ಬೆಂಗಳೂರು: ಬೆಳಗಾವಿಯಲ್ಲಿ ಇಂದು ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ವೀರ ಸಾವರ್ಕರ್ ಸೇರಿದಂತೆ ಏಳು ಮಂದಿ ಮಹನೀಯರ ಫೋಟೋಗಳನ್ನು ಅನಾವರಣ ಮಾಡಲು ಆಡಳಿತ ಪಕ್ಷ ಸಿದ್ಧವಾಗಿದೆ. ಸಾವರ್ಕರ್ ಫೋಟೋ ಇದೀಗ ಕಾಂಗ್ರೆಸ್‌ಗೆ ನುಂಗಲಾಗದ, ಉಗುಳಲಾಗದ ಬಿಸಿ ತುಪ್ಪವಾಗಿದೆ.
ಬಿಜೆಪಿ ಸಾರುತ್ತಿರುವ ಯುದ್ಧಕ್ಕೂ ಮುನ್ನವೇ ಕೈ ಪಡೆ ಶಸ್ತ್ರ ತ್ಯಾಗ ಮಾಡಿದಂತಿದ್ದು, ವೀರ ಸಾವರ್ಕರ್ ಪೋಟೋ ಅನಾವರಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರುಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ. ಗೈರಾಗುವ ಮೂಲಕ ಕಾದು ನೋಡುವ ತಂತ್ರವನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿದೆ. ಮೊದಲು ಸ್ಪೀಕರ್ ಅನಾವರಣ ಮಾಡಲಿ, ಅನಾವರಣದ ಬಳಿಕ ಹೋರಾಟದ ಬಗ್ಗೆ ಪ್ಲಾನ್ ಮಾಡೋಣ ಎಂಬ ನಿರ್ಧಾರಕ್ಕೆ ಕೈ ನಾಯಕರು ಬಂದಂತಿದೆ.
ಇದು ಚುನಾವಣಾ ವರ್ಷ ಆಗಿರುವುದರಿಂದ ಸಾವರ್ಕರ್ ಟೀಕೆಯ ಶಸ್ತ್ರ ತ್ಯಾಗ ಮಾಡಲು ಕೈ ನಾಯಕರು ಮುಂದಾಗಿದ್ದಾರೆ. ಈ ಮೊದಲು ಸಾವರ್ಕರ್ ವಿಚಾರ ಪ್ರಸ್ತಾಪ ಮಾಡಿದರೆ ಸಾಕು ಬಿಜೆಪಿ ಮೇಲೆ ಕಾಂಗ್ರೆಸಿಗರು ಮುಗಿಬೀಳುತ್ತಿದ್ದರು. ಆದರೀಗ ಬಿಜೆಪಿಯ ಪ್ರಖರ ಹಿಂದುತ್ವ ದಾಳಕ್ಕೆ ಕಾಂಗ್ರೆಸ್ ಇಕ್ಕಟ್ಟು ಅನುಭವಿಸಿದೆ. ವಿರೋಧಿಸಿದರೆ ಹಿಂದು ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಸುಮ್ಮನೆ ಇದ್ದರೆ ಸಾವರ್ಕರ್‌ರನ್ನು ಒಪ್ಪಿಕೊಂಡಂತೆ ಆಗಲಿದೆ. ಸದನದಲ್ಲಿ ಫೋಟೋ ಅನಾವರಣವಾಗುವಾಗ ವಿರೋಧ ಮಾಡದೇ ಹೋದರೆ, ಸದನದ ಹೊರಗೂ ಸಾವರ್ಕರ್ ವಿಚಾರದಲ್ಲಿ ಮಾತನಾಡಲು ಕಷ್ಟವಾಗುತ್ತದೆ. ಹಾಗಾಗಿ ಇಂದಿನ ಕಾರ್ಯಕ್ರಮಕ್ಕೆ ಗೈರಾಗಲು ನಿರ್ಧರಿಸಲಾಗಿದೆ.
ಅನಾವರಣ ಆದ ಬಳಿಕ ಹೇಗೆ ಬಿಜೆಪಿ ವಿರುದ್ಧ ಪ್ರತ್ಯಸ್ತ್ರ ರೂಪಿಸಬೇಕು ಎಂದು ಕಾಂಗ್ರೆಸ್ ಚಿಂತಿಸಲಿದೆ. ಸದನದ ಕಾರ್ಯಕಲಾಪಗಳಲ್ಲಿ ಭಾಗಿಯಾಗಿ ಸಾವರ್ಕರ್ ಪೋಟೋ ವಿಷಯ ಪ್ರಸ್ತಾಪ ಮಾಡಲು ಚಿಂತನೆ ನಡೆಯುತ್ತಿದೆ.
ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಅಧಿವೇಶನದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ | ವಿಸ್ತಾರ TOP 10 NEWS | FIFA ಫುಟ್‌ಬಾಲ್ ಚಾಂಪಿಯನ್ ಅರ್ಜೆಂಟೀನಾದಿಂದ ಬೆಳಗಾವಿಯಲ್ಲಿ ಅಧಿವೇಶನವರೆಗಿನ ಪ್ರಮುಖ ಸುದ್ದಿಗಳಿವು
ಅಧಿವೇಶನದಲ್ಲಿ ಯಾವ ವಿಷಯಗಳ ಪ್ರಸ್ತಾಪ ಮಾಡಬೇಕು, ವೀರ ಸಾವರ್ಕರ್ ಪೋಟೋ ಪಾಲಿಟಿಕ್ಸ್ ಮೂಲಕ ಶಾಕ್ ಕೊಟ್ಟಿರುವ ಬಿಜೆಪಿಯ ದಾಳಕ್ಕೆ ಹೇಗೆ ತಿರುಗೇಟು ಕೊಡಬೇಕು, ಸದನದಲ್ಲಿ ನಮ್ಮ ನಿಲುವುಗಳು ಏನಾಗಿರಬೇಕು ಎಂದು ಚರ್ಚೆ ನಡೆಯಲಿದೆ.
ವೋಟರ್ ಐಡಿ ಹಗರಣ, 40% ಕಮಿಷನ್ ಆರೋಪ, ಅಕ್ರಮ ನೇಮಕಾತಿ ಸೇರಿ ಇನ್ನೂ ಕೆಲ ವಿಷಯಗಳ ಪ್ರಸ್ತಾಪ ಮಾಡಲಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು, ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ, ಮಹದಾಯಿ ಮತ್ತು ಕೃಷ್ಣ ನೀರಾವರಿ ಯೋಜನೆಗಳು, ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯಗಳು, ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ಸಿಗದಿರುವುದು, ಈ ಎಲ್ಲಾ ವಿಷಯ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.
ಸದನಕ್ಕೆ ಕಡ್ಡಾಯವಾಗಿ ಹಾಜರ್ ಆಗಲು, ಚರ್ಚೆಯಲ್ಲಿ ಆಕ್ರಮಣಕಾರಿಯಾಗಿ ಭಾಗವಹಿಸಲು ಶಾಸಕರಿಗೆ ಸೂಚನೆ ನೀಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ನಿಶ್ಚಯಿಸಿದ್ದಾರೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಬೆಳಗಾವಿ ಚಳಿಗಾಲದ ಅಧಿವೇಶನ ಫಲಪ್ರದವಾಗಲಿ