Site icon Vistara News

Basavaraj Bommai Birthday : ಮೆಕ್ಯಾನಿಕಲ್‌ ಎಂಜಿನಿಯರ್‌ ರಾಜಕಾರಣಿಯಾಗಿದ್ದು ಹೇಗೆ? ಇಲ್ಲಿದೆ ಬೊಮ್ಮಾಯಿ ಬದುಕಿನ ಕಥೆ

Basavaraj Bommai Birthday

ಹುಬ್ಬಳ್ಳಿ: ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ (ಜನವರಿ ೨೮) ತಮ್ಮ ೬೩ನೇ ಹುಟ್ಟುಹಬ್ಬದ ಸಂಭ್ರಮ. ಕಾಮನ್‌ ಮ್ಯಾನ್‌ ಸಿಎಂ ಎಂದೇ ಗುರುತಿಸಿಕೊಂಡಿರುವ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ತಮ್ಮ ತಂದೆ ಎಸ್‌.ಆರ್‌. ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮ ಅವರ ಸಮಾಧಿಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು.

ಬಹು ವರ್ಷಗಳ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ೨೦೨೧ರ ಜುಲೈ ೨೮ರಂದು ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡು ಕಳೆದ ಒಂದೂವರೆ ವರ್ಷದಿಂದ ಜನಪ್ರೀತಿಯ ಆಡಳಿತ ನೀಡುತ್ತಿದ್ದಾರೆ. ತಾನು ಎಷ್ಟೇ ಎತ್ತರಕ್ಕೇರಿದ್ದರೂ ತಂದೆ-ತಾಯಿಯ ಆಶೀರ್ವಾದವನ್ನು ನೆನಪಿಸಿಕೊಂಡು ನಮಿಸಿದ್ದಾರೆ.

ಮಾಜಿ ಸಿಎಂ ಎಸ್‌.ಆರ್‌. ಬೊಮ್ಮಾಯಿ ಮತ್ತು ಗಂಗಮ್ಮ ದಂಪತಿಯ ಪುತ್ರನಾಗಿರುವ ಬಸವರಾಜ ಬೊಮ್ಮಾಯಿ ಅವರು ಮೂಲತಃ ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌. ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ. ಇವು ಮೂರೂ ಸೇರಿ ಅವರನ್ನು ಒಬ್ಬ ಒಳ್ಳೆಯ ಕೃಷಿ ಪಂಡಿತ, ಉದ್ಯಮಗಳ ಆಸಕ್ತ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಖರ ನೀರಾವತಿ ತಜ್ಞನಾಗಿ ರೂಪಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ತಾಯಿಯ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಪತ್ನಿ ಚೆನ್ನಮ್ಮ ಮತ್ತು ಇಬ್ಬರು ಮಕ್ಕಳಾದ ಭರತ್‌ ಮತ್ತು ಅದಿತಿಯ ಜತೆಗಿನ ಚಂದದ ಸಂಸಾರ ಬೊಮ್ಮಾಯಿಯವರದು. ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿಗೆ ಬೊಮ್ಮಾಯಿ ಅವರ ಬದುಕು ಹೆಚ್ಚು ಹತ್ತಿರ. ಯಾಕೆಂದರೆ, ಅವರ ರಾಜಕೀಯ ಜೀವನದ ಮೊದಲ ಪಾಠ ಸಿಕ್ಕಿದ್ದೇ ಮನೆಯಲ್ಲಿ. ಜನತಾ ಪರಿವಾರದ ಪ್ರಖಾಂಡ ನಾಯಕ ಎಸ್‌.ಆರ್‌. ಬೊಮ್ಮಾಯಿ ಅವರ ಮನಗೆ ಬರುತ್ತಿದ್ದ ರಾಜಕಾರಣಿಗಳು, ಅಲ್ಲಿ ನಡೆಯುತ್ತಿದ್ದ ತಂತ್ರಗಾರಿಕೆ, ಮಾತುಗಾರಿಕೆಗಳನ್ನು ನೋಡುತ್ತಾ ಬೆಳೆದವರು ಬೊಮ್ಮಾಯಿ. ಅದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲೆಕ್ಕಾಚಾರದಲ್ಲಿ ಅವರು ಹೆಚ್ಚು ಪರಿಣತರು. ಸಂಸದೀಯ ವ್ಯವಹಾರ, ರಾಜಕೀಯ ಸಂಧಾನ ಸಾಮರ್ಥ್ಯ, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಗುಣ ಅವರನ್ನು ಒಬ್ಬ ಸಜ್ಜನ ಮತ್ತು ಎಲ್ಲರೂ ಗೌರವಿಸುವ ರಾಜಕೀಯ ನಾಯಕನಾಗಿ ರೂಪಿಸಿವೆ.

ಮಾಜಿ ಸಿಎಂ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೂಲಕ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ ಬೊಮ್ಮಾಯಿ ಅವರು ಎರಡು ಬಾರಿ (೧೯೯೮, ೨೦೦೪) ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಜನತಾದಳ ಒಡೆದಾಗ ಅವರು ಮುಂದೆ ಜನತಾದಳ (ಸಂಯುಕ್ತ) ಸೇರಿಕೊಂಡ ಬೊಮ್ಮಾಯಿ ಮುಂದೆ 2008ರ ಫೆಬ್ರವರಿ ತಿಂಗಳಲ್ಲಿ ಬಿಜೆಪಿಗೆ ಪ್ರವೇ ಪಡೆದರು.

೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಗೆದ್ದರು. ಆವತ್ತಿನಿಂದಲೇ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿ ಗುರುತಿಸಿಕೊಂಡಿದ್ದರು. 2008 ಮತ್ತು 2013ರ ನಡುವೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಯಡಿಯೂರಪ್ಪ ಅವರ ಅವಧಿಯಲ್ಲಿ ಗೃಹ ಖಾತೆ, ಸಹಕಾರ, ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರಗಳು ಮತ್ತು ಶಾಸಕಾಂಗ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

2021ರ ಜುಲೈ 28 ರಂದು ಬಿ.ಎಸ್.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿ ಅವರು ಕಾಮನ್‌ ಮ್ಯಾನ್‌ ಸಿಎಂ ಎಂದೇ ಖ್ಯಾತಿ ಪಡೆದವರು.

ಇದನ್ನೂ ಓದಿ | Basavaraj Bommai Birthday Special : ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಾತ್ಮದ ಮಾತು ಅದ್ಭುತ: ಇಲ್ಲಿವೆ ಒಂದಷ್ಟು ಉದಾಹರಣೆ

Exit mobile version