ಬೆಂಗಳೂರು: ಹಲವು ತಿಂಗಳುಗಳಿಂದ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಬಿಬಿಎಂಪಿ ಚುನಾವಣೆ ವಿಚಾರವು ಕೊನೆಗೂ ಇತ್ಯರ್ಥಗೊಂಡಿದೆ. ಡಿಸೆಂಬರ್ 31 ರೊಳಗೆ ಬಿಬಿಎಂಪಿ ಚುನಾವಣೆಯನ್ನು ಮುಗಿಸಲು ಸೂಚಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ, ಮೀಸಲಾತಿ ಪಟ್ಟಿಯನ್ನು ಸರಿಪಡಿಸಲೂ ಗಡುವು ನೀಡಿದೆ.
ಬಿಬಿಎಂಪಿ ಮೀಸಲಾತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ ಕೈಗೆತ್ತಿಕೊಂಡು ವಾದ-ಪ್ರತಿವಾದವನ್ನು ಆಲಿಸಿತು. ನ್ಯಾ.ಹೇಮಂತ್ ಚಂದನ್ ಗೌಡರ್ ಪೀಠದಲ್ಲಿ ವಿಚಾರಣೆ ನಡೆದಿದ್ದು, ಮೀಸಲಾತಿ ಪಟ್ಟಿ ಸರಿಪಡಿಸಲು 16 ವಾರಗಳ ಸಮಯ ಬೇಕು ಎಂದು ಸರ್ಕಾರದ ಪರವಾಗಿ ಎಎಜಿ ಧ್ಯಾನ್ ಚಿನ್ನಪ್ಪ ಅಫಿಡವಿಟ್ ಸಲ್ಲಿಸಿದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಪೀಠವು ನವೆಂಬರ್ 30ರ ಒಳಗೆ ಮೀಸಲಾತಿ ಪಟ್ಟಿ ಸರಿಪಡಿಸುವಂತೆ ಸರ್ಕಾರಕ್ಕೆ ಗಡುವು ನೀಡಿದೆ.
ಕಾಲಾವಕಾಶ ನೀಡಲು ನಿರಾಕರಣೆ
ಶುಕ್ರವಾರ ಬೆಳಗ್ಗೆ ಹೈಕೋರ್ಟ್ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ೧೬ ವಾರಗಳ ಕಾಲಾವಕಾಶವನ್ನು ಕೇಳುವ ಮೂಲಕ ಶೀಘ್ರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕಿತು. ಒಬಿಸಿ ಸೇರಿಸಿ ಹೊಸ ಮೀಸಲಾತಿ ಪಟ್ಟಿಗೆ ಕಾಲಾವಕಾಶ ಬೇಕು ಎಂದು ನ್ಯಾಯಪೀಠದ ಮುಂದೆ ವಾದ ಮಂಡಿಸಿತು. ಈ ಹಿನ್ನೆಲೆಯಲ್ಲಿ 16 ವಾರ ಕಾಲಾವಕಾಶ ಕೋರಿ ಪ್ರಮಾಣಪತ್ರವನ್ನೂ ಸಲ್ಲಿಸಿತು. ಆದರೆ, ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಎಚ್ಚರಿಕೆ ನೀಡಿತು. ಅಲ್ಲದೆ, ಪ್ರಮಾಣಪತ್ರಕ್ಕೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಸೂಚನೆ ನೀಡಿ ಕೆಲ ಸಮಯ ವಿಚಾರಣೆಯನ್ನು ಮುಂದೂಡಿತ್ತು. ಪುನಃ ವಿಚಾರಣೆ ನಡೆಸಿದ ಹೈಕೋರ್ಟ್, “ಡಿಸೆಂಬರ್ ೩೧ರೊಳಗೆ ಬಿಬಿಎಂಪಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಬೇಕು. ಮೀಸಲಾತಿ ಪಟ್ಟಿಯನ್ನು ನವೆಂಬರ್ ೩೧ರೊಳಗೆ ಸಲ್ಲಿಸಬೇಕು” ಎಂದೂ ಸೂಚನೆ ನೀಡಿದೆ.
ಇದನ್ನೂ ಓದಿ | ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಕೋರಿದ್ದ ಪಿಐಎಲ್ ಹೈಕೋರ್ಟ್‍ನಲ್ಲಿ ವಜಾ