Site icon Vistara News

Dalit Woman: ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆ ಕೇಸ್;‌ ಬಿಜೆಪಿ ಪ್ರತಿಭಟನೆ, 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

BJP Protest in Belagavi

ಬೆಳಗಾವಿ: ಬೆಳಗಾವಿ ಜಿಲ್ಲೆಯ ವೆಂಟಮೂರಿ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರನ್ನು (Dalit Woman) ಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಹಾಗೂ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (Opposition leader R Ashok) ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರವು ಹಲ್ಲೆಗೊಳಗಾದ ಮಹಿಳೆಗೆ ಪರಿಹಾರವನ್ನು ಘೋಷಿಸಿದೆ. ಐದು ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಘೋಷಣೆ ಮಾಡಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೂ 50 ಸಾವಿರ ರೂಪಾಯಿ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಿಎಂ ಪರಿಹಾರ ಘೋಷಣೆ ಮಾಡಿರುವ ಬಗ್ಗೆ ಸಚಿವ ಸತೀಶ್‌ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಗೆ ಇಲಾಖೆಯಿಂದ ಅಗತ್ಯ ನೆರವು; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಪ್ರಕರಣವು ಇಡೀ ಸಮಾಜವೇ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಸಂತ್ರಸ್ತೆಗೆ ಸೂಕ್ತ ನೆರವು ನೀಡಲು ಕ್ರಮ ತೆಗೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಘಟನೆ ನಂತರ ನಾನು ಕೂಡ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದೇನೆ. ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸಬಾರದು ಹಾಗೂ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಸಂತ್ರಸ್ತ ಮಹಿಳೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ಒದಗಿಸಿಕೊಟ್ಟು, ಅವರಿಗೆ ನ್ಯಾಯ ಒದಗಿಸಿಕೊಡಲು ಬೇಕಾದ ಎಲ್ಲ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವುದು ಹಾಗೂ ಮಹಿಳೆಗೆ ಇಲಾಖೆ ವತಿಯಿಂದ ಪರಿಹಾರಧನ ನೀಡಲು ತುರ್ತಾಗಿ ಕ್ರಮ ವಹಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಪ್ರತಿಭಟಿಸಿದ ಬಿಜೆಪಿ; ಸರ್ಕಾರದ ವಿರುದ್ಧ ಆಕ್ರೋಶ

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ದಿಢೀರ್‌ ಭೇಟಿ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಚಿವ ಸುನೀಲ್ ಕುಮಾರ್, ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಜತೆಗಿದ್ದರು. ಇಂಥ ಹೀನ ಕೃತ್ಯವೊಂದು ನಡೆದರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರ ಕಾರ್ಯಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ತನಿಖೆ ಬಗ್ಗೆ ಆರ್. ಅಶೋಕ್‌ ಅವರು ಕಾಕತಿ ಪೊಲೀಸರಿಂದ ಮಾಹಿತಿ ಪಡೆದುಕೊಂಡರು.

ಸಿದ್ದರಾಮಯ್ಯ ಒಬ್ಬ ನಾಲಾಯಕ್‌ ಎಂದ ಅಶೋಕ್

ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸರ್ಕಾರ ಜನರ ರಕ್ಷಣೆಗಾಗಿ ಇಲ್ಲ. ದುಡ್ಡು ಹೊಡೆಯೋಕೆ ಲೂಟಿ ಮಾಡೋಕೆ ಇದೆ. ಮಹಿಳೆಯರಿಗೆ ರಕ್ಷಣೆ ಕೊಡದಿದ್ದರೆ ಅಧಿವೇಶನ ನಡೆಸಿ ಏನು ಪ್ರಯೋಜನ? ಇಲ್ಲಿರುವುದು ಕುಲಗೆಟ್ಟ ಸರ್ಕಾರ. ಅಧಿವೇಶನವನ್ನು ಇಲ್ಲಿ ಮಾಡಿ ಏನು ತಗೊಂಡು ಹೋದಿರಿ ಸಿದ್ದರಾಮಯ್ಯನವರೇ? ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆಯ್ನನು ಹೊತ್ತು ಒಯ್ತಿದ್ದೀರಾ? ನೀವೊಬ್ಬ ನಾಲಾಯಕ್ ಎಂದು ಕಿಡಿಕಾರಿದರು.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಧಿವೇಶನದ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ಘಟನೆ ನಡೆದಿದೆ. ಇದು ಕರ್ನಾಟಕ ರಾಜ್ಯದ ಜನತೆ ತಲೆ ತಗ್ಗಿಸುವ ಘಟನೆಯಾಗಿದೆ. ಅನ್ಯಾಯಕ್ಕೊಳಾದ ಮಹಿಳೆಗೆ ಪರಿಹಾರ ಹಾಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ. ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಬೆತ್ತಲೆಗೊಳಿಸಿರುವ ಪ್ರಕರಣವು ದೇಶದಲ್ಲಿ ಚರ್ಚೆ ಆಗುತ್ತಿದೆ. ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಅಂದುಕೊಂಡಿದ್ದೆವು. ಆದರೆ, ಅವರಿಗೆ ಭೇಟಿಯಾಗುವ ಸೌಜನ್ಯವನ್ನೂ ತೋರಿಲ್ಲ. ರಾಜ್ಯದಲ್ಲಿ ತುಗಲಕ್ ದರ್ಬಾರ್‌ ನಡೆದಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Kalyana Karnataka: ಕಲ್ಯಾಣ ಕರ್ನಾಟಕಕ್ಕೆ ಆಗುತ್ತಾ ಅನ್ಯಾಯ? 3 ತಿಂಗಳಲ್ಲಿ 3 ಸಾವಿರ ಕೋಟಿ ರೂ. ಖರ್ಚಾಗುತ್ತಾ?

ವಂಟಮೂರಿ ಮಹಿಳೆ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿ ಪ್ರತಿಭಟನೆ,

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಥ್ ನೀಡಿದರು. ನೂರಾರು ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಮಾಜಿ ಶಾಸಕ ಸಂಜಯ್ ಪಾಟೀಲ್, ವಕ್ತಾರ ಎಂ.ಬಿ. ಜಿರಲಿ ಭಾಗಿಯಾಗಿದ್ದರು.

Exit mobile version