ಕೊಪ್ಪಳ: ಕೊಪ್ಪಳದಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲಾಗುವುದು. ತಳಕಲ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಐಐಟಿಯಾಗಿ ಮೇಲ್ದರ್ಜೆಗೇರಿಸುವ ತೀರ್ಮಾನ ಮಾಡಲಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆರಂಭಿಕವಾಗಿ 50 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ನೂತನ ನೂರು ಹಾಸಿಗೆಗಳ ಆಸ್ಪತ್ರೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಮನೆ ಮಗನಾಗಿ ಬಂದಿದ್ದೇನೆ. ನಾವು ನಿಮ್ಮ ಋಣದಲ್ಲಿದ್ದೇವೆ, ಆ ಋಣ ತೀರಿಸುತ್ತೇವೆ. ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಇದನ್ನೂ ಓದಿ | ಅಂಜನಾದ್ರಿಯೇ ಹನುಮ ಜನ್ಮಸ್ಥಳ; ನಂಬಿಕೆಗಿಂತ ಬೇರೆ ಪುರಾವೆ ಬೇಕಿಲ್ಲ: ಸಿಎಂ ಬೊಮ್ಮಾಯಿ
ನಾಲ್ಕೈದು ಜಿಲ್ಲೆಗಳಲ್ಲಿ ತಾಯಿ-ಮಕ್ಕಳ ಆರೋಗ್ಯ, ಪೌಷ್ಟಿಕತೆ ಕುರಿತು ವಿಶೇಷ ಗಮನ ಹರಿಸುತ್ತೇವೆ. ಅವೆಲ್ಲಾ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾಗಿವೆ. ಈಗ ಜಿಲ್ಲೆಯಲ್ಲಿ ಉದ್ಘಾಟನೆಗೊಂಡಿರುವ ಈ ಆಸ್ಪತ್ರೆಗೆ ಎಲ್ಲ ಸೌಲಭ್ಯಗಳನ್ನು ನಮ್ಮ ಸರ್ಕಾರ ಒದಗಿಸುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಒಂದು ಭಾಗದಲ್ಲಿ ನೀರಾವರಿ, ಇನ್ನೊಂದು ಭಾಗದಲ್ಲಿ ಒಣಬೇಸಾಯವಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಕೊಪ್ಪಳ ಏತ ನೀರಾವರಿ ಯೋಜನೆ ಪ್ರಾರಂಭ ಮಾಡಿಸಿದೆ. ಬಿ ಸ್ಕೀಂನಲ್ಲಿರುವ ಎಲ್ಲ 9 ಸ್ಕೀಂಗಳಿಗೂ ಚಾಲನೆ ಕೊಡಿಸಲಾಯಿತು. ಜಿಲ್ಲೆಯ ರೈತರಿಗೆ ಅನುಕೂಲವಾಗುವಂತಹ ತೀರ್ಮಾನ ತೆಗೆದುಕೊಂಡು 12.8 ಟಿಎಂಸಿ ನೀರಾವರಿ ಯೋಜನೆಗೆ ಚಾಲನೆ ಕೊಡಿಸಲಾಯಿತು. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಸೇರಿಸಲಾಗಿದೆ ಎಂದರು.
ಜನರ ದುಡಿಮೆಯಲ್ಲಿ ಆರ್ಥಿಕತೆ ಇದೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಆಗಬೇಕು. ಸ್ತ್ರೀಯರಿಗೆ, ಯುವಕರಿಗೆ ದುಡಿಮೆಗೆ ಅನುಕೂಲವಾಗುವಂತಹ ಯೋಜನೆ ಜಾರಿ ಮಾಡಲಾಗಿದೆ. ಸರ್ವರೂ ವಿಕಾಸವಾಗುವ ಕರ್ನಾಟಕ ನಿರ್ಮಾಣ ಮಾಡಲು ಹೊರಟಿದ್ದೇವೆ. ಅದಕ್ಕೆ ನಮಗೆ ನಿಮ್ಮ ಆಶೀರ್ವಾದ ಬೇಕು ಎಂದು ಹೇಳಿದರು.
ಇದನ್ನೂ ಓದಿ | Siddaramotsava | ನಾನೂ ಸಿಎಂ ಆಕಾಂಕ್ಷಿ ಅನ್ನೋದರಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ ನೇರ ಮಾತು