ಬಾಗಲಕೋಟೆ: ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡು ಸತ್ಯವನ್ನು ತಿಳಿದ ನಂತರವೂ ಅನೇಕರು ಭಯದ ಕಾರಣಕ್ಕೆ ಆ ಸತ್ಯವನ್ನು ಸಮಾಜದ ಮುಂದೆ ಹೇಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಕೂಡಲಸಂಗಮದಲ್ಲಿ ಆಯೋಜನೆ ಮಾಡಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಮಗೆ ಎಲ್ಲೇ ಕತ್ತಲೆ ಕಂಡರೂ, ಅದೇ ಕತ್ತಲಲ್ಲಿಯೇ ಎಲ್ಲೋ ಒಂದು ಕಡೆ ಬೆಳಕು ಕಾಣುತ್ತದೆ. ಅದೇ ರೀತಿ ಸಮಾಜದಲ್ಲಿ ಕತ್ತಲು ಇರುತ್ತದೆ. ಆ ಸಮಯದಲ್ಲಿ ಸಮಾಜದಲ್ಲಿ ಕತ್ತಲು ಆವರಿಸಿದಾಗ ಬಸವಣ್ಣನವರು ಬೆಳಕನ್ನು ನೀಡಿದರು.
ಬೆಳಕನ್ನು ನೀಡುವ ಮೊದಲು ವ್ಯಕ್ತಿ ತನ್ನನ್ನು ತಾನು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ. ಬಸವಣ್ಣನವರು ಎಂಟನೇ ವರ್ಷದಲ್ಲೇ ಉಪನಯನವನ್ನು ನಿರಾಕರಣೆ ಮಾಡಿದರು. ಅನೇಕರು ಈ ಪ್ರಶ್ನೆಯನ್ನು ಕೇಳಿಕೊಂಡಿಲ್ಲ, ಆದರೆ ಬಸವಣ್ಣನವರು ಕೇಳಿಕೊಂಡರು. ಎಂಟು ವರ್ಷದಲ್ಲಿ ಇಂತಹ ವಿಚಾರಧಾರೆಗಳು ಹೇಗೆ ಬರುತ್ತವೆ? ಎಂದು ಸ್ವಾಮೀಜಿಯವರಲ್ಲಿ ನಾನು ಕೇಳಿದೆ. ಅವರ ಸ್ನೇಹಿತರ ವಿರುದ್ಧ ಭೇದಭಾವ ಆಗುತ್ತಿತ್ತು ಎನ್ನುವುದನ್ನು ನೋಡಿ ಇಡೀ ಜೀವನ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಂಡರು ಎಂದು ಸ್ವಾಮೀಜಿ ಹೇಳಿದರು.
ಜಾತಿವಾದ, ಲೋಕತಂತ್ರ, ಧ್ವೇಷದ ಬಗ್ಗೆ ತಮ್ಮನ್ನು ಪ್ರಶ್ನೆ ಮಾಡಿಕೊಂಡರು. ಅವರಿಗೆ ಹೃದಯದಿಂದ ಸಿಕ್ಕ ಉತ್ತರ, ಅವರು ನೋಡಿದ ಸತ್ಯವನ್ನು ಇಡೀ ಜೀವನ ಬಿಡಲಿಲ್ಲ. ಬಹಳಷ್ಟು ಜನರು ಸತ್ಯವನ್ನು ತಿಳಿದುಕೊಳ್ಳುತ್ತಾರೆ, ಆದರೆ ಅದನ್ನು ಸಮಾಜದ ಎದುರು ಧ್ವನಿ ಎತ್ತುವುದಿಲ್ಲ. ಏಕೆಂದರೆ ಅವರು ಹೆದರುತ್ತಾರೆ. ಬಸವಣ್ಣನವರಿಗೂ ಇತರರಿಗೂ ಇದ್ದ ವ್ಯತ್ಯಾಸವೇ ಇದು. (Karnataka Election 2023) (Basava Jayanti)
ಬಸವಣ್ಣನವರ ಮೂರ್ತಿ ಎದುರು ಹೂ ಅರ್ಪಣೆ ಮಾಡಿದ್ದೇವೆ, ಅದಕ್ಕೆ ಕಾರಣ ಇದೆ. ಸಮಾಜದ ಎದುರು ಸತ್ಯವನ್ನು ಹೇಳುವುದು ಸುಲಭದ ಕೆಲಸವಲ್ಲ. ಬಸವಣ್ಣನವರು ಜೀವಂತವಾಗಿರುವಾಗ ಹೆದರಿಸಲಾಯಿತು, ಆದರೆ ಅವರು ಸತ್ಯದ ಮಾರ್ಗ ಹಿಡಿದು ಹೋರಾಟ ಮಾಡಿದರು. ಅದಕ್ಕಾಗಿ ಹೂ ಅರ್ಪಣೆ ಮಾಡಿದ್ದೇವೆ. ಯಾರು ತಮ್ಮನ್ನು ತಾವು ಪ್ರಶ್ನಿಸಿಕೊಂಡರೂ ಸಮಾಜದ ಎದುರು ಸತ್ಯವನ್ನು ಹೇಳುವುದಿಲ್ಲವೊ, ಹೆದರುತ್ತಾರೆಯೋ ಅವರ ಎದುರು ಹೂ ಇಡುವುದಿಲ್ಲ.
ಬಸವಣ್ಣನವರು ಯಾವ ಆದರ್ಶ ಪ್ರತಿಪಾದಿಸಿದ್ದರೋ, ಆ ವಿಚಾರಗಳಿಗೆ ಸ್ವಾಮೀಜಿ ಹೋರಾಡುತ್ತಿದ್ದಾರೆ. ಅವರಿಂದ ಸಾಕಷ್ಟು ಕಲಿಯಲು ಸಾಧ್ಯವಾಗಿದೆ. ಬಸವಣ್ಣನವರ ಬಗ್ಗೆ ಆಗಾಗ್ಗೆ ತಿಳಿದುಕೊಳ್ಳುತ್ತಲೇ ಇದ್ದೇನೆ. ಅವರಿಂದ ನಮಗೆ ಮಾರ್ಗದರ್ಶನ ಆಗುತ್ತಿದೆ. ಹೆದರಬೇಡಿ, ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿ ಎಂದು ಬಸವಣ್ಣ ಹೇಳಿದರು. ಅನೇಕರು ಈ ರೀತಿ ಹೇಳುತ್ತಾರೆ, ಆದರೆ ಬಸವಣ್ಣನವರು ಇದೆಲ್ಲವನ್ನೂ ಆಚರಣೆ ಮಾಡಿದರು. ಅದಕ್ಕಾಗಿಯೇ ಅವರು ಕತ್ತಲಲ್ಲಿದ್ದ ನಮಗೆಲ್ಲ ಬೆಳಕು ತೋರಿದರು.
ಇದಕ್ಕೂ ಮುನ್ನ ಮಾತನಾಡಿದ ಗದಗ ಯಡಿಯೂರು ತೋಂಟದಾರ್ಯ ಮಠದ ಡಾ. ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣನವರಿಗೆ ಉಪನಯನ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು. ಉಪನಯನವನ್ನು ಕೇವಲ ಬ್ರಾಹ್ಮಣ ಗಂಡು ಮಕ್ಕಳಿಗೆ ಮಾಡಲಾಗುತ್ತದೆ. ಆದರೆ ನನ್ನ ಸಹೋದರಿ ನಾಗಮ್ಮನಿಗೆ, ಶೂದ್ರರಿಗೆ, ಅಸ್ಪೃಶ್ಯರಿಗೆ, ಮಹಿಳೆಯರಿಗೆ ಇಲ್ಲದ ಈ ಸಂಸ್ಕಾರದ ಅವಶ್ಯಕತೆ ನನಗೆ ಇಲ್ಲ ಎಂದು ಉಪನಯನವನ್ನು ತಿರಸ್ಕರಿಸಿದರು.
ನಂತರ ಬಾಗೇವಾಡಿಯಿಂದ ಕೂಡಲಸಂಗಮದಲ್ಲಿ ನೆಲೆ ನಿಂತರು. ನಂತರ ಬೀದರ್‌ನಲ್ಲಿ ಬಿಜ್ಜಳ ರಾಜನಲ್ಲಿ ಮಂತ್ರಿಯಾದರು. ಅನುಭವ ಮಂಟಪ ಎಂಬ ಸಂಸ್ಥೆ ಸ್ಥಾಪಿಸಿದರು. ಅಸಮಾನತೆಯನ್ನು ದೂರ ಮಾಡಲು, ಧರ್ಮ-ದೇವರ ಹೆಸರಿನಲ್ಲಿ ನಡೆಯುವ ಕಂದಾಚಾರಗಳನ್ನು ದೂರ ಮಾಡಲು ಬಹಳ ದೊಡ್ಡ ಹೆಜ್ಜೆ ಇರಿಸಿದರು. ವಚನಗಳನ್ನು ರಚಿಸಿದರು. ನಮ್ಮ ಸಂವಿಧಾನದಲ್ಲಿರುವ ಅನೇಕ ಅಂಶಗಳು ವಚನದಲ್ಲಿವೆ. ಹಾಗಾಗಿ ವಚನಗಳನ್ನು ಲಿಂಗಾಯತ ಧರ್ಮದ ಸಂವಿಧಾನ ಎನ್ನಲಾಗುತ್ತದೆ ಎಂದರು.