ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ನಗರ ಜಿಲ್ಲೆ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯು ಬುಧವಾರ ನಡೆದಿದ್ದು, ಬಿಬಿಎಂಪಿ ಗುತ್ತಿಗೆದಾರರ (BBMP contractors) ಬಾಕಿ ಬಿಲ್ ಬಗ್ಗೆ ಮಹತ್ವದ ಚರ್ಚೆಯಾಗಿದೆ. ಕೂಡಲೇ ಬಾಕಿ ಬಿಲ್ ಪಾವತಿ ಮಾಡಿ, ಇಲ್ಲದಿದ್ದರೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ (BBMP elections) ಇದರ ಪೆಟ್ಟು ತಿನ್ನಬೇಕಾಗುತ್ತದೆ ಎಂದು ಬೆಂಗಳೂರಿನ ಎಲ್ಲ ಶಾಸಕರು ಸಿಎಂ, ಡಿಸಿಎಂ ಗಮನಕ್ಕೆ ತಂದರು. ಆದರೆ, ಇದಕ್ಕೆ ಒಪ್ಪದ ಉಭಯ ನಾಯಕರು, ಈಗ ತನಿಖೆಯ ಹೆಜ್ಜೆಯನ್ನು ಇಟ್ಟಾಗಿದೆ. ಈ ಸಮಯದಲ್ಲಿ ಹಿಂದೆ ಸರಿಯಲಾಗದು. ತನಿಖೆಯಾಗಿ ವರದಿ ಬರಲಿ. ನ್ಯಾಯಯುತವಾಗಿ ಕೆಲಸ ಮಾಡಿದವರಿಗೆ ಯಾವುದೇ ಅನ್ಯಾಯವಾಗದು ಎಂದು ಹೇಳಿದ್ದಾಗಿ ತಿಳಿದುಬಂದಿದೆ. ಇಷ್ಟಾದರೂ ಕಮಿಷನ್ ಪಾಲಿಟಿಕ್ಸ್ (Commission Politics) ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.
ಸಿಎಂ ನೇತೃತ್ವದಲ್ಲಿ ಸುದೀರ್ಘವಾಗಿ 3 ಗಂಟೆಗಳ ಕಾಲ ಬೆಂಗಳೂರು ಶಾಸಕರು (Meeting of MLAs in Bengaluru) ಚರ್ಚೆ ನಡೆಸಿದ್ದಾರೆ. ಬೆಂಗಳೂರು ಟ್ರಾಫಿಕ್ ಸಮಸ್ಯೆ, ಬೆಂಗಳೂರು ವಿಧಾನಸಭಾ ಕ್ಷೇತ್ರವಾರು ಮನೆ ಕಟ್ಟಿಸಿಕೊಡುವುದು, ಬೆಂಗಳೂರು ಕುಡಿಯುವ ನೀರು, ಡ್ರಗ್ಸ್ ನಿಯಂತ್ರಣ, ಕಾಮಗಾರಿಗಳ ಬಿಲ್ ಬಾಕಿ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬಂದಿದೆ. ಆದರೆ, ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಶಾಸಕರು ಗಂಭೀರವಾಗಿ ಚರ್ಚೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಅಡಿ ಹಾಕಿಕೊಂಡಿದ್ದ ಸ್ಕೀಂ ಫ್ಲಾಪ್! ಡಿ.ಕೆ. ಶಿವಕುಮಾರ್ ಅಸಮಾಧಾನ
ಸಭೆಯಲ್ಲಿ ಭಾಗಿಯಾಗಿದ್ದ ಕೆಲ ಶಾಸಕರಿಂದ ಗುತ್ತಿಗೆದಾರ ಬಾಕಿ ಬಿಲ್ ಅನ್ನು ಆದಷ್ಟು ಬೇಗ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂಬರುವ ಬಿಬಿಎಂಪಿ ಎಲೆಕ್ಷನ್‌ನಲ್ಲಿ ಪಕ್ಷಕ್ಕೆ ಬಹುದೊಡ್ಡ ಡ್ಯಾಮೇಜ್ ಆಗಲಿದೆ. ಎಲ್ಲ ಗುತ್ತಿಗೆದಾರರು ಸರ್ಕಾರದ ವಿರುದ್ಧ ತಿರುಗಿಬಿದ್ದರೆ ನಮ್ಮ ಟಾರ್ಗೆಟ್ ಮುಟ್ಟುವುದು ಬಹಳವೇ ಕಷ್ಟವಾಗುತ್ತದೆ. ಮುಂದೆ ಇದರ ಪರಿಣಾಮ ಆಗಬಾರದು ಎಂದರೆ ಈಗಲೇ ಸರಿಪಡಿಸಿಕೊಳ್ಳಬೇಕು. ತಕ್ಷಣವೇ ಅವರ ಬಾಕಿ ಬಿಲ್ ಅನ್ನು ಪಾವತಿ ಮಾಡಬೇಕು ಎಂಬ ವಾದವನ್ನು ಸಭೆಯ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಸದ್ಯ ಎಸ್‌ಐಟಿ ತನಿಖೆ (SIT Investigation) ನಡೆಯುತ್ತಿದೆ. ಈ ಸಂದರ್ಭದಲ್ಲಿ ಅರ್ಧಕ್ಕೆ ನಾವು ಹಿಂಪಡೆಯಲು ಆಗುವುದಿಲ್ಲ. ಈಗಾಗಲೇ 10 ದಿನದ ತನಿಖೆ ಆಗಿದೆ. ಇನ್ನು 20 ದಿನದಲ್ಲಿ ತನಿಖೆ ಮುಗಿಯಲಿದೆ. ಹೀಗಾಗಿ ಅದಕ್ಕೂ ಮುಂಚಿತವಾಗಿ ಬಿಲ್ ಬಿಡುಗಡೆ ಬೇಡ ಎಂದು ಹೇಳಿದ್ದಾರೆ. ಮುಂಚಿತವಾಗಿ ಬಿಲ್ ಬಿಡುಗಡೆ ಮಾಡಿದರೆ ನಾವು ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪದಲ್ಲಿ ಯಾವುದೇ ಅರ್ಥ ಇರುವುದಿಲ್ಲ. ತನಿಖೆಯ ಬಳಿಕ ಬಿಲ್ ಪಾವತಿ ಮಾಡಿಸೋಣ. ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೋ ಅವರಿಗೆ ಮೋಸ ಆಗುವುದಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.
ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ಸಜ್ಜಾಗಿ
ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ಸಜ್ಜಾಗುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಶಾಸಕರು, ಸಚಿವರಿಗೆ ಸೂಚನೆ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಯಬಹುದು. ಈಗಿನಿಂದಲೇ ಇದಕ್ಕೆ ಸಜ್ಜಾಗಿ ನಮ್ಮ ಗ್ಯಾರಂಟಿಗಳನ್ನು ವಾರ್ಡ್‌ಗಳಲ್ಲಿ ಹೆಚ್ಚು ಪ್ರಚಾರ ಮಾಡಿ ಎಂದು ಸೂಚನೆಯನ್ನು ನೀಡಿದ್ದಾರೆ.
ಯಾರು ಭಾಗಿ, ಯಾರು ಗೈರು?
ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಕೃಷ್ಣಪ್ಪ, ಎ. ಸಿ. ಶ್ರೀನಿವಾಸ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್, ಎಂಎಲ್‌ಸಿ ಯು.ಬಿ. ವೆಂಕಟೇಶ್, ನಾಗರಾಜ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು. ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಕೃಷ್ಣ ಬೈರೆಗೌಡ ಗೈರಾಗಿದ್ದರು.
ಇದನ್ನೂ ಓದಿ: Karnataka Politics : ಘರ್ ವಾಪ್ಸಿಗೆ ಸಿದ್ದರಾಮಯ್ಯ ಅಡ್ಡಗಾಲು; ಡಿಕೆಶಿ-ಸಿದ್ದು ಮಧ್ಯೆ ನೀನಾ-ನಾನಾ ಫೈಟ್!
ಬಂದು ವಾಪಸ್ ಹೋದ ಯತೀಂದ್ರ ಸಿದ್ದರಾಮಯ್ಯ
ಸಿಎಂ ಗೃಹ ಕಚೇರಿ ಕೃಷ್ಣಾಗೆ ಬಂದಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಭೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ವಾಪಸ್ ತೆರಳಿದರು. ಬೆಂಗಳೂರು ನಗರ ಸಚಿವರು ಮತ್ತು ಶಾಸಕರ ಸಭೆ ನಡೆಯುತ್ತಿದ್ದರಿಂದ ಅವರು ವಾಪಸಾಗಿದ್ದಾರೆ.