ಬೆಂಗಳೂರು: ಮುಂದಿನ ವರ್ಷ ಲೋಕಸಭಾ ಚುನಾವಣೆ (Lok Sabha Election 2024) ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ (Karnataka Congress) ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ರಾಜ್ಯದಲ್ಲಿ ಏನೆಲ್ಲ ಸಿದ್ಧತೆಗಳು ಬೇಕೋ ಅದನ್ನು ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ. ಈ ಸಂಬಂಧ ದೆಹಲಿಯಲ್ಲಿ ಹೈಕಮಾಂಡ್ ಜತೆ ಸಭೆಯನ್ನೂ ನಡೆಸಿದೆ. ಆದರೆ, ಇತ್ತ ರಾಜ್ಯ ಬಿಜೆಪಿಯಲ್ಲಿ (BJP Karnataka) ಮಾತ್ರ ವಿಧಾನಸಭಾ ಚುನಾವಣೆಯ ಸೋಲಿನ ಸೂತಕದ ಛಾಯೆಯಿಂದ ಯಾರೂ ಹೊರಬಂದಂತೆ ಕಾಣುತ್ತಿಲ್ಲ. ಅಲ್ಲದೆ, ಯಾವುದೇ ನಾಯಕರು ಉತ್ಸಾಹ ತೋರಲು ನಾಯಕ ಯಾರು ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಇನ್ನು ವಿಪಕ್ಷ ನಾಯಕರಾಗಲು (Leader of the Opposition) ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಲು (BJP state president) ಮಾಜಿ ಶಾಸಕ ಸಿ.ಟಿ. ರವಿ (CT Ravi) ಉತ್ಸಾಹ ಹೊಂದಿದ್ದಾರೆ. ಆದರೆ, ಈ ಇಬ್ಬರಿಗೂ ಈ ಹುದ್ದೆಗಳು ಕೈತಪ್ಪಿದೆಯೇ? ಎಂಬ ಅನುಮಾನ ಶುರುವಾಗಿದೆ.
ಫಲಿತಾಂಶ ಹೊರಬಂದು ಮೂರನೇ ತಿಂಗಳು ಚಾಲ್ತಿಯಲ್ಲಿದೆ. ಇಲ್ಲಿವರೆಗೂ ವಿಪಕ್ಷ ನಾಯಕನ ನೇಮಕ ಆಗಿಲ್ಲ. ತಮ್ಮನ್ನೇ ಮಾಡಲಿದ್ದಾರೆ ಎಂದು ಭಾವಿಸಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್ ತುದಿಗಾಲಲ್ಲಿ ನಿಲ್ಲಿಸಿದೆ. ಬಿಜೆಪಿ ವಲಯದಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಬೊಮ್ಮಾಯಿ ಅವರನ್ನೇ ಮಾಡುವುದಾದರೆ ಇಷ್ಟು ದಿನ ಏಕೆ ಬೇಕಿತ್ತು? ಎನ್ನುತ್ತಿರುವ ನಾಯಕರು.
ಇದನ್ನೂ ಓದಿ: HD Kumaraswamy : ಕುಮಾರಸ್ವಾಮಿ ರಿಟರ್ನ್ಸ್ ವಿತ್ ಚಾರ್ಜ್‌ಶೀಟ್; ಸರ್ಕಾರದ ಮೇಲೆ ಮಿಡ್‌ನೈಟ್ ಪ್ರಹಾರ!
ಬೊಮ್ಮಾಯಿ ಬಿಟ್ಟು ಬೇರೆಯವರಿಗೆ ಮಣೆ?
ವಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ತಲೆಯಲ್ಲಿ ಇರಿಸಿಕೊಂಡಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಬೊಮ್ಮಾಯಿ ಅವರನ್ನೇ ಆಯ್ಕೆ ಮಾಡಬಹುದು ಎಂದು ತಲೆಯಲ್ಲಿ ಇದ್ದಿದ್ದರೆ ಇಷ್ಟು ದಿನ ವಿಳಂಬ ಮಾಡುವ ಯಾವುದೇ ಕಾರಣ ಇರುತ್ತಿರಲಿಲ್ಲ. ಇನ್ನೂ ಆಯ್ಕೆ ನಡೆದಿಲ್ಲವೆಂದಾದರೆ ಬೇರೆ ಯಾವುದೋ ಸಮೀಕರಣದಲ್ಲಿ ಹೈಕಮಾಂಡ್ ನಾಯಕರು ತೊಡಗಿದ್ದಾರೆ. ಅದರ ಫಲಿತಾಂಶ ಅಚ್ಚರಿಯಾಗಿಯೇ ಇರಲಿದೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.
ರಾಜ್ಯಾಧ್ಯಕ್ಷ ಹುದ್ದೆ ತಪ್ಪಿದರೆ ಸಿ.ಟಿ. ರವಿ ಸ್ಥಿತಿ?
ರಾಜ್ಯಾಧ್ಯಕ್ಷ ಹುದ್ದೆಯೂ ತಪ್ಪಿದರೆ ಸಿ.ಟಿ. ರವಿ ಸ್ಥಿತಿ ಏನಾಗಬಹುದು ಎಂಬ ಚರ್ಚೆ ಸಹ ಬಿಜೆಪಿ ವಲಯದಲ್ಲಿ ಚಾಲ್ತಿಯಲ್ಲಿದೆ. ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರು. ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಹೆಸರು ಪಡೆದಿರುವ ಈ ನಾಯಕ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಹೋಗಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಾದರೂ ಇದೆಯಲ್ಲ ಎಂದು ಅವರು ಸಮಾಧಾನ ಮಾಡಿಕೊಂಡಿದ್ದರು. ಈಗ ನೋಡಿದರೆ ಅವರಿಗೆ ಆ ಸ್ಥಾನವೂ ಕೈತಪ್ಪಿದೆ.
ಸಿ.ಟಿ. ರವಿ ಅವರಿಗೆ ಕೊನೆಯ ಆಶಾಭಾವನೆ ಎಂದರೆ ರಾಜ್ಯಾಧ್ಯಕ್ಷ ಹುದ್ದೆಯಾಗಿದೆ. ಆದರೆ, ಅದೂ ಈಗ ದಕ್ಕುವಂತೆ ಕಾಣುತ್ತಿಲ್ಲ. ಅವರನ್ನು ರಾಜ್ಯಾಧ್ಯಕ್ಷ ಮಾಡುವುದಕ್ಕಾಗಿ ರಾಷ್ಟ್ರೀಯ ಮಟ್ಟದಿಂದ ಕೈಬಿಡುವ ಅಗತ್ಯ ಇರಲಿಲ್ಲ. ಅಧ್ಯಕ್ಷ ಸ್ಥಾನ ಸಿಕ್ಕ ನಂತರವೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹೊರಬರಬಹುದಿತ್ತು. ಹುದ್ದೆಯಿಂದ ಏಕಾಏಕಿ ತೆಗೆದಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: DK Shivakumar : ಅಣ್ಣ ಹೇಳಿದ್ದು ತಮ್ಮ ಕೇಳಬೇಕು; ಎಚ್‌ಡಿಕೆ ವಾಮ ಮಾರ್ಗ ಹೇಳಿಕೆಗೆ ಡಿಕೆಶಿ ತಿರುಗೇಟು!
ಕಡಿಮೆ ಹುದ್ದೆ ಒಪ್ಪೋದು ಕಷ್ಟ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು ರಾಜ್ಯ ಪ್ರಧಾನ ಕಾರ್ಯದರ್ಶಿ ಅಥವಾ ಇನ್ನಾವುದೇ ಸ್ಥಾನವನ್ನು ಒಪ್ಪಿಕೊಳ್ಳುವುದು ಕಷ್ಟ. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸ್ಥಾನವಿಲ್ಲದೆ ಬೇರೆಯವರ ಕೆಳಗೆ ಕೆಲಸ ಮಾಡುವುದೂ ಕಷ್ಟ. ಇಬ್ಬರ ಕನಸು ಹಾಗೂ ಭವಿಷ್ಯ ಈಗ ವರಿಷ್ಠರ ಕೈಯಲ್ಲಿದೆ. ಹೀಗಾಗಿ ಈ ಇಬ್ಬರೂ ಈಗ ದೆಹಲಿತ್ತ ನೋಡುತ್ತಿದ್ದು, ಖುಷಿಯ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ.