ಚಿಕ್ಕೋಡಿ: ಬಿಎಸ್‌ವೈ ಸಿಎಂ ಆಗಿದ್ದಾಗ ಆರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದಾಗಿ ಹೇಳಿದ್ದರು. ಬಳಿಕ ಅವರೇ ಸಿಎಂ ಸ್ಥಾನದಿಂದ ಕೆಳಗಿಳಿದರು. ನಂತರ ಬಂದ ಸಿಎಂ ಬಸವರಾಜ ಬೊಮ್ಮಾಯಿ 3 ತಿಂಗಳ ಕಾಲಾವಕಾಶ ಕೇಳಿದರು. ಇದಾದ ಬಳಿಕ ಅವರ ನಿವಾಸದ ಎದುರು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ 2ಎ ಮೀಸಲಾತಿಗಾಗಿ ಒತ್ತಾಯಿಸಿ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ 25 ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಪಂಚಮಸಾಲಿ ವಿರಾಟ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಬೆಳಗಾವಿ ಜಿಲ್ಲೆ ಗೋಕಾಕ್‌ನ ನ್ಯೂ ಇಂಗ್ಲಿಷ್ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಮತನಾಡಿ, ಪಂಚಮಸಾಲಿ ಮಕ್ಕಳಿಗೆ 2ಎ ಮೀಸಲಾತಿ, ಉಳಿದ ಲಿಂಗಾಯತ ಸಮಾಜದ ಉಪ ಜಾತಿಗಳಿಗೆ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ಸಿಗಬೇಕೆಂದು ಹೋರಾಟ ಮಾಡಲಾಗುತ್ತಿದೆ. ಈಗಾಗಲೇ ಸಾವಿರಾರು ಕಿ.ಮೀ. ಪಾದಯಾತ್ರೆ ಮಾಡಿ ಹಕ್ಕೊತ್ತಾಯ ಮಾಡಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಸರ್ಕಾರದ ವಿಳಂಬ ನೀತಿಯಿಂದ ನಮಗೆಲ್ಲ ನೋವಾಗಿದೆ. ಈ ಹೋರಾಟಕ್ಕೆ ಸೆಮಿಫೈನಲ್ ಗೋಕಾಕ್ ಸಮಾವೇಶ, ಅಂತಿಮ ಹೋರಾಟ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ಸಮಾಜದ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | ಪಂಚಪೀಠಗಳು, ಕೈ, ಕಮಲ ಪಕ್ಷಗಳ ವಿರುದ್ಧ ಅಸಮಾಧಾನದ ವಿಡಿಯೋ ವೈರಲ್; ಸತ್ಯ ಹೇಳಿದ್ದೇನೆ ಎಂದ ವಚನಾನಂದ ಶ್ರೀ
ಬಸವರಾಜ ಬೊಮ್ಮಾಯಿ ಶಿಗ್ಗಾಂವದಲ್ಲಿ ಮೂರು ಬಾರಿ ಶಾಸಕರಾದ ನಂತರ ಸಿಎಂ ಆಗಲು ಪಂಚಮಸಾಲಿ ಸಮುದಾಯ ಕಾರಣ. ಅನೇಕ ಬಾರಿ ಬೊಮ್ಮಾಯಿ ಕಣ್ಣೀರು ಹಾಕಿ ನಮ್ಮ ಸಮಾಜದ ಋಣ ಸ್ಮರಿಸಿದ್ದಾರೆ. ನಮ್ಮ ಸಮಾಜದ ಋಣ ನಿಮ್ಮ ಮೇಲೆ ಇರುವುದು ಸತ್ಯವಾಗಿದ್ದರೆ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡಿ. ಮೂಗಿಗೆ ತುಪ್ಪ ಸವರಿದರೆ ಸುಮ್ಮನಿರುತ್ತಾರೆ ಎಂದುಕೊಂಡರೆ ಸಹಿಸುವುದಿಲ್ಲ. ನಮ್ಮ ಸಹನೆಯ ಕಟ್ಟೆ ಒಡೆದು ಹೋಗಿದೆ. ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ನಮ್ಮ ಕೊನೆಯ ಹೋರಾಟವಾಗಿದೆ. ಅಷ್ಟರಲ್ಲೇ ಮೀಸಲಾತಿ ಕೊಟ್ಟರೆ ಸಿಎಂಗೆ ಗೋಕಾಕ್ ಕರದಂಟು ತಿನ್ನಿಸಿ, ಕಲ್ಲು ಸಕ್ಕರೆ ತುಲಾಭಾರ ಮಾಡಿ ಸನ್ಮಾನ ಮಾಡುತ್ತೇವೆ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಎಲ್ಲಾ ಸಮಾಜಗಳಿಗೆ ಮೀಸಲಾತಿ ಸಿಕ್ಕಿವೆ. ಅದಕ್ಕೆ ನಮಗೆ ಯಾವುದೇ ಅಸೂಯೇ ಇಲ್ಲ. ನಮ್ಮ ಸಮಾಜಕ್ಕೆ ಸಿಗಬೇಕಾದದ್ದು ಸಿಕ್ಕಿಲ್ಲ, ದಯವಿಟ್ಟು ಕೊಡಿ ಎಂದು ಮನವಿ ಮಾಡಿದ ಅವರು, ನಮ್ಮ ಸಮಾಜದಲ್ಲಿ ಕಡುಬಡ ಮಕ್ಕಳಿದ್ದಾರೆ, ಅವರಿಗಾಗಿ ಮೀಸಲಾತಿ ಕೇಳುತ್ತಿದ್ದೇವೆ. ಬೊಮ್ಮಾಯಿಯವರೇ ಇನ್ನಾದರೂ ಎಚ್ಚರವಾಗಿ, 25 ಲಕ್ಷ ಜನ ಅಲ್ಲ, ಒಂದು ಕೋಟಿ ಜನ ಬಂದು ಪ್ರತಿಭಟನೆ ಮಾಡುತ್ತಾರೆ. ನಮ್ಮ ಸಮಾಜಕ್ಕೆ ಸಿಗಬೇಕಾದ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಘಟಪ್ರಭಾ ಭಾಗದಲ್ಲಿ ದಲಿತರನ್ನು ನನ್ನ ಮೇಲೆ ಎತ್ತಿಕಟ್ಟಲು ಮಾಡಿದ ಪ್ರಯತ್ನಕ್ಕೆ ಕೆಲ ಸ್ವಾಮೀಜಿಗಳು ಅವರನ್ನು ಮುಗ್ಧರು ಎಂದು ಕರೆದರು. ನಾನು ಅವರನ್ನು ಅಮಾಯಕರು ಎಂದು ಕರೆಯುತ್ತೇನೆ. ನಾನು ದಲಿತ ವಿರೋಧಿ ಅಲ್ಲ, ನಾಗನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ತಡೆ ಹಿಡಿದವರು ಯಾರು? ಕುರುಬ ಸಮಾಜದ ಡಾ.ರಾಜೇಂದ್ರ ಸಣ್ಣಕ್ಕಿಗೆ ಜಿಲ್ಲಾ ಪಂಚಾಯಿತಿ ಸದಸ್ಯತ್ವ ಸ್ಥಾನ ತಪ್ಪಿಸಿದವರು ಯಾರು? ಎಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಕಿಡಿ ಕಾರಿದರು.
ಮುಗ್ಧ ಜನರನ್ನು ನನ್ನ ಮೇಲೆ ಎತ್ತಿಕಟ್ಟುವ ಬದಲು ನೀವೇ ಬನ್ನಿ. ನಾನು ನಿಮಗೆ ಉತ್ತರ ಕೊಡುತ್ತೇನೆ. ಎಂಎಲ್‌ಎ ಬದಲು ಅವರ ಪಿ.ಎ.ಗಳು ಗುದ್ದಲಿ ಪೂಜೆ ಮಾಡಬೇಕಾದರೆ ನಾವು ಸುಮ್ಮನೆ ನಿಲ್ಲಬೇಕಾ? ನಮ್ಮ ಕೆಲ ನಾಯಕರಲ್ಲಿ ದೋಷಗಳಿವೆ, ಅವುಗಳನ್ನು ಸರಿ ಮಾಡೋಣ ಎಂದ ಅವರು, ಯಾರಿಗೋ ನಮ್ಮ ಸಮಾಜವನ್ನು ಒತ್ತೆ ಇಡುವಂತಹ ಕೆಲಸಕ್ಕೆ ಯಾರೂ ಮುಂದಾಗಬೇಡಿ, 2ಎ ಮೀಸಲಾತಿ ಸಿಗುವವರೆಗೆ ನಾವೆಲ್ಲರೂ ಸಂಘಟಿತರಾಗೋಣ ಎಂದು ಕರೆ ನೀಡಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ನಾವು ಇಲ್ಲಿ ಯಾರನ್ನೂ ವಿರೋಧ ಮಾಡಲು ಬಂದಿಲ್ಲ. ನಾವು ರೈತರಾಗಿದ್ದಕ್ಕೆ ನಾವು ಪಂಚಮಸಾಲಿಗಳಾದೆವು. ಸಮಾಜವನ್ನು ಉಪ್ಪಿನಕಾಯಿ ರೀತಿ ಬಳಸಿಕೊಳ್ಳಲು ಹೋಗಬೇಡಿ. 12ನೇ ಶತಮಾನದಲ್ಲಿ ಸಮಾನತೆ ಸಂದೇಶ ಸಾರಿದ ಬಸವಣ್ಣನ ಕುಲದವರು ನಾವು. ಹೀಗಾಗಿ ವಿನಯಪೂರ್ವಕವಾಗಿ ನಾನು ಸಿಎಂ ಅವರನ್ನು ಕೇಳುತ್ತೇನೆ. ನೀವು ನಮ್ಮ ಸಮಾಜದವರು, ನೀವೇ ನಮಗೆ ಮೀಸಲಾತಿ ನೀಡದಿದ್ದರೆ ಇನ್ಯಾರು ನೀಡುತ್ತಾರೆ. ಮೀಸಲಾತಿ ನೀಡಿದರೆ ನಿಮ್ಮ ಫೋಟೊವನ್ನು ಪ್ರತಿಯೊಬ್ಬ ಪಂಚಮಸಾಲಿ ಮನೆಯೊಳಗೆ ಹಾಕುತ್ತಾರೆ ಎಂದರು.
ಇದನ್ನೂ ಓದಿ | Election 2023 | ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಮಾಜಿ ಸಿಎಂ ಘೋಷಣೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಈ ಹಿಂದೆ ಸಿಎಂ ಬೊಮ್ಮಾಯಿ ಅವರು ನನ್ನ ಕರೆದು ರಮೇಶ ಜಾರಕಿಹೊಳಿ, ಯೋಗೇಶ್ವರ್ ಹಾಗೂ ನಿಮಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದರು. ಇನ್ನು ಎಲೆಕ್ಷನ್ 6 ತಿಂಗಳು ಇದೆ, ಈಗ ನನಗೆ ಸಚಿವ ಸ್ಥಾನ ಬೇಡ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಎಂದು ಕೇಳಿದ್ದೆ ಎಂದ ಅವರು, ಈಗಾಗಲೇ ಎಲೆಕ್ಷನ್ ಪ್ರಚಾರಕ್ಕೆ ನನಗೆ ಸ್ಟಾರ್ ಕ್ಯಾಂಪೇನರ್ ಆಗಿ ಎಂದಿದ್ದಾರೆ. ಅಂದು ನನಗೆ ಭೇಟಿಯಾಗಲು ಅವಕಾಶ ಕೊಡದವರು ಇಂದು ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳಿದರು.
ಸಾವಿರಾರು ಜನರ ಸಮ್ಮುಖದಲ್ಲಿಯೇ ಬೌದ್ಧ ಧರ್ಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಸ್ವೀಕಾರ ಮಾಡಿದರು. ಆದರೆ ಅವರು ಅಪ್ಪಿ ತಪ್ಪಿಯೂ ಮುಸ್ಲಿಂ ಧರ್ಮಕ್ಕೆ ಸೇರಲಿಲ್ಲ. ನೀನು ಅವರ ಫೋಟೊ ಹಾಕಿಕೊಂಡರೆ ಆಗುತ್ತದಾ? ಮೊಘಲರಂತಹ ಹಲವರು ವಿದೇಶಿಯರು ಬಂದರೂ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳಿಂದ ಏನೂ ಆಗಿಲ್ಲ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗೆ ಏನೂ ಆಗಿಲ್ಲ, ನೀನು ಏನು ಕಿಸಿಯುತ್ತೀಯೋ? ಲಿಂಗಾಯತರು 11 ರೂಪಾಯಿ ಪಟ್ಟಿ ಕೊಡೋರಾ? ಅದೇ 11 ರೂಪಾಯಿ ಪಟ್ಟಿ ಕೊಟ್ಟೆ ನಿನ್ನನ್ನು ಮನೆಗೆ ಕಳುಹಿಸುತ್ತಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
ಹಾಲು ಮತದವರನ್ನು ಎಸ್‌ಟಿಗೆ ಸೇರಿಸಬೇಕು ಎಂದು ಹೇಳಿದವನು ನಾನು, ಬ್ರಾಹ್ಮಣರಿಗೂ ಸಹ ಮೀಸಲಾತಿ ಸಿಗಬೇಕು ಎಂದು ಹೇಳಿದ್ದ ನಾನೆಲ್ಲಿ ಜಾತಿ ರಾಜಕಾರಣ ಮಾಡುತ್ತೇನೆ ಎಂದು ಪ್ರಶ್ನಿಸಿದ ಅವರು, ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ನಾನು ಒಬ್ಬನೇ ಗೋಕಾಕ್ ಸರ್ಕಲ್‌ನಲ್ಲಿ ಬಂದು ನಿಲ್ಲುತ್ತೇನೆ. ಏನು ಮಾಡುತ್ತೀರೋ ಮಾಡಿ, ನಾನು ಯಾವ ಪೊಲೀಸ್ ಕರೆದುಕೊಂಡು ಬರಲ್ಲ. ಒಬ್ಬನೇ ಬರುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ | ಮುಸಲ್ಮಾನರಿಗೆ ಅಬ್ದುಲ್ ಕಲಾಂ ಬೇಕಿಲ್ಲ; ಟಿಪ್ಪುವೇ ಅವರಿಗೆ ಹೀರೊ: ಡಾ. ಎಸ್. ಎಲ್. ಭೈರಪ್ಪ ಆಕ್ರೋಶ