Site icon Vistara News

Basavaraja Bommai : ರಾಜ್ಯದಲ್ಲಿ ನಡೆದಿದ್ದು ಜಾತಿ ಗಣತಿ ಹೌದಾ?; ಬೊಮ್ಮಾಯಿಗೆ ಸಂಶಯ

Basavaraja Bommai

#image_title

ಹುಬ್ಬಳ್ಳಿ: ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಹೊರಟಿರುವುದು ಜಾತಿ ಗಣತಿ (Caste Census) ಹೌದೋ ಅಲ್ಲವೋ ಎನ್ನುವುದು ಸ್ಪಷ್ಟವಾಗಲಿ, ಆ ವರದಿ ಪ್ರಕಟವಾದರೆ ಕೆಲವು ಸಮುದಾಯಗಳಿಗೆ ಅಸಮಾಧಾನವಾಗಲಿದೆಯಾ ಈ ಬಗ್ಗೆ ಮೊದಲು ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ನವೆಂಬರ್‌ನಲ್ಲಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದೆ. ಕಾಂಗ್ರೆಸ್‌ ಸರ್ಕಾರ ಇದನ್ನೇ ಜಾತಿ ಗಣತಿ ವರದಿ ಎಂದು ಹೇಳುತ್ತಿದೆ. ರಾಷ್ಟ್ರಾದ್ಯಂತ ಜಾತಿ ಗಣತಿ ನಡೆಸಬೇಕು, ಕರ್ನಾಟಕದಲ್ಲಿ ಸಲ್ಲಿಕೆಯಾಗಲಿರುವ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿವರ ಹೇಳಿಕೆ ಮಹತ್ವ ಪಡೆದಿದೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಬಹುದಿತ್ತು. ಚುನಾವಣೆ ಬಂತು ಅಂತ ಆ ಸಮಯದಲ್ಲಿ ಮಾಡಲಿಲ್ಲ. ಈಗ ಈ ಬಗ್ಗೆ ಮಾತನಾಡುತ್ತಾರೆ, ಅದು ಜಾತಿಗಣತಿ ಹೌದೋ ಅಲ್ಲವೊ ಅನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟತೆಯನ್ನು ನೀಡಬೇಕು ಎಂದರು.

160 ಕೋಟಿ ಖರ್ಚು ಮಾಡಿ ಜಾತಿ ಸಮೀಕ್ಷೆ ಮಾಡಿದ್ದು ಅದು ಯಾವ ಜಾತಿ ಸಮೀಕ್ಷೆ ಅನ್ನುವ ಸ್ಪಷ್ಟತೆ ಇಲ್ಲ. ಅದರ ಬಗ್ಗೆ ಸ್ಪಷ್ಟತೆಯನ್ನು ಸರ್ಕಾರ ಮೊದಲು ಕೊಡಲಿ. ವರದಿ ಆಧಾರದ ಮೇಲೆ ಸಾಧಕ ಭಾದಕಗಳ ಕುರಿತು ಚರ್ಚಿಸೋಣ ಅಂತ ಕಾಂಗ್ರೆಸ್ಸಿನ ನಾಯಕರು ಹೇಳಿದ್ದಾರೆ. ಈ ಸಮೀಕ್ಷೆಯ ಫಲಶ್ರುತಿ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ‌ ಅದರ ಫಲಿತಾಂಶ ಏನಾಗುತ್ತದೆ ? ಕೆಲವು ವರ್ಗದಲ್ಲಿ ಅಸಮಾಧಾನ ಉಂಟಾಗುತ್ತಾ ಈ ಬಗ್ಗೆ ಮೊದಲು ಚರ್ಚೆಯಾಗಲಿ ಎಂದು ಹೇಳಿದರು.

ಪ್ಯಾಲೆಸ್ತೀನ್‌ ಉಗ್ರರಿಗೆ ಕಾಂಗ್ರೆಸ್ ಬೆಂಬಲ

ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಕಾಂಗ್ರೆಸ್‌ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇದೊಂದು ಅಂತಾರಾಷ್ಟ್ರೀಯ ವಿಚಾರ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ಬಹಳ ವರ್ಷದ ಸಂಘರ್ಷ ಇದೆ. ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರು ಉಗ್ರವಾದಿಗಳು. ಅವರು ಪ್ಯಾಲೆಸ್ತೀನ್‌ ನಾಗರಿಕರಲ್ಲ. ಅದನ್ನು ಕಾಂಗ್ರೆಸ್ ಮರೆಮಾಚಲು ಪ್ರಯತ್ನಿಸುತ್ತಿದೆ. ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದರು.

ʻʻಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಭಯೋತ್ಪಾದಕರು ಒಂದೇ. ಅಮಾಯಕರು, ಹೆಣ್ಣುಮಕ್ಕಳು, ಮಕ್ಕಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತಿದೆ. ಇದನ್ನು ಯಾವುದೇ ಸಮಾಜ ಹಾಗೂ ಸಮುದಾಯ ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ತುಷ್ಟೀಕರಣದ ರಾಜಕಾರಣಕ್ಕೆ ಇಳಿಯುತ್ತಿದೆ ಇದು ದೊಡ್ಡ ದುರಂತʼʼ ಎಂದು ಬೊಮ್ಮಾಯಿ ಹೇಳಿದರು.

ಎಲ್ಲ ಕಾಮಗಾರಿಗಳ ತನಿಖೆ ನಡೆಸಲಿ

ನರಗುಂದ ಸೇರಿದಂತೆ ಕೆಲ ಕ್ಷೇತ್ರಗಳ ಹಿಂದಿನ ಕಾಮಗಾರಿಗಳ ತನಿಖೆ ಮಾಡಲು ಸಿಎಂ ಶಿಫಾರಸು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನರಗುಂದ ಸೇರಿದಂತೆ ಯಾವುದೇ ಕ್ಷೇತ್ರವಾಗಲಿ, ಕಾಮಗಾರಿಗಳ ತನಿಖೆ ಮಾಡಲಿ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಎಲ್ಲ ಇಲಾಖೆ ತನಿಖೆಯಾಗಲಿ, ಬೇಡ ಅಂದವರು ಯಾರು? ಕಾಮಗಾರಿ ಎಲ್ಲವೂ ಮುಗಿದಿದೆ, ಬಿಲ್ ಗಳನ್ನು ಸಹ ಕೊಡಲಾಗಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿನ ಕಾಮಗಾರಿಗಳ ಬಿಲ್ಲನ್ನು ಸರ್ಕಾರ ಇನ್ನೂ ಕೊಟ್ಟಿಲ್ಲ. ಮೊದಲು ಬಿಲ್ಲುಗಳನ್ನು ಕೊಡಲಿ, ನಂತರ ಎಲ್ಲೆಲ್ಲಿ ತಪ್ಪುಗಳು ನಡೆದಿದೆ ಇದರ ಬಗ್ಗೆ ತನಿಖೆಯಾಗಲಿ ಎಂದರು.

ಇದನ್ನೂ ಓದಿ: Caste Census : ರಾಜ್ಯದ ಜಾತಿಗಣತಿ ವರದಿ ಬಿಡುಗಡೆಗೆ ರಾಹುಲ್‌ ಸೂಚನೆ, ಸಿದ್ದರಾಮಯ್ಯ ಒಪ್ಪಿಗೆ

ರಾಜ್ಯ ಸರ್ಕಾರಕ್ಕೆ ಕೇಂದ್ರದ ಸ್ಟ್ರೋಕ್

ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರದ ಸ್ಟ್ರೋಕ್ ಆಗಿದೆ. ಬರ ಆದರೂ ಕಾವೇರಿ ಆದರೂ ಎಲ್ಲದಕ್ಕೂ ಕೇಂದ್ರ. ಕಡೆಗೆ ಬೆರಳು ತೋರಿಸುತ್ತಾರೆ. ಈಗ ವಿದ್ಯುತ್ ಅಭಾವದ ಹಿನ್ನೆಲೆ ಕೇಂದ್ರಕ್ಕೆ ಬೊಟ್ಟು ಮಾಡುತ್ತಿದ್ದಾರೆ. ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸರಿಯಾದ ಕಲ್ಲಿದ್ದಲುಗಳನ್ನು ಒದಗಿಸಿ. ವಿದ್ಯುತ್ ಉತ್ಪಾದನೆ ಮಾಡಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ತಮ್ಮ ಹಣಕಾಸಿನ ದುಸ್ಥಿತಿಗೆ ಅಸಮರ್ಪಕ ಕೆಲಸದಿಂದ ವಿದ್ಯುತ್ ಅಭಾವ ಬಿಗಡಾಯಿಸಿದೆ. ಸರಿಯಾದ ವಿದ್ಯುತ್ತನ್ನು ಪೂರೈಸುವುದು ರಾಜ್ಯ ಸರ್ಕಾರದ ಕರ್ತವ್ಯ. ವಿದ್ಯುತ್ ಉತ್ಪಾದನೆಗೆ ಕೇಂದ್ರ ಏನು ಸಹಾಯ ಮಾಡಬೇಕು ಎಂದು ಪ್ರಶ್ನಿಸಿದರು.

Exit mobile version