ಎಂದು ಹೇಳಿದ ಯತ್ನಾಳ್‌, ʻʻವೇಣುಗೋಪಾಲ್ ದೇಶದ್ರೋಹಿ ಚಟುವಟಿಕೆ ಮಾಡಿದ್ರ? ಪಾಕಿಸ್ತಾನದ‌ ಪರ ಜೈಕಾರ ಕೂಗಿದ್ದರಾ?ʼ ಎಂದು ಪ್ರಶ್ನಿಸಿದರು.

ಗಣಪತಿಯನ್ನು ಕೂರಿಸಲು ಕೂಡಾ ಪರದಾಡಬೇಕಾಗಿದೆ

ʻʻಕೇಸರಿ ಶಾಲು ಹಾಕಿಕೊಂಡರೆ ಹುಷಾರ್, ತಿಲಕ ಹಾಕಿಕೊಂಡರೆ ಹುಷಾರ್ ಅಂತ ಪೊಲೀಸರ ಸಭೆಯಲ್ಲಿ ಮಂತ್ರಿ ಹೇಳುತ್ತಾರೆ. ರಾಮನ ಹಾಡನ್ನು ಹಾಡಲು ಕೂಡಾ ಅನುಮತಿ ಪಡೆದುಕೊಳ್ಳುವ ದುಃಸ್ಥಿತಿ ಎದುರಾಗಿದೆ. ಗಣಪತಿಯನ್ನು ಕೂರಿಸಲು ಕೂಡ ಈಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದೇಶಪ್ರೇಮ ಬೆಳೆಸುವ ಕಾರ್ಯಕ್ರಮಕ್ಕೂ ಅನುಮತಿ ಅನಿವಾರ್ಯ. ಕಾರ್ಯಕ್ರಮಕ್ಕೆ ನೂರೆಂಟು ವಿಘ್ನಗಳು ಎದುರಾಗಿದೆʼʼ ಎಂದು ಯತ್ನಾಳ್‌ ಬೇಸರಿಸಿದರು.

ʻʻನಾನು 2018ರಲ್ಲಿ ಎಂಎಲ್‌ಎ ಆಗಿದ್ದಾಗಲೂ‌ ಕೂಡ ರೂಲ್ಸ್ ಮಾಡಿದರು. ನಾವು ಯಾವುದೇ ರೂಲ್ಸ್ ಗೂ‌ ಕೇರ್ ಮಾಡಲಿಲ್ಲ. ನಾವು ಎಷ್ಟೇ ಕೇಸ್ ಹಾಕಿದರೂ ಮಾಡಿಯೇ ತೀರುತ್ತೇವೆ ಎಂದು ಎಚ್ಚರಿಸಿದೆ.ʼʼ ಎಂದರು.

ಹಿಂದು ಉಳಿದಿರುವುದು ಬಡವರ ಮನೆಯಲ್ಲಿ

ʻʻವೇಣುಗೋಪಾಲ್ ಹತ್ಯೆ ಹಿಂದಿನ ದಿನ ಪಿಸಿಯೊಬ್ಬರು ಜಗಳ ಬಿಡಿಸಿದ್ದರು. ಅಂದೇ ಅವರು ಕ್ರಮ ಕೈಗೊಂಡಿದ್ದರೆ ವೇಣು ಉಳಿಯುತ್ತಿದ್ದʼʼ ಎಂದು ಹೇಳಿದ ಯತ್ನಾಳ್‌, ʻʻಹಿಂದು‌ ಉಳಿದಿರುವುದು ಬಡವರ ಮನೆಯಲ್ಲಿ, ವಾಲ್ಮೀಕಿ ಸಮಾಜದಲ್ಲಿ , ಹಿಂದುಳಿದ ಮನೆಗಳಲ್ಲಿ ಮಾತ್ರ. ಈ‌ ದೇಶಕ್ಕೆ ಮಹಾಭಾರತ ಬರೆದವರು ವೇದವ್ಯಾಸರು,
ರಾಮಯಾಣ ಬರೆದವರು ಮಹರ್ಷಿ ವಾಲ್ಮೀಕಿ. ಈ‌ ದೇಶಕ್ಕೆ ಸಂವಿಧಾನ ಬರೆದವರು ಒಬ್ಬ ದಲಿತ ಡಾ.ಬಿ.ಆರ್.ಅಂಬೇಡ್ಕರ್. ಹಿಂದೂ ಧರ್ಮ ಉಳಿದಿರುವುದು ದಲಿತರು, ಬಡವರ ಮನೆಗಳಲ್ಲಿ ಮಾತ್ರʼʼ ಎಂದು ಹೇಳಿದರು ಬಸನಗೌಡ ಪಾಟೀಲ್‌ ಯತ್ನಾಳ್‌.

ʻʻಈ‌ ದೇಶದಲ್ಲಿ ಹನುಮ ಜಯಂತಿ ಮಾಡಲು ಅನುಮತಿ ಬೇಕಾ? ಈ ಆದೇಶ ಎಲ್ಲ ನಮ್ಮ ವಿಜಯಪುರದಲ್ಲಿ ನಡೆಯಲ್ಲʼʼ ಎಂದು ಹೇಳಿದ ಶಾಸಕ ಬಸವರಾಜ ಯತ್ನಾಳ್, ʻʻಕೋವಿಡ್ ಸಂದರ್ಭದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಒಂದು ರೂಲ್ಸ್ ಮಾಡಿದ್ದರು. ಗಣಪತಿ‌ ಕೂರಿಸಲು ಒಂದೇ ದಿನ ಅನುಮತಿ ನೀಡಿದ್ದರು‌. ಆವಾಗ ನಾವು ತಿರುಗಿಬಿದ್ದು 11 ದಿನಗಳು ಮಾಡಿದ್ದೆವು. ವಿಜಯಪುರದಲ್ಲಿ ಈ‌ ನಿಯಮಗಳು ಯಾವುದು ಇಲ್ಲ. ನಾವು ಮೆರವಣಿಗೆಯನ್ನೂ ಮಾಡಿದೆವು, ಈ ಸಂದರ್ಭದಲ್ಲಿ ನಮ್ಮನ್ನು ಬೆದರಿಸಲು ಮುಂದಾಗಿದ್ದರು. ಗಣಪತಿ ಹಬ್ಬಕ್ಕೆ ಯಾರೂ ದುಡ್ಡು ಕೊಡ್ತಾರೆ, ವಿದ್ಯುತ್ ಹಣ ಯಾರು ತುಂಬುತ್ತಾರೆ ಎಂದರು. ಮಸೀದಿಗೆ ಯಾರೂ ರೊಕ್ಕ ತುಂಬುತ್ತಾರೆ. ಅವರೇ ನಮಗೂ ತುಂಬುತ್ತಾರೆ ಎಂದೆʼʼ ಎಂದು ಯತ್ನಾಳ್‌ ವಿವರಿಸಿದರು.

ಇದನ್ನೂ ಓದಿ: Hindu activist Murder : ತಿ. ನರಸೀಪುರದಲ್ಲಿ ವೇಣುಗೋಪಾಲ್‌ ನಾಯಕ್‌ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್‌ ಅನುಮತಿ

Exit mobile version