ಬೆಳಗಾವಿ: ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಣೆಯಾಗಿದ್ದ ಮಗುವೊಂದು (Child Death) ಮೃತಪಟ್ಟಿದೆ. ತಡರಾತ್ರಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಹಸುಳೆ ಜೀವ ಬಿಟ್ಟಿದೆ. 30 ದಿನದ ಹೆಣ್ಣು ಮಗುವನ್ನು ಕೇವಲ 60 ಸಾವಿರ ರೂ.ಗೆ ನಕಲಿ ವೈದ್ಯನೊಬ್ಬ ಮಾರಾಟ (Child Trafficking) ಮಾಡಿದ್ದ.
ಅಬ್ದುಲ್ ಗಫಾರ್ ಲಾಡಖಾಕ್ ಎಂಬಾತ ನರ್ಸ್ ಮಹಾದೇವಿ ಎಂಬಾಕೆಗೆ ಮಗುವನ್ನು ಮಾರಾಟ ಮಾಡಿದ್ದ. ಮಗು ಪಡೆದು ಬೆಳಗಾವಿಯಲ್ಲಿ ಮಾರಾಟ ಮಾಡುವಾಗ ಮಹಾದೇವಿ ಸಿಕ್ಕಿ ಬಿದ್ದಿದ್ದಳು. ಈ ವೇಳೆ ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯಲ್ಲಿ ಆರೈಕೆಗೆಂದು ಇರಿಸಲಾಗಿತ್ತು. ಆದರೆ ಬೆಳವಣಿಗೆ ಕುಂಠಿತ ಹಾಗೂ ತೂಕ ಹೆಚ್ಚಳವಾಗದೆ ಅನಾರೋಗ್ಯದಿಂದ ತಿಂಗಳ ಕೂಸು ಮೃತಪಟ್ಟಿದೆ.
ಇನ್ನೂ ಪೊಲೀಸರು ಹಾಗೂ ಮಗುವಿನ ತಂದೆ- ತಾಯಿ ಸಮ್ಮುಖದಲ್ಲಿ ಸಂಪ್ರದಾಯದಂತೆ ಸದಾಶಿವ ನಗರದ ರುಧ್ರಭೂಮಿಯಲ್ಲಿ ಸಂಸ್ಕಾರ ಮಾಡಿದ್ದರು. ತಾವೇ ತಮ್ಮ ಕೈಯಿಂದ ಹಣ ಹಾಕಿ ಮಗುವಿನ ಅಂತ್ಯ ಸಂಸ್ಕಾರವನ್ನು ಮಾಳಮಾರುತಿ ಪೊಲೀಸರು ನೆರವೇರಿಸಿದ್ದಾರೆ.
ಯುವತಿಯೊಬ್ಬಳು ಮದುವೆಗೂ ಮುನ್ನವೇ ಗರ್ಭ ಧರಿಸಿದ್ದಳು. ಆದಾಗಲೇ ಶಿಶುವಿಗೆ 7 ತಿಂಗಳಾಗಿತ್ತು. ಆಕೆಯಿದ್ದ 20 ಸಾವಿರ ರೂ. ಹಣ ಪಡೆದ ನಕಲಿ ವೈದ್ಯ ಆಪರೇಷನ್ ಮಾಡಿದ್ದ. ಕೆಲ ದಿನಗಳ ಕಾಲ ಶಿಶುವನ್ನು ತನ್ನಲ್ಲಿರಿಸಿಕೊಂಡು ಪೋಷಿಸಿ ನಂತರ ಮಗುವನ್ನು ಮಾರಾಟ ಮಾಡಿದ್ದ. ಆದರೆ ನಕಲಿ ವೈದ್ಯ ಹಾಗೂ ಮಾರಾಟ ಜಾಲದ ಹಣದಾಸೆಗೆ ಕಂದಮ್ಮವೊಂದು ಬಲಿಯಾಗಿದ್ದು ದುರಂತ.
ಇದನ್ನೂ ಓದಿ: Viral Video: ಮತ್ತೊಂದು ರೀಲ್ ಕ್ರೇಜ್; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್ ಡ್ಯಾನ್ಸ್!
ಭ್ರೂಣಹತ್ಯೆ ಮಾಡಿದ್ದ ನಕಲಿ ವೈದ್ಯ
ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎಂಬಾತನು ಭ್ರೂಣಹತ್ಯೆ ಮಾಡಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಭ್ರೂಣದ ಶವವೊಂದು ಪತ್ತೆಯಾಗಿತ್ತು. ಇನ್ನಷ್ಟು ಭ್ರೂಣಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್‌ನ ಜಮೀನಿನಲ್ಲಿ ಭ್ರೂಣದ ಶವ ಪತ್ತೆಯಾಗಿತ್ತು. ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಡಿಎಎಸ್‌ಪಿ ರವಿ ನಾಯ್ಕ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಇನ್ನೂ ಭ್ರೂಣಗಳನ್ನು ಹೂಳುತ್ತಿದ್ದ ಸಹಾಯಕ ರೋಹಿತ್ ಕುಪ್ಪಸಗೌಡರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ