ಬೆಂಗಳೂರು: ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಅದರ ಅವಧಿ ಪೂರ್ಣ ಯಾವಾಗ?, ಸಸ್ಯಾಹಾರ, ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಮಾಡುವುದು ಆಹಾರ ಕಲಬೆರಕೆ ತಡೆ ಕಾಯಿದೆ ಅಡಿ ಶಿಕ್ಷಾರ್ಹ ಅಪರಾಧ ಎಂದು ರಾಜ್ಯ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಲಬೆರಕೆ ಕಾಫಿ ಪುಡಿ ಮಾರಾಟ ಮಾಡಿದ ಪ್ರಕರಣದಲ್ಲಿ ಸಕಲಕೇಶಪುರದ ಉದ್ಯಮಿಯೊಬ್ಬರಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಅನುಮೋದಿಸಿದೆ.
ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದ ಕಾಫಿ ಪುಡಿ ಮಾರಾಟ ಮಾಡಿದ ಆರೋಪದಡಿ ವಿಚಾರಣಾಧೀನ ನ್ಯಾಯಾಲಯವು ಸಕಲೇಶಪುರದ ಸೆಲೆಕ್ಟ್ ಕಾಫಿ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಅವರಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ರದ್ದು ಮಾಡಬೇಕು ಎಂದು ಕೋರಿ ಸಯ್ಯದ್ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಅರ್ಜಿದಾರನಿಗೆ ಆರು ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್, ಅರ್ಜಿದಾರರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಶರಣಾಗಿ, ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಕಾಫಿ ಪುಡಿಗೆ ಏನೇನು ಮಾನದಂಡ?
ಕಾಫಿ ಪುಡಿಯಲ್ಲಿ ಕೆಫೀನ್‌ನ ಪ್ರಮಾಣ ಶೇ. 0.6ಕ್ಕಿಂತ ಕಡಿಮೆ ಇರಬಾರದು. ಆದರೆ, ಈ ಪ್ರಕರಣದಲ್ಲಿ ತಪಾಸಣೆಗೊಳಪಡಿಸಿರುವ ಮಾದರಿಯಲ್ಲಿ ಕೇವಲ ಶೇ.0.4 ಪ್ರಮಾಣದ ಕೆಫೀನ್ ಇದೆ. ಜಲೀಯ ಸಾರದ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರಬಾರದು. ಆದರೆ, ತಪಾಸಣೆಗೊಳಪಡಿಸಿದ ಕಾಫಿ ಪುಡಿಯಲ್ಲಿ ಶೇ.55 ಇದೆ. ಮೇಲಾಗಿ, ಲೇಬಲ್ ಮೇಲೆ ಕಾಫಿ ಪುಡಿ ತಯಾರಾದ ಸಂಸ್ಥೆಯ ಹೆಸರು ಹೊರತುಪಡಿಸಿ, ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಮತ್ತಿತರ ಮಾಹಿತಿ ನಮೂದಿಸಿಲ್ಲ. ಅರ್ಜಿದಾರರು ಮಾರಾಟ ಮಾಡಿರುವ ವಸ್ತುವಿನ ಮೇಲೆ ಆಹಾರ ಕಲಬೆರಕೆ ತಡೆ ಕಾಯಿದೆಯಲ್ಲಿ ಹೇಳಿರುವಂತೆ ಬ್ಯಾಚ್ ಸಂಖ್ಯೆ, ಎಷ್ಟು ದಿನಗಳ ವರೆಗೆ ಬಳಕೆಗೆ ಉತ್ತಮವಾಗಿರಲಿದೆ ಹಾಗೂ ಸಸ್ಯಾಹಾರ ಅಥವಾ ಮಾಂಸಾಹಾರದ ಚಿಹ್ನೆ ನಮೂದಿಸಿಲ್ಲ. ಇದು ಕಾಯಿದೆಯ ಸೆಕ್ಷನ್ 7(ಜಿ) ಮತ್ತು 7(ಜಿಜಿ) ಅಡಿಯಲ್ಲಿ ಅಪರಾಧವಾಗಲಿದ್ದು, ಸೆಕ್ಷನ್ 16(1)(ಎ) ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
೧೪ ವರ್ಷ ಹಿಂದಿನ ಪ್ರಕರಣ ಇದು
ಸಕಲೇಶಪುರದ ಆಹಾರ ನಿರೀಕ್ಷಕರು 2008ರ ಜೂನ್ 20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಸೆಲೆಕ್ಟ್ ಕಾಫಿ ವರ್ಕ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, 600 ಗ್ರಾಂ ಕಾಫಿ ಪುಡಿ ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು. ತಪಾಸಣೆಯಲ್ಲಿ ಕಾಫಿ ಪುಡಿ ಕಲಬೆರಕೆಯಾಗಿರುವುದು, ಪುಡಿಯಲ್ಲಿ ಶೇ 0.4 ಕೆಫೀನ್ ಮತ್ತು ಶೇ.55 ಜಲೀಯ ಸಾರದ ಅಂಶ ಇರುವುದು ಖಚಿತವಾಗಿತ್ತು. ಜತೆಗೆ, ಮಾರಾಟದ ಸಂದರ್ಭದಲ್ಲಿ ಯಾವುದೇ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕಗಳನ್ನು ಮುದ್ರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಸಯ್ಯದ್ ಅಹ್ಮದ್‌ಗೆ ಶಿಕ್ಷೆ ವಿಧಿಸಿತ್ತು. ಅವರು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ | ಯುಬಿ ಸಿಟಿಯಲ್ಲಿ ಉದ್ಯಮಿ ಪುತ್ರನ ಮೇಲೆ ಹಲ್ಲೆ ಪ್ರಕರಣ: ನಲಪಾಡ್ ವಿಚಾರಣೆ ಮರು ಆರಂಭಕ್ಕೆ ಕೋರ್ಟ್ ಸಮ್ಮತಿ