Site icon Vistara News

Attibele Fire Accident : ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡರೆ ಮಾತ್ರ ಇಂಥ ದುರಂತ ನಿಲ್ಲಲಿದೆ!

Basavaraj Bommai on Attibele Fire Accident

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತಕ್ಕೆ (Attibele Fire Accident) ಸ್ಥಳೀಯ‌ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ. ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸೆನ್ಸ್ (Illegal License) ಕೊಡುವುದು, ಅಕ್ರಮ ಶೇಖರಣೆಗೆ (Illegal storage of firecrackers) ಅವಕಾಶ ಮಾಡಿಕೊಟ್ಟಿರುವುದರಿಂದ ಇಷ್ಟು ದೊಡ್ಡ ದುರಂತ ಆಗಿದೆ. ತಪ್ಪಿತಸ್ಥ ಅಧಿಕಾರಗಳ ಮೇಲೆ ಕ್ರಮ ಕೈಗೊಂಡರೆ ಇಂತಹ ಅನಾಹುತಗಳು ತಪ್ಪಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Former Chief Minister Basavaraj Bommai) ಹೇಳಿದ್ದಾರೆ.

ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಪಟಾಕಿ ನಿರ್ವಹಣೆಯ ನಿಯಮಗಳ (Rules for fireworks management) ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಇಷ್ಟು ದೊಡ್ಡ ದುರಂತ ಆಗಿದ್ದು, ಸರ್ಕಾರ ಕಣ್ತೆರೆಯದಿದ್ದರೆ ಇನ್ನಷ್ಟು ದುರಂತಗಳು ನಡೆಯಲಿವೆ ಎಂದು ಹೇಳಿದರು.

ಇದನ್ನೂ ಓದಿ: Attibele Fire Accident : ಪಟಾಕಿ ಗೋದಾಮಿನ ಮಾಲೀಕನ ಮೇಲೆ ಕ್ರಮ: ಸಿಎಂ ಸಿದ್ದರಾಮಯ್ಯ

ಅತ್ತಿಬೆಲೆ ಪಟಾಕಿ ದುರಂತ ಘೋರ

ಅತ್ತಿಬೆಲೆ ಪಟಾಕಿ ದುರಂತವು ಘೋರವಾಗಿದೆ. ಇದರಲ್ಲಿ 14 ಜನ ಮೃತಪಟ್ಟಿದ್ದಾರೆ. ಇದು ಆಘಾತಕಾರಿ ವಿಚಾರವಾಗಿದ್ದು, ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಿ. ಅಲ್ಲದೆ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲಿ. ಹಾವೇರಿಯಲ್ಲೂ ಪಟಾಕಿ ದುರಂತ ಆಗಿತ್ತು. ಕಾನೂನಿನಲ್ಲಿ ಪಟಾಕಿಗಳ ಇಷ್ಟೊಂದು ಪ್ರಮಾಣದ ಶೇಖರಣೆಗೆ ಅವಕಾಶ ಇಲ್ಲ. ಈ‌ ಒಂದೂವರೆ ತಿಂಗಳಲ್ಲಿ ಎರಡನೇ ಪಟಾಕಿ ದುರಂತ ನಡೆದಿದೆ. ಈ ಮೊದಲು ಹಾವೇರಿಯಲ್ಲಿ ದುರಂತ ನಡೆದು ನಾಲ್ಕು ಜನ ಮೃತಪಟ್ಟಿದ್ದರು. ಈಗ ಅತ್ತಿಬೆಲೆಯಲ್ಲಿ 14 ಜನ ಮೃತಪಟ್ಟಿದ್ದಾರೆ. ಅಂದರೆ, ನಿಯಮಗಳ ಪಾಲನೆ ಆಗುತ್ತಿಲ್ಲ ಅಂತ ಇದರಿಂದ ಗೊತ್ತಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ. ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಇಂಥ ಘಟನೆಗಳು ನಿಲ್ಲುತ್ತವೆ ಎಂದು ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.

20 ಕಾರ್ಮಿಕರಿದ್ದರು

ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಆದರೆ, ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ದುರಂತ ಸಂಭವಿಸಿದೆ. ಮಳಿಗೆಯಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನವೀನ್ ಎಂಬುವವರ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಿಂದ ಅನ್‌ಲೋಡ್‌ ಮಾಡುವಾಗ ಈ ಅವಘಡ ಸಂಭವಿಸಿದೆ.

ಮೃತರಲ್ಲಿ ಏಳು ಜನ ಒಂದೇ ಗ್ರಾಮದವರು

ಅಗ್ನಿ ಅವಘಡದಲ್ಲಿ ಸಜೀವವಾಗಿ ದಹನಗೊಂಡ 14 ಜನರ ಪೈಕಿ ಏಳು ಮಂದಿ ಒಂದೇ ಗ್ರಾಮದವರು ಎಂದು ತಿಳಿದುಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಟಿ ಅಮ್ಮಾಪೇಟೆ ಎಂಬ ಗ್ರಾಮದ ಗಿರಿ, ಆದಿಕೇಶವನ್, ವಿಜಯ್ ರಾಘವನ್, ಇಲಂಬರದಿ, ಆಕಾಶ, ವೇಡಪನ್ ಸಚಿನ್ ಸೇರಿ ಏಳು ಯುವಕರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಹಿಂಭಾಗ ಕೊಠಡಿಯಲ್ಲಿ ಸಜೀವ ದಹನ

ಗೋದಾಮಿನ ಒಳಗಡೆ ಸಿಲುಕಿಕೊಂಡ ಕಾರ್ಮಿಕರಿಗೆ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ಸಹ ಇರದೇ ಇದ್ದರಿಂದ ಹೊರಗೆ ಹೋಗುವ ದಾರಿ ಕಾಣದಂತಾಗಿತ್ತು. ಹೀಗಾಗಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಿಂಬದಿಗೆ ಓಡಿ ಹೋಗಿದ್ದರು. ಆದರೆ, ಹಿಂಬದಿ ಸಹ ಪಟಾಕಿಗಳ ರಾಶಿಯೇ ಇತ್ತು. ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲು ದ್ವಾರ ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡರು.

ಇದನ್ನೂ ಓದಿ: Attibele Fire Accident : ಎಮರ್ಜೆನ್ಸಿ ಎಕ್ಸಿಟ್‌ ಇದ್ದಿದ್ದರೆ ಬದುಕುತ್ತಿದ್ದರು ಆ 14 ಮಂದಿ!

ಕೊನೆಗೆ ಅವರಿಗೆ ಕಾಣಿಸಿದ್ದೇ ಪಟಾಕಿ ಗೋದಾಮಿನ ಹಿಂಭಾಗ ಇರುವ ಕೊಠಡಿಯಾಗಿದೆ. ಎಲ್ಲರೂ ಅಲ್ಲಿಯೇ ಹೋಗಿ ಅವಿತು ಕುಳಿತುಕೊಂಡಿದ್ದರು. ಹೀಗಾಗಿ ಒಂದೇ ಜಾಗದಲ್ಲಿ ‌ಏಳು‌ ಜನ ಸ್ನೇಹಿತರು ಸುಟ್ಟು ಕರಕಲಾಗಿ ಹೋದರು. ಇನ್ನು ಪಟಾಕಿ ಸಂಗ್ರಹಿಸಲು ಗೋದಾಮು ಮಾಲೀಕರ ಬಳಿ ಪರವಾನಗಿಯೇ ಇಲ್ಲ ಎಂಬ ಮಾಹಿತಿ ಸಹ ಲಭ್ಯವಾಗಿದೆ.

Exit mobile version