Site icon Vistara News

BBMP Divide: ಬಿಬಿಎಂಪಿ 5 ಭಾಗ ಮಾಡಲು ತಯಾರಿ; ರಾಜ್ಯ ಸರ್ಕಾರದ ನಡೆಗೆ ಕಾಂಗ್ರೆಸ್ಸಿಗರಿಂದಲೇ ವಿರೋಧ!

BBMP Divide

ಬೆಂಗಳೂರು: ಆಡಳಿತ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಐದು ವಿಭಾಗಗಳನ್ನಾಗಿ (BBMP Divide) ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ, ಇದೀಗ ವಿಭಜನೆಗೆ ಕಾಂಗ್ರೆಸ್ಸಿಗರಿಂದಲೇ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಮಾಜಿ ಮೇಯರ್ ಹಾಗೂ ಉಪ ಮೇಯರ್‌ಗಳಿಂದ ರಾಜ್ಯ ಸರ್ಕಾರ ನಡೆಗೆ ವಿರೋಧ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆ ತಯಾರಿಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನಡೆಸಿದ ಸಭೆಯಲ್ಲಿ ಕೆಲ ಮಾಜಿ ಮೇಯರ್‌ಗಳು, ಬಿಬಿಎಂಪಿ ವಿಭಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಮೇಯರ್, ಉಪ ಮೇಯರ್‌ಗಳ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆಶಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಯಾಕೆ ವಿಭಜನೆ ಬೇಡ ಎನ್ನುವುದು ಸೇರಿ ಕೆಲ ಮಹತ್ವ ಅಂಶಗಳ ಮಾಹಿತಿ ಕಲೆ‌ ಹಾಕಲು ಮಾಜಿ ಮೇಯರ್ , ಉಪ‌ಮೇಯರ್‌ಗಳ‌ ನೇತೃತ್ವದಲ್ಲಿ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ.

ವಿಭಜನೆಗೆ ಕೈ ಮಾಜಿ‌ ಮೇಯರ್, ಉಪ ಮೇಯರ್‌ಗಳ ವಿರೋಧ ಯಾಕೆ?

ಇಂತಹ ಸಂದರ್ಭಗಳಲ್ಲಿ ವಿಭಜನೆ ಎಂದರೆ ಬಿಜೆಪಿಗೆ ನಾವೇ ಅಸ್ತ್ರ ಕೊಟ್ಟಂತೆ ಆಗಲಿದೆ, ಹಾಗಾಗಿ ಮೊದಲು ಬಿಬಿಎಂಪಿ ಚುನಾವಣೆ‌ ಮಾಡಬೇಕು. ನಂತರದಲ್ಲಿ ವಿಭಜನೆ ಬಗ್ಗೆ ನೋಡೋಣ ಎಂದು ಡಿಸಿಎಂಗೆ ಕಾಂಗ್ರೆಸ್ ಮಾಜಿ ಮೇಯರ್‌ಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವಿಭಜನೆಯಿಂದ ಆಡಳಿತ ವಿಕೇಂದ್ರೀಕರಣಗೊಂಡು ಜನರಿಗೆ ಉತ್ತಮ ಸೌಲಭ್ಯ ನೀಡಬಹುದು. ಭವಿಷ್ಯದ ಬೆಂಗಳೂರನ್ನು ವ್ಯವಸ್ಥಿತವಾಗಿ ರೂಪಿಸಬಹುದು ಎಂಬುವುದು ಕಾಂಗ್ರೆಸ್‌ ನಿಲುವಾಗಿದೆ. ಆದರೆ, ಇದಕ್ಕೆ ಬಿಜೆಪಿ, ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದ್ದು, ವಿಕೇಂದ್ರೀಕರಣ ನೆಪದಲ್ಲಿ ವಿಭಜಿಸಿದರೆ ಬೆಂಗಳೂರು ಅಭಿವೃದ್ಧಿ ಕುಂಠಿತವಾಗಲಿದೆ. ಬೆಂಗಳೂರು ಅಖಂಡವಾಗಿರಲು ಬಿಬಿಎಂಪಿ ಅಸ್ತಿತ್ವ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | DCM Post: ಮತ್ತೆ ಸಮುದಾಯವಾರು ಡಿಸಿಎಂ ಕೂಗು; ನಾವೂ ಬೇಡಿಕೆಯಿಟ್ಟಿದ್ದೇವೆ ಎಂದ ಸಚಿವ ಜಮೀರ್ ಅಹ್ಮದ್!

ಬಿಬಿಎಂಪಿ ವಿಭಜನೆ ಬೇಡ; ಇದು ಕನ್ನಡಿಗರಿಗೆ ಮಾರಕ: ಕರವೇ ನಾರಾಯಣ ಗೌಡ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ವಿಭಜಿಸುವ ಯತ್ನವನ್ನು ರಾಜ್ಯ ಸರ್ಕಾರ ನಿಲ್ಲಿಸಿ, ವಲಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿ, ಸುಗಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಇತ್ತೀಚೆಗೆ ಒತ್ತಾಯಿಸಿದ್ದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದ ಅವರು, ಪಾಲಿಕೆ ವಿಭಜನೆಯು ನಿಶ್ಚಿತವಾಗಿ ಕನ್ನಡಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೂ ಸಹ ಪಾಲಿಕೆ ವಿಭಜನೆಯ ಮಾತುಗಳು ಕೇಳಿಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತ್ತು. ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಸರ್ಕಾರದ ಕಾಳಜಿಯನ್ನು ನಾವು ಪ್ರಶ್ನಿಸುತ್ತಿಲ್ಲ. ಆದರೆ ಇದು ಕನ್ನಡಿಗರ ಪಾಲಿಗೆ ಸಮಸ್ಯಾತ್ಮಕವಾಗುವ ಹಿನ್ನೆಲೆಯಲ್ಲಿ ನಮ್ಮ ತಾತ್ವಿಕ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ವಿಭಜಿಸುವ ಯತ್ನವನ್ನು ಸರ್ಕಾರ ನಿಲ್ಲಿಸಿ, ವಲಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿ ಸುಗಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಎಂದು ತಿಳಿಸಿದ್ದರು.

ಬೆಂಗಳೂರು ಮಹಾನಗರ ಇತ್ತೀಚಿನ ದಿನಗಳಲ್ಲಿ ವಲಸಿಗರ ಸಂತೆಯಾಗಿ ಹೋಗಿದೆ. ಪ್ರತಿನಿತ್ಯ ಬೇರೆ ಬೇರೆ ರಾಜ್ಯಗಳಿಂದ ಜನರು ಗಂಟುಮೂಟೆ ಕಟ್ಟಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಬೆಂಗಳೂರಿನ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಚಹರೆಯನ್ನೇ ಈ ವಲಸಿಗರು ಬದಲಾಯಿಸುತ್ತಿದ್ದಾರೆ. ಬೆಂಗಳೂರಿನ ಮೂಲನಿವಾಸಿಗಳಾದ ಕನ್ನಡಿಗರೇ ಅತಂತ್ರ ಸ್ಥಿತಿಯಲ್ಲಿ ಬದುಕುವಂತ ಸಂದರ್ಭವನ್ನು ಈ ವಲಸಿಗರು ಸೃಷ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ನಗರದ ಸ್ವಾಸ್ಥ್ಯ, ಸಾಮರಸ್ಯಕ್ಕೆ ಧಕ್ಕೆ ತಂದು ಸಂಘರ್ಷವನ್ನು ನಿರ್ಮಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇಂಥ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಿ ಐದು ಪಾಲಿಕೆಗಳನ್ನಾಗಿ ಮಾಡಿದರೆ ವಲಸಿಗರು ಹೆಚ್ಚು ಇರುವ ಪಾಲಿಕೆಗಳನ್ನು ಇದೇ ಜನರು ನಿಯಂತ್ರಣಕ್ಕೆ ತಂದುಕೊಂಡರೆ ಕನ್ನಡಿಗರು ಎಲ್ಲಿಗೆ ಹೋಗಬೇಕು? ಬೆಳಗಾವಿ ಮಹಾನಗರಪಾಲಿಕೆಯ ಇತಿಹಾಸ ಸರ್ಕಾರಕ್ಕೆ ಗೊತ್ತಿಲ್ಲದೇ ಏನಿಲ್ಲ. ಬೆಂಗಳೂರಿನಲ್ಲೂ ಇಂಥ ಪಾಲಿಕೆಗಳು ಬೇಕೇ? ಎಂದು ಅವರು ಪ್ರಶ್ನಿಸಿದ್ದರು.

Exit mobile version