ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿ ಮಹೀಂದ್ರ ಬೊಲೆರೊ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ, (Road accident in Belagavi) ಆರು ಜನ ದುರ್ಮರಣಕ್ಕೀಡಾಗಿದ್ದಾರೆ. 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಮದುರ್ಗಕ್ಕೆ ಸಮೀಪದ ಚುಂಚನೂರು ಗ್ರಾಮದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳುತ್ತಿದ್ದ ವೇಳೆ ದುರಂತ ನಡೆದಿದೆ.
ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾರೆ. ಮೃತರೆಲ್ಲರೂ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದವರು. ಹಣಮವ್ವ ಮ್ಯಾಗಾಡಿ (25), ದೀಪಾ ಹರಿಜನ (31), ಸವಿತಾ ಮುಂಡಾಸ (17) ಸುಪ್ರಿತಾ ಹರಿಜನ (11) ಯಲ್ಲಪ್ಪ ಬನ್ನೂರ (42) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಂದ್ರವ್ವ ಸಿದ್ದಮೇತ್ರಿ (24) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟರು. ಬೆಳಗಾವಿ ಜಿಲ್ಲೆಯ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಪಾದಯಾತ್ರೆ ಮೂಲಕವೇ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರು ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಗೂಡ್ಸ್ ವಾಹನದಲ್ಲಿ 23 ಭಕ್ತರನ್ನು ಚಾಲಕ ಕೂರಿಸಿಕೊಂಡಿದ್ದ. ಗಾಡಿ ಖಾಲಿ ಇದೆ, ಚಳಿ ಇದೆ ಬನ್ನಿ ಎಂದು ಆಹ್ವಾನಿಸಿದ್ದ. ಕಡಕೋಳ ಬಳಿ ಇವರು ತಡರಾತ್ರಿ ಊಟ ಮಾಡಿದ್ದರು. ಬಳಿಕ ಸವದತ್ತಿಯತ್ತ ತೆರಳುವ ವೇಳೆ ಮರಕ್ಕೆ ಡಿಕ್ಕಿಯಾಗಿದೆ. ಗಾಯಗೊಂಡ 16 ಜನರನ್ನು ಗೋಕಾಕ್ ಸೇರಿ ವಿವಿಧ ಕಡೆಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸಿಎಂ ಬೊಮ್ಮಾಯಿ ಸಂತಾಪ, 5 ಲಕ್ಷ ರೂ. ಪರಿಹಾರ
ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ | Dharma dangal | ಸುಳ್ಯ ಜಾತ್ರೆಯಲ್ಲಿ ಹಿಂದು ವ್ಯಾಪಾರಿಗಳಿಗೆ ಮಾತ್ರ ಅವಕಾಶ: ಒತ್ತಡಕ್ಕೆ ಮಣಿದು ಬದಲಾದ ನಿಲುವು