ಬೆಂಗಳೂರು: ಎಂಟು ವಾರದೊಳಗೆ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಹಾಗೂ ವಾರ್ಡ್‌ವಾರು ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೊನೆಗೂ ಬಹು ನಿರೀಕ್ಷಿತ ಡಿ ಲಿಮಿಟೇಷನ್(ವಾರ್ಡ್ ಮರುವಿಂಗಡಣೆ ಪಟ್ಟಿಯನ್ನು ಪಾಲಿಕೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.
ಪಾಲಿಕೆ ವಾರ್ಡ್ ವಿಂಗಡಣೆ ಕೆಲಸ ಚುರಕುಗೊಳಿಸಿ ಪಟ್ಟಿ ತಯಾರಿಸಿರುವ ಡಿ ಲಿಮಿಟೇಷನ್ ಕಮಿಟಿ, 198 ಇದ್ದ ವಾರ್ಡ್ ಸಂಖ್ಯೆಯನ್ನು 243 ವಾರ್ಡ್‌ಗೆ ಏರಿಕೆ ಮಾಡಿದೆ. 2011ರ ಜನಗಣತಿ ಪ್ರಕಾರ ಪಟ್ಟಿ ಸಿದ್ಧ ಮಾಡಲಾಗಿದ್ದು, ಒಂದು ವಾರ್ಡ್‌ಗೆ ಸರಾಸರಿ 35 ಸಾವಿರ ಜನ ಸಂಖ್ಯೆ ಆಧಾರದ ಮೇರೆಗೆ ವಾರ್ಡ್ ವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 85 ಲಕ್ಷ ಮತದಾರರನ್ನು ಗೊತ್ತು ಮಾಡಿರುವ ಪಾಲಿಕೆ, ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಮೋದನೆ ಸಿಕ್ಕ ವಾರದೊಳಗೆ ಡಿ ಲಿಮಿಟೇಷನ್ ಪಟ್ಟಿ ಸಾರ್ವಜನಿಕ ಆಕ್ಷೇಪಣೆಗಳನ್ನು ಸ್ವೀಕರಿಸಲಿದೆ.
ಈ ಬಗ್ಗೆ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಈ ಹಿಂದೆ ಸುಪ್ರೀಕೋರ್ಟ್ ಪಾಲಿಕೆ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪಡಿಸಲು ಸೂಚನೆ ನೀಡಿತ್ತು. ಪಾಲಿಕೆ ಡಿಲಿಮಿಟೇಷನ್ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಕೂಡಲೇ ಪಟ್ಟಿಗೆ ಅನುಮೋದನೆ ನೀಡಿ ಚುನಾವಣೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ: ಅಧಿಕಾರಿಗಳಿಗೆ BBMP ಮುಖ್ಯ ಆಯುಕ್ತರ ಸೂಚನೆ