ಹುಬ್ಬಳ್ಳಿ: ಆರು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧ ಪ್ರಕರಣಗಳಿಗೆ ವಿಧಿವಿಜ್ಞಾನ ಸಾಕ್ಷಿಗಳನ್ನು (ಫೊರೆನ್ಸಿಕ್ ಎವಿಡೆನ್ಸ್) ಕಡ್ಡಾಯ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಹುದೊಡ್ಡ ಪ್ರಮಾಣದ ಮಾನವ ಸಂಪನ್ಮೂಲದ ಅವಶ್ಯಕತೆಯಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸೊಸೈಟಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಐವರು ಮಹಾನ್ ವ್ಯಕ್ತಿಗಳ ದೂರದರ್ಶಿತ್ವದ ಕಾರಣಕ್ಕೆ ಕೆಎಲ್‌ಇ ಸಂಸ್ಥೆಯು ನೂರು ವರ್ಷಗಳನ್ನು ಪೂರೈಸಿದೆ. ಸರಸ್ವತಿ ಉಪಾಸನೆಗಾಗಿ ಐವರು ಶಿಕ್ಷಕರು ಸೇರಿ ಸ್ಥಾಪಿಸಿದ ಈ ಸಂಸ್ಥೆಯ ಕುರಿತು ಎಲ್ಲರಿಗೂ ಹೆಮ್ಮೆ ಇರಬೇಕು. ಶಿಕ್ಷಣದ ವ್ಯಾಪಾರೀಕರಣವಾಗುತ್ತಿದೆ ಎನ್ನುವ ಈ ಕಾದಲ್ಲಿ ಕೆಎಲ್‌ಇ ಸೊಸೈಟಿಯ ಕಾರ್ಯ ಶ್ಲಾಘನೀಯ ಎಂದರು.
ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣವನ್ನೂ ಇಂದು ಉದ್ಘಾಟನೆ ಮಾಡಲಾಗಿದೆ ಎಂದ ಅಮಿತ್ ಶಾ, ವಿವಿಧ ಕ್ರೀಡೆಗಳನ್ನು ಒಟ್ಟಾಗಿ ಆಡಬಹುದಾದ ಕ್ರೀಡಾಂಗಣಗಳು ಇಲ್ಲಿವೆ. ಅತಿ ಶೀಘ್ರದಲ್ಲೇ ಕೆಎಲ್‌ಇ ಸೊಸೈಟಿಯ ಯಾವುದಾದರೂ ಒಬ್ಬ ವಿದ್ಯಾರ್ಥಿ ಒಲಿಂಪಿಕ್‌ನಲ್ಲಿ ಭಾಗವಹಿಸುತ್ತಾರೆ ಎಂದು ಕೆಎಲ್‌ಇ ಸೊಸೈಟಿಯು ಪ್ರಧಾನಿಯವರಿಗೆ ಆಶ್ವಾಸನೆ ನೀಡಿದಂತೆಯೇ ಸಾಕಾರವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಶಕದಲ್ಲಿ ಭಾರತವನ್ನು ನಂಬರ್ ಒನ್ ದೇಶವಾಗಿಸಲು ಎಲ್ಲ ಯುವಕರೂ ಶ್ರಮಿಸಬೇಕು. ವೈಯಕ್ತಿಕ ಸಾಧನೆಯ ಜತೆಗೆ ದೇಶದ ಅಭಿವೃದ್ಧಿಯೂ ಗಮನದಲ್ಲಿರಬೇಕು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅನೇಕ ಅವಕಾಶಗಳನ್ನು ಒದಗಿಸಲಾಗುತ್ತಿದೆ.
ಇದನ್ನೂ ಓದಿ : Amit Shah : ರಾಜ್ಯದಲ್ಲಿ ಶನಿವಾರ ಅಮಿತ್ ಶಾ ಪ್ರವಾಸ: ರಂಗೇರಿದ ಚುನಾವಣಾ ಕಣ
ವಿದ್ಯಾರ್ಥಿಗಳು ಸಾಂಪ್ರದಾಯಿಕ ಆಲೋಚನೆಯಿಂದ ಹೊರಬನ್ನಿ. ಸಾಹಸ ಮಾಡುವ ಧೈರ್ಯ ತೋರಿ. ಸಾಹಸ ಮಾಡುವವರಿಗೆ ಲಕ್ಷ್ಮಿ ಒಲಿಯುತ್ತಾಳೆ ಎಂಬ ಮಾತನ್ನು ನೆನಪಿಡಿ. ಭಾರತದಲ್ಲಿ ಅನೇಕ ವಿದೇಶಿ ವಿವಿಗಳು ಕ್ಯಾಂಪಸ್ ತೆರೆಯಲು ಅನುಮತಿ ನೀಡಲಾಗಿದೆ. ಪ್ರಲ್ಹಾದ್ ಜೋಶಿ ಅವರ ಒತ್ತಾಯದ ಕಾರಣಕ್ಕೆ ರಾಷ್ಟ್ರೀಯ ಫೊರೆನ್ಸಿಕ್ ಸೈನ್ಸ್ ಕ್ಯಾಂಪಸ್ ಸಹ ಆರಂಭವಾಗಿದೆ. ವಿಧಿವಿಜ್ಞಾನವು ಮುಂದಿನ ದಿನಗಳಲ್ಲಿ ಬಹುದೊಡ್ಡ ಕ್ಷೇತ್ರವಾಗಲಿದೆ.
ಇದಕ್ಕಾಗಿ ತರಬೇತಿ ಪಡೆದ ಬಹುದೊಡ್ಡ ಮಾನವ ಸಂಪನ್ಮೂಲ ಬೇಕಾಗುತ್ತದೆ. ಆರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯ ಅಗತ್ಯವಿರುವ ಅಪರಾಧಗಳಿಗೆ ವಿಧಿವಿಜ್ಞಾನ ಸಾಕ್ಷಿಗಳನ್ನು ಕಡ್ಡಾಯ ಮಾಡಲಿದ್ದೇವೆ. ಇದಕ್ಕಾಗಿ ಅತಿ ಹೆಚ್ಚು ಜನರ ಅವಶ್ಯಕತೆಯಿರುತ್ತದೆ. ಇದಕ್ಕಾಗಿ ಯುವಕರು ಸಿದ್ಧರಾಗಬೇಕು ಎಂದರು.