Site icon Vistara News

BY Vijayendra : ಪೃಥ್ವಿ ಸಿಂಗ್‌ಗೆ ಇರಿತ ಪ್ರಕರಣ; ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಆಗ್ರಹ

BY Vijayendra Channaraj Hattiholi

ಬೆಳಗಾವಿ: ಬಿಜೆಪಿ ಕಾರ್ಯಕಾರಿಣಿ ಸದಸ್ಯ, ರಮೇಶ್‌ ಜಾರಕಿಹೊಳಿ (Ramesh Jarakiholi) ಆಪ್ತ ಪೃಥ್ವಿ ಸಿಂಗ್‌ (Attack on Prithvi singh) ಅವರಿಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾದ ಎಂಎಲ್‌ಸಿ ಚನ್ನರಾಜ್‌ ಹಟ್ಟಿಹೊಳಿ (Channaraj Hattiholi), ಅವರ ಇಬ್ಬರು ಗನ್‌ ಮ್ಯಾನ್‌ಗಳು ಮತ್ತು ಇತರ ಹಲ್ಲೆಕೋರರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ.

ಬೆಳಗಾವಿಯ ಜಯನಗರದಲ್ಲಿರುವ ಮನೆಯಲ್ಲಿದ್ದ ಪೃಥ್ವಿ ಸಿಂಗ್‌ ಅವರನ್ನು ಹಟ್ಟಿಹೊಳಿ ಮತ್ತು ಬೆಂಬಲಿಗರು ಹೊರಗೆ ಕರೆದು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೈ ಮತ್ತು ಬೆನ್ನಿಗೆ ಚೂರಿ ಇರಿತದ ಗಾಯಕ್ಕೆ ಒಳಗಾಗಿರುವ ಪೃಥ್ವಿ ಸಿಂಗ್‌ ಕೆಎಲ್ ಇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ಪೃಥ್ವಿ ಸಿಂಗ್‌ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಶಾಸಕರೂ ಆಗಿರುವ ಬಿ.ವೈ ವಿಜಯೇಂದ್ರ ಅವರು, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಗನ್ ಮ್ಯಾನ್‌ಗಳು ಹಲ್ಲೆ ಮಾಡಿದ್ದಾರೆ. ಗನ್‌ ಮ್ಯಾನ್‌ ಸುಜೀತ್ ಜಾಧವ್, ಎಂಎಲ್‌ಸಿ ಅವರ ಪಿಎ ಸದ್ದಾಂ ಅವರು ಪೃಥ್ವಿ ಮನೆಗೆ ಹೋಗಿ ಚೂರಿಯಿಂದ ಇರಿದ್ದಾರೆ. ಮೊದಲು ಮನೆಯಲ್ಲಿದ್ದ ಪೃಥ್ವಿ ಸಿಂಗ್‌ ಅವರನ್ನು ಹೊರಗಡೆ ಕರೆಸಿ ಹಲ್ಲೆ ಮಾಡಲಾಗಿದೆ. ಈ ದೃಶ್ಯವನ್ನು ಪೃಥ್ವಿ ಸಿಂಗ್ ವಿಡಿಯೋ ರೆಕಾರ್ಡ್ ಮಾಡುವ ಪ್ರಯತ್ನ ಮಾಡಿದ್ದಾರೆ. ಬ್ಲಾಕ್ ಕಲರ್ ಕ್ರಿಷ್ಟಾ ಇನ್ನೊವಾ ಕಾರಿನಲ್ಲಿ ಚನ್ನರಾಜ್ ಹಟ್ಟಿಹೊಳಿ ಅವರೂ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು. ಪೃಥ್ವಿ ಸಿಂಗ್‌ ಅವರನ್ನು ಹೊರಗೆ ಕರೆದು ಮಾತಿಗೆ ಮಾತು ಬೆಳೆಸಿ ಹಲ್ಲೆ ಮಾಡಲಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಸಚಿವರ ಪ್ರಭಾವದಿಂದ ಹಾಡಹಗಲೇ ಹಲ್ಲೆ

ಚನ್ನರಾಜ ಹಟ್ಟಿಹೊಳಿ ಅವರು ಸಚಿವರಾಗಿರುವ ಮತ್ತು ಪ್ರಭಾವಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಸಹೋದರ. ಇಷ್ಟು ಪ್ರಭಾವ ಇದ್ದಿದ್ದರಿಂದಲೇ ಹಾಡು ಹಗಲೇ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ. ರಾಜ್ಯ ಸರ್ಕಾರ ಇಡೀ ವ್ಯವಸ್ಥೆಯೇ ಇಲ್ಲಿದೆ. ಮುಖ್ಯಮಂತ್ರಿಗಳೂ ಇಲ್ಲಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯರು ದರ್ಪ ತೋರಿದ್ದಾರೆ. ದಲಿತ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆʼʼ ಎಂದು ವಿಜಯೇಂದ್ರ ಆರೋಪ ಮಾಡಿದರು.

ಈ ಪ್ರಕರಣದಲ್ಲಿ ಪೊಲೀಸರು ತಡ ಮಾಡದೆ ಎಫ್‌ಐಆರ್‌ ಹಾಕಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಗನ್ ಮ್ಯಾನ್, ಪಿಎ ಮತ್ತು ವಿಧಾನ ಪರಿಷತ್ ಸದಸ್ಯನನ್ನು ಬಂಧಿಸಬೇಕುʼʼ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ʻʻಇಲ್ಲಿರುವ ಪೊಲೀಸ್ ವ್ಯವಸ್ಥೆಯ ಬಗ್ಗೆ ನನಗೆ ನಂಬಿಕೆ ಇಲ್ಲ, ನಮ್ಮ ಮನೆಗೆ ರಾತ್ರೋರಾತ್ರಿ ನುಗ್ತಾರೆ, ಕೊಲೆ ಮಾಡ್ತಾರೆ ಎಂದು ಪ್ರಥ್ವಿ ಸಿಂಗ್ ಭಯದಲ್ಲಿದ್ದಾರೆ. ಪೊಲೀಸ್ ವ್ಯವಸ್ಥೆಯ ಬಗ್ಗೆ ನಮಗೆ ಎಳ್ಳಷ್ಟೂ ನಂಬಿಕೆಯಿಲ್ಲ, ಅಧಿಕಾರದ ದರ್ಪದಿಂದ ಸಚಿವರ ತಮ್ಮ ಯಾವ ರೀತಿ ನಡೆದುಕೊಂಡಿದ್ದಾನೆ ಎಂದು ಎಲ್ಲರೂ ನೋಡ್ತಿದ್ದಾರೆ. ಅಧಿಕಾರದ ಸೊಕ್ಕಿನಿಂದ ಮೆರೆಯುತ್ತಿರುವವರಿಗೆ ತಕ್ಕ ಪಾಠ ಆಗಬೇಕು,ʼʼ ಎಂದು ಹೇಳಿದ ವಿಜಯೇಂದ್ರ ಅವರು, ಎಂಎಲ್ಸಿ ಆದಿಯಾಗಿ ಎಲ್ಲರ ಬಂಧನಕ್ಕೆ ಆಗ್ರಹಿಸಿದರು.

ʻʻಘಟನೆಯನ್ನು ಗಂಬೀರವಾಗಿ ಪರಿಗಣಿಸಬೇಕು, ಎಲ್ಲಾ ದುಷ್ಟರನ್ನೂ ಬಂಧಿಸಬೇಕು, ಪೊಲೀಸರ ಬಗ್ಗೆ ನಮಗೆ ನಂಬಿಕೆ ಇಲ್ಲ, ಮೊದಲು ಎಫ್ ಐ ಆರ್ ಆಗಲಿʼʼ ಎಂದು ವಿಜಯೇಂದ್ರ ಆಗ್ರಹಿಸಿದರು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

Prtithvi singh attacked

ಮಣಿಕಂಠ ರಾಥೋಡ್‌ ಹಲ್ಲೆ ನೆನಪಿಸಿದ ವಿಜಯೇಂದ್ರ

ʻʻಗುಲ್ಬರ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ್ ಮೇಲೆ ಇದೇ ರೀತಿ ಹಲ್ಲೆಯಾಗಿತ್ತು. ಗುಲ್ಬರ್ಗದಲ್ಲಿ ನಡೆದ ಘಟನೆ ರಾಜ್ಯಕ್ಕೆ ವ್ಯಾಪಿಸುತ್ತಿದೆʼʼ ಎಂದು ಹೇಳಿದ ವಿಜಯೇಂದ್ರ, ಎಂಎಲ್‌ಸಿ ಹಟ್ಟಿಹೊಳಿ ಅವರನ್ನು ಬಂಧಿಸದೆ ಇದ್ದರೆ ರಾಜ್ಯದ ಪ್ರತಿ ಬಿಜೆಪಿ ಕಾರ್ಯಕರ್ತರು ರಸ್ತೆಗೆ ಇಳಿಯುತ್ತಾರೆ ಎಂದು ಎಚ್ಚರಿಸಿದರು.

ʻʻಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಕ್ಕೆ ಪೃಥ್ವಿ ಸಿಂಗ್‌ಗೆ ಬೆದರಿಕೆ ಹಾಕಲಾಗಿತ್ತು.ʼʼ ಎಂದು ಹೇಳಿದ ವಿಜಯೇಂದ್ರ ಅವರು ಪೃಥ್ವಿ ಸಿಂಗ್‌ ಅವರ ಮೇಲೆ ಇನ್ನೂ ಹಲವು ಪ್ರಕರಣಗಳಿವೆ, ಅವರ ಹೆಸರು ಬರೆದಿಟ್ಟು ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿಕೆಯನ್ನು ಆಕ್ಷೇಪಿಸಿದರು.

ʻʻಒಬ್ಬ ಜವಾಬ್ದಾರಿಯುತ ಸಚಿವರು ಈ ರೀತಿ ಹೇಳಿಕೆ ಕೊಡಬಾರದು, ನಿಮ್ಮ ತಮ್ಮ ಎಲ್ಲಿದ್ದಾನೆ ಹುಡುಕಿ ಮೊದಲು ಪೊಲೀಸರಿಗೆ ಕೊಡಿʼʼ ಎಂದರು ವಿಜಯೇಂದ್ರ.

Exit mobile version