ಹುಬ್ಬಳ್ಳಿ: ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಬಹುದೊಡ್ಡ ಹೋರಾಟ ಮಾಡುತ್ತಿದ್ದೇವೆ. ಆರು ತಿಂಗಳೊಳಗಾಗಿ ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತನ್ನು ಈವರೆಗೂ ಸರ್ಕಾರ ಉಳಿಸಿಕೊಂಡಿಲ್ಲ. ಹೀಗಾಗಿ ಸೆ.20ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಮೀಸಲಾತಿಗಾಗಿ ಧರಣಿ ನಡೆಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸರ್ಕಾರ ನಾಲ್ಕನೇ ಬಾರಿಗೆ ಕೊಟ್ಟ ಮಾತನ್ನು ತಪ್ಪಿದೆ. ಹೀಗಾಗಿ ಶಿಗ್ಗಾಂವಿಯ ಚೆನ್ನಮ್ಮ ವೃತ್ತದಿಂದ ಮಂಗಳವಾರ ಬೆಳಗ್ಗೆ 9 ಗಂಟೆಗೆ ರ‍್ಯಾಲಿ ಮೂಲಕ ತೆರಳಿ ಸಿಎಂ ನಿವಾಸದ ಮುಂದೆ ಧರಣಿ ನಡೆಸಲಾಗುವುದು. ಧರಣಿಯ ನಂತರವೂ ಮೀಸಲಾತಿಗೆ ಸರ್ಕಾರ ಸ್ಪಂದಿಸದಿದ್ದರೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬೆಂಗಳೂರು ಚಲೋ ಬೃಹತ್ ಹೋರಾಟ ನಡೆಸಿ, 25 ಲಕ್ಷ ಪಂಚಮಸಾಲಿ ಸಮುದಾಯದ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | ಹಸಿರುಮಕ್ಕಿ ಸೇತುವೆ ಕಾಮಗಾರಿಗೆ ಬದಲಿ ತಂತ್ರಜ್ಞಾನ; ಶಾಸಕ ಹರತಾಳು ಹಾಲಪ್ಪ
ನಮ್ಮ ಸಮುದಾಯದ ಶೇ.80 ಜನರಿಂದ ಈ ಸರ್ಕಾರ ರಚನೆಯಾಗಿದೆ. ಆದರೆ, ಈ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಪಂಚಮಸಾಲಿ ಸಮುದಾಯದ ಶಾಸಕರು ಸದನದ ಒಳಗಡೆ ಹೋರಾಟ ಮಾಡುತ್ತಾರೆ. ನಾವು ಹೊರಗಡೆ ಹೋರಾಟ ಮಾಡುತ್ತೇವೆ. ಹೋರಾಟದ ಮೂಲಕ 2ಎ ಮೀಸಲಾತಿ ಪಡೆದೇ ತೀರುತ್ತೇವೆ ಎಂದ ಅವರು, ಸಿಎಂ ಬೊಮ್ಮಾಯಿ ಯಾವುದೋ ಒಬ್ಬ ಮಹಾನ್ ವ್ಯಕ್ತಿಯ ಒತ್ತಡಕ್ಕೆ ಒಳಗಾಗಿದ್ದಾರೆ. ಆತನ ಪ್ರಭಾವದಿಂದಾಗಿ ಮೀಸಲಾತಿ ನೀಡುವುದಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಆ ವ್ಯಕ್ತಿ ಯಾರೆಂಬುದನ್ನು ಶೀಘ್ರವೇ ತಿಳಿಸುತ್ತೇನೆ. ಈ ಸರ್ಕಾರ ಮೀಸಲಾತಿ ಬಗ್ಗೆ ಒಂದು ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಚಾಪೆ ಕೆಳಗೆ ನುಗ್ಗಿದ್ರೆ ನಾವು ರಂಗೋಲಿ ಕೆಳಗೆ ನುಗ್ಗಿ ಹೋರಾಟ ಮಾಡಿ ಮೀಸಲಾತಿ ಪಡೆಯುತ್ತೇವೆ. ಇದು ಯಾವುದೇ ಚುನಾವಣೆಗಾಗಿ ಹೋರಾಟವಲ್ಲ ಸಮಾಜದ ಒಳಿತಿಗಾಗಿ ಹೋರಾಟ, ಮೀಸಲಾತಿ ಕೊಡದೇ ಹೋದಲ್ಲಿ ನಮ್ಮ ಮುಂದಿನ ಹೋರಾಟದ ನಿರ್ಧಾರವನ್ನು ಸ್ಪಷ್ಟಪಡಿಸುತ್ತೇವೆ ಎಂದರು.
ಪಕ್ಷಾತೀತವಾಗಿ ಹೋರಾಟವೆಂದ ವಿಜಯಾನಂದ ಕಾಶಪ್ಪನವರ್
ರಾಜ್ಯ ಸರ್ಕಾರ ಮೂರ್ನಾಲ್ಕು ಬಾರಿ ಮೀಸಲಾತಿಯ ಭರವಸೆ ನೀಡಿದೆ. ಸರ್ಕಾರ ಕೇವಲ ಆಶ್ವಾಸನೆ ನೀಡುವ ಕೆಲಸವನ್ನೇ ಮಾಡುತ್ತಿದೆ, ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ನಾವು ಕೊನೆಯ ಹಂತದ ಹೋರಾಟವನ್ನು ಪಕ್ಷಾತೀತವಾಗಿ ಮಾಡಲು ಮುಂದಾಗಿದ್ದೇವೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಸರ್ಕಾರದ ಸುಳ್ಳು ಆಶ್ವಾಸನೆಗೆ ಪಂಚಮಸಾಲಿ ಸಮುದಾಯದ ಜನ ಬೇಸತ್ತು ಹೋಗಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನಾವು ರಾಜಕೀಯ ಲಾಭಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಾತಿ ಕೇಳುತ್ತಿದ್ದೇವೆ. ಇದು ಪಕ್ಷಾತೀತ ಹೋರಾಟವಾಗಿದೆ. ಇದರಲ್ಲಿ ಯಾವುದೇ ಪಕ್ಷದ ಕೈವಾಡವಿಲ್ಲ. ಸಂದರ್ಭ ಬಂದರೆ ನಾವು ರಾಜಕೀಯವನ್ನೇ ತ್ಯಾಗ ಮಾಡುತ್ತೇವೆ. ಸಮುದಾಯವನ್ನು ಬಿಡುವುದಿಲ್ಲ ಎಂದರು.
ನಮ್ಮ ಜಿಲ್ಲೆಯ ಒಬ್ಬ ಸಚಿವರೇ ಈ ಮೀಸಲಾತಿಗೆ ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಸಮುದಾಯದ ಯಾವೊಬ್ಬರೂ ಅವರ ಮನೆ ಕಡೆ ತಿರುಗಿ ನೋಡುತ್ತಿಲ್ಲ. ಸದ್ಯ ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅವರೇ ಅರಿತುಕೊಳ್ಳಲಿ. ಈ ಹಿಂದೆಯೂ ಅವರು ಇದೇ ರೀತಿ ಹೋರಾಟಕ್ಕೆ ಅಡ್ಡಿಪಡಿಸಿದ್ದರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ಹೌದು, ನನಗೆ ಅಸಮಾಧಾನ ಇದೆ, ಅದಕ್ಕೇ ಅಧಿವೇಶನಕ್ಕೆ ಹೋಗಿಲ್ಲ: ಕೆ.ಎಸ್. ಈಶ್ವರಪ್ಪ ಬಹಿರಂಗ ಹೇಳಿಕೆ