Site icon Vistara News

ಮೀಸಲಾತಿ ಕೊಡದೆ ಬೊಮ್ಮಾಯಿ, ಬಿಎಸ್‌ವೈ ನಡು ದಾರಿಯಲ್ಲಿ ಕೈಬಿಟ್ಟರು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೀಸಲಾತಿ

ಹಾವೇರಿ: ಪಂಚಮಸಾಲಿ ಲಿಂಗಾಯತ ಸಮುದಾಯದ ಬಗ್ಗೆ ಕಳಕಳಿ ಇದ್ದರೆ ತಕ್ಷಣವೇ 2ಎ ಮೀಸಲಾತಿ ನೀಡಬೇಕು. ಈಗ ಆಗದಿದ್ದರೆ ಯಾವ ದಿನ ಕೊಡಲಾಗುತ್ತದೆ ಎಂದಾದರೂ ಮುಖ್ಯಮಂತ್ರಿಯವರು ದಿನಾಂಕ ಘೋಷಣೆ ಮಾಡಬೇಕು. ಇದು ಮೊದಲ ಕ್ರಾಂತಿಯಾಗಿದ್ದು, ಕೊನೆಯ ಕ್ರಾಂತಿಯ ಹೆಜ್ಜೆಯಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಂದು ಏನಾಗುವುದೋ ಗೊತ್ತಿಲ್ಲ, ನರಗುಂದ ಬಂಡಾಯದ ರೀತಿ ಹೋರಾಟ ಆದರೂ ಆಶ್ಚರ್ಯಪಡಬೇಕಿಲ್ಲ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ಶಿಗ್ಗಾಂವಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ಹಮ್ಮಿಕೊಂಡಿದ್ದ ಬೃಹತ್ ಧರಣಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಹಳ ನಂಬಿದ್ದೆವು. ಆದರೆ, ಮೀಸಲಾತಿ ಕೊಡದೆ ನಡುದಾರಿಯಲ್ಲಿ ಕೈಬಿಟ್ಟರು. ಇದು ಮೀಸಲಾತಿಗಾಗಿ ಅಂತಿಮ ಹೋರಾಟ, ಮಾಡು ಇಲ್ಲವೇ ಮಡಿ ಹೋರಾಟ ಎಂದರು.

ಇದನ್ನೂ ಓದಿ | Cong Prez Poll | ಸ್ನೇಕ್​ ಬೋಟ್​ ರೇಸ್​​ನಲ್ಲಿ ರಾಹುಲ್ ಗಾಂಧಿ ಮಸ್ತಿ; ಕಾಂಗ್ರೆಸ್​ ಅಧ್ಯಕ್ಷ ಗಾದಿಗ್ಯಾರು ಅಭ್ಯರ್ಥಿ?

ಪಂಚಮಸಾಲಿ ಹೋರಾಟ ಯಶಸ್ಸು ಕಂಡಿದೆ. ಈವರೆಗೆ ಶೇ.2 ಇರುವ ಲಿಂಗಾಯತ ಜನರೇ ನಮ್ಮನ್ನು ಆಳಿದರು. ಪಂಚಮಸಾಲಿಗಳು ಮುಗ್ದರು. ಅನ್ನ ಕೊಟ್ಟ ಪಂಚಮಸಾಲಿ ಸಮುದಾಯವನ್ನು ಬೆಳೆಸುವ ಕೆಲಸವನ್ನು ಅವರು ಮಾಡಲಿಲ್ಲ. ನಮ್ಮ ಓಟು ಪಡೆದು ಗೆದ್ದು, ತಮ್ಮ ತಮ್ಮ ಸಮಾಜಕ್ಕೆ ಮೀಸಲಾತಿ ನೀಡಿದರು. ಆದರೆ, ಪಂಚಮಸಾಲಿಗಳಿಗೆ ಮೋಸ ಮಾಡಿದರು. ಹಣೆ ಮೇಲೆ ವಿಭೂತಿ ನೋಡಿ ವೋಟು ಹಾಕುತ್ತಿದ್ದೆವು. ಮತ ಕೊಟ್ಟು ಬೆಳೆಸಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿದ್ದರೆ ನಿಮ್ಮ ಫೋಟೊ ಹಾಕಿಕೊಳ್ಳುತ್ತಿದ್ದೆವು ಎಂದು ಲಿಂಗಾಯತ ನಾಯಕರ ಬಗ್ಗೆ ಕಿಡಿಕಾರಿದರು.

ನಿಜಲಿಂಗಪ್ಪ, ಜೆಎಚ್ ಪಟೇಲ್, ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿ ಹೋದರು. ಯಡಿಯೂರಪ್ಪ ಲಿಂಗಾಯತ ನಾಯಕ ಎಂದು ತಿಳಿದಿದ್ದೆವು. ದೊಡ್ಡ ಮಟ್ಟದ ಪಾದಯಾತ್ರೆ ಮಾಡಿದರೂ ಯಡಿಯೂರಪ್ಪ ಮೀಸಲಾತಿ ಕೊಡಲೇ ಇಲ್ಲ. 10 ಲಕ್ಷ ಜನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದಿದ್ದ ಸಮಾವೇಶದಲ್ಲಿ ಭಾಗಿಯಾದ್ದರು. ಸಮಾಜ ಒಗ್ಗಟ್ಟಾದರೂ ಯಡಿಯೂರಪ್ಪ ಮನಸ್ಸು ಕರಗಲಿಲ್ಲ. ಸಿಎಂ ಬೊಮ್ಮಾಯಿ ಮೂಲತಃ ಕಮಡೊಳ್ಳಿಯವರು. ವಿಜಯೇಂದ್ರ ಅರಮನೆ ಮೈದಾನದ ಸಮಾವೇಶ ಅನುಮತಿಗೆ ಅಡ್ಡಗಾಲು ಹಾಕಿದಾಗ ಬೊಮ್ಮಾಯಿ ಅವರೇ ಅನುಮತಿ ಕೊಡಿಸಿದ್ದರು. ಎಲ್ಲರ ಕೈಯಲ್ಲಿ ಕೈ ಇಟ್ಟು ಸಾಹೇಬರು ಮೀಸಲಾತಿ ನೀಡುವುದಾಗಿ ಮಾತು ಕೊಟ್ಟಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅಧಿವೇಶನ ಮುಗಿಯುವ ಹೊತ್ತಿಗೆ ಬೊಮ್ಮಾಯಿ ಸಾಹೇಬರು ಮೀಸಲಾತಿ ಕೊಡುತ್ತಾರೆ ಎಂದು ನಮ್ಮ ಮನವೊಲಿಸಿದರು. ಆದರೆ, ಇದುವರೆಗೆ ಮೀಸಲಾತಿ ನೀಡಲಿಲ್ಲ. ಸಿಎಂ ಬೊಮ್ಮಾಯಿ ಮನವಿ ಮೇರೆಗೆ ನಾವು ಹೋರಾಟ ಮೂಂದೂಡಿದ್ದೆವು. ಎರಡು ತಿಂಗಳು ಸಮಯ ತೆಗೆದುಕೊಂಡು, ಆದರೆ ಮೀಸಲಾಯಿ ಘೋಷಣೆ ಮಾಡಲಿಲ್ಲ. ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ 101 ಲೀಟರ್ ಹಾಲಿನ ಅಭಿಷೇಕ ಮಾಡುತ್ತೇವೆ. ಹೇಗೆ ಕಿತ್ತೂರು ರಾಣಿ ಚೆನ್ನಮ್ಮನ ಸ್ಮರಣೆ ಮಾಡುತ್ತೇವೋ ಹಾಗೇ ನಿಮ್ಮ ಸ್ಮರಣೆ ಮಾಡುತ್ತೇವೆ. ಸವಣೂರು ಖಾರ ತುಲಾಭಾರ ಮಾಡಿಸುತ್ತೇವೆ ಎಂದು ಹೇಳಿದರು.

ಮೀಸಲಾತಿ ನೀಡದಂತೆ ಯಡಿಯೂರಪ್ಪ ಒತ್ತಡ
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಂತೆ ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರು ಒತ್ತಡ ಹಾಕ್ತಿದ್ದಾರೆ ಎಂದು ಕೆಲವರು ನಮಗೆ ಹೇಳಿದ್ದಾರೆ. ಬೊಮ್ಮಾಯಿ ಮೀಸಲಾತಿ ನೀಡಿದರೆ ಎಲ್ಲಿ ಲಿಂಗಾಯತ ಲೀಡರ್ ಆಗುವರೋ ಎಂದು ಯಡಿಯೂರಪ್ಪನಿಗೆ ಹೊಟ್ಟೆಕಿಚ್ಚು ಇರಬಹುದು. ಹೋರಾಟಕ್ಕೆ ನೀವೇನಾದರೂ ತೊಂದರೆ ಮಾಡಿದರೆ ನೀವು ಹೋದಲ್ಲೆಲ್ಲ ಕಪ್ಪು ಬಾವುಟ ಹಾರಿಸುತ್ತೇವೆ. ಶಿಕಾರಿಪುರದವರೆಗೆ ಪಾದಯಾತ್ರೆ ಮಾಡಲೂ ಸಿದ್ಧರಿದ್ದೇವೆ ಎಂದು ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ ಸ್ವಾಮೀಜಿ, ವಿಜಯೇಂದ್ರ ಸಣ್ಣ ಹುಡುಗ, ಮೊದಲು ನಮ್ಮ ಮೀಸಲಾತಿ ಹೋರಾಟಕ್ಕೆ ತೊಂದರೆ ನೀಡಿದರು, ಬಳಿಕ ತಪ್ಪಿನ ಅರಿವಾಗಿ ಸುಮ್ಮನೆ ಕುಳಿತರು ಎಂದು ತಿಳಿಸಿದರು.

ಇದಕ್ಕೂ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮಿಜಿ‌ ನೇತೃತ್ವದಲ್ಲಿ ಮುಂಜಾನೆ ಶಿಗ್ಗಾಂವಿ ಪಟ್ಟಣದ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ರ‍್ಯಾಲಿ ಆರಂಭ ಮಾಡಲಾಯಿತು. ಜನರು ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಪೊಲೀಸರು ತಡೆದಿದ್ದರಿಂದ ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು‌ ರ‍್ಯಾಲಿಯಲ್ಲಿ ಭಾಗವಹಿಸಿದರು. ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಸಿಎಂ ನಿವಾಸದೆದುರು ಧರಣಿ ನಡೆಸಿದರು.

ಯತ್ನಾಳ್‌ ಬರುವವರೆಗೆ ಧರಣಿ ಮುಂದುವರಿಕೆ
2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ನಡೆಸುತ್ತಿರುವ ಧರಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‌ಬರುವವರೆಗೂ ಮುಂದುವರಿಯುತ್ತದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿರುವ ಯತ್ನಾಳ್ ಹಾವೇರಿಗೆ ಆಗಮಿಸುತ್ತಿದ್ದಾರೆ. ಅವರು ಬರುವವರೆಗೆ ಸಿಎಂ ಮನೆ ಮುಂದೆ ಧರಣಿಯನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಧಿವೇಶನ ಮುಗಿಯುವುದರೊಳಗೆ ಸಿಎಂ ಬೊಮ್ಮಾಯಿ ಅವರು ಸಮುದಾಯಕ್ಕೆ ಮೀಸಲಾತಿ ಕೊಡುತ್ತಾರೆ ಎಂದು ಯತ್ನಾಳ್‌ ಈ ಹಿಂದೆ ಮನವೊಲಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರವೇನೆಂದು ಅವರನ್ನು ಪ್ರಶ್ನಿಸಲು ಸಮುದಾಯದ ಜನ ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ಪಂಚಮಸಾಲಿ ಮೀಸಲು ಹೋರಾಟ: ಸಿಎಂ ಬೊಮ್ಮಾಯಿ ಶಿಗ್ಗಾಂವ್‌ ನಿವಾಸದೆದುರು ಬೃಹತ್‌ ಪತಿಭಟನೆ, ಸಾವಿರಾರು ಮಂದಿ ಭಾಗಿ

Exit mobile version