ಬೆಳಗಾವಿ: ದನ ಮೇಯಿಸಲು ಹೋಗಿದ್ದಾಗ ಏಕಕಾಲಕ್ಕೆ ಎರಡು ಕರಡಿಗಳು ದಾಳಿ ನಡೆಸಿದ್ದರಿಂದ (Bear Attack) ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವುದು ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ರೇಣುಕಾ ಈರಪ್ಪ ನಾಯಕ್ (60) ಗಾಯಗೊಂಡ ಮಹಿಳೆ. ಕರಡಿಗಳು ದಾಳಿ ಮಾಡುತ್ತಿದ್ದಂತೆ ಮಹಿಳೆ ಕಿರುಚಾಡಿದ್ದಾರೆ. ಹೀಗಾಗಿ ಸಮೀಪದಲ್ಲಿದ್ದ ರೈತರು ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಕರಡಿಗಳ ಭೀಕರ ದಾಳಿಯಲ್ಲಿ ಮಹಿಳೆಯ ತಲೆಯ ಭಾಗ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಬ್ಯುಸಿನೆಸ್‌ಗೆ 20 ಸಾವಿರ ಕೇಳಿದ್ದ ಮಗ; ತಾಯಿ ಹಣ ಕೊಡಲಿಲ್ಲವೆಂದು ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಕಲಘಟಗಿಯಲ್ಲಿ ಕರಡಿಗಳ ಉಪಟಳ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ಭಾಗದಲ್ಲಿ ಕರಡಿಗಳ ಉಪಟಳ ಹೆಚ್ಚಾಗಿದೆ. ಇಲ್ಲಿನ ಸೂರಶೆಟ್ಟಿಕೊಪ್ಪ ಗ್ರಾಮದ ಸುತ್ತಮುತ್ತ ಕರಡಿಯೊಂದು ಓಡಾಡುತ್ತಾ ಜನರನ್ನು ಭಯಭೀತರನ್ನಾಗಿಸಿದೆ. ಇದರಿಂದ ಹೊಲಗಳ ಕಡೆ ಹೋಗಲು ರೈತರು ಭಯಪಡುತ್ತಿರುವುದು ಕಂಡುಬಂದಿದೆ.
ಕರಡಿ ಉಪಟಳಕ್ಕೆ ಬೇಸತ್ತಿರುವ ಸೂರಶೆಟ್ಟಿಕೊಪ್ಪ ಗ್ರಾಮಸ್ಥರು, ವನ್ಯ ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಅರಣ್ಯ ಇಲಾಖೆಗೆ ದೂರುಕೊಟ್ಟಿದ್ದಾರೆ. ಕರಡಿ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ | Karwar News: ಕುಮಟಾದಲ್ಲಿ ವಿಕಲಚೇತನ ಮಗನ ಹತ್ಯೆಗೈದು, ಆತ್ಮಹತ್ಯೆ ಮಾಡಿಕೊಂಡ ತಂದೆ
ಬೆಂಗಳೂರಿನಲ್ಲಿ ಕುಖ್ಯಾತ ಕಳ್ಳನ ಬಂಧನ
ಬೆಂಗಳೂರು: ನಗರದಲ್ಲಿ ವಿವಿಧೆಡೆ ಮನೆಗಳಲ್ಲಿ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮನೆಗಳ್ಳತನ ನಡೆದ 48 ಗಂಟೆಗಳಲ್ಲಿ ಆರೋಪಿ ಬಂಧನವಾಗಿದೆ. ಸುಬ್ರಹ್ಮಣ್ಯಪುರದ ಮಣಿಕಂಠ ಅಲಿಯಾಸ್ ಮಣಿ ಬಂಧಿತ ಆರೋಪಿ.
ಯೋಗೇಶ್ ಉರಾಳ್ ಎಂಬುವವರ ಮನೆಯಲ್ಲಿ ಆರೋಪಿ, 41 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗಿರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ, 41 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.