| ಅನಿಲ್ ಕಾಜಗಾರ, ಬೆಳಗಾವಿ
ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿ 3 ವರ್ಷ ಕಳೆದರೂ ಮಹದಾಯಿ ಯೋಜನೆಗೆ ಚಾಲನೆ ಸಿಗುತ್ತಿಲ್ಲ. ಎಂಟು ವರ್ಷಗಳ ಕಾಲ ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡಿ ಗೆದ್ದಿದೆ. ಹೀಗಿದ್ದರೂ ಯೋಜನೆ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಿದೆ.
ಕಿತ್ತೂರು ಕರ್ನಾಟಕದ ನಾಲ್ಕು ಜಿಲ್ಲೆಗಳ 13 ತಾಲೂಕುಗಳಿಗೆ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ಇದು. ಕೇಂದ್ರ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಗಳೇ ಅಸ್ತಿತ್ವದಲ್ಲಿವೆ. ಹೀಗಿದ್ದರೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಒಲವು ತೋರುತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ಹೇರಬೇಕಿದ್ದ ರಾಜ್ಯ ಸರ್ಕಾರವೂ ಮೌನಕ್ಕೆ ಶರಣಾಗಿದೆ. ಇತ್ತ ಪ್ರತಿಪಕ್ಷಗಳು ಮಹದಾಯಿ ಯೋಜನೆ ಜಾರಿಗೆ ಬಾದಾಮಿವರೆಗೆ ಪಾದಯಾತ್ರೆಗೆ ಸಜ್ಜಾಗುತ್ತಿವೆ. ಆದರೆ ಸರ್ವಪಕ್ಷ ನಿಯೋಗ ಒಯ್ಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಡಬಲ್ ಎಂಜಿನ್ ಸರ್ಕಾರ ಇದ್ದರೂ ಯೋಜನೆ ಜಾರಿಯಾಗದೇ ಇರುವುದು ಮಲಪ್ರಭಾ ನದಿ ಪಾತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದಶಕಗಳ ಹೋರಾಟಕ್ಕೆ ಸಂದ ಜಯ!
ಮಹದಾಯಿ ಯೋಜನೆ ಜಾರಿಗೆಗೆ ನಡೆಯುತ್ತಿರುವ ಹೋರಾಟ ಇಂದು ನೆನ್ನೆಯದಲ್ಲ. ಕಳೆದ 5 ದಶಕಗಳಿಂದಲೂ ಈ ಹೋರಾಟ ನಡೆಯುತ್ತಲೇ ಇದೆ. ಇದಕ್ಕಾಗಿ ಮಹದಾಯಿ ಹೋರಾಟ ಸಮಿತಿಯೂ ಹುಟ್ಟುಕೊಂಡಿದೆ. ಮಲಪ್ರಭಾ ನದಿ ಪಾತ್ರದ ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 2010ರಲ್ಲಿ ನ್ಯಾ. ಜೆ.ಎಂ. ಪಾಂಚಾಲ್ ನೇತೃತ್ವದಲ್ಲಿ ನ್ಯಾಯಮಂಡಳಿ ರಚನೆ ಮಾಡಿತು. ಕರ್ನಾಟಕ-ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸಲ್ಲಿಸಿದ್ದ ಅರ್ಜಿಗಳನ್ನು ಎಂಟು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಕರಣ 2018 ಆಗಸ್ಟ್ 14 ರಂದು ತನ್ನ ಅಂತಿಮ ತೀರ್ಪು ನೀಡಿತು. ಇದರಲ್ಲಿ ಕರ್ನಾಟಕಕ್ಕೆ ಕಳಸಾದಿಂದ 1.78 ಹಾಗೂ ಬಂಡೂರಿಯಿಂದ 2.18 ಟಿಎಂಸಿ ಕುಡಿಯುವ ನೀರು ಹಂಚಿಕೆ ಮಾಡಲಾಯಿತು. ಅಲ್ಲದೇ ಜಲವಿದ್ಯುತ್ ಯೋಜನೆಗೆ ಕರ್ನಾಟಕಕ್ಕೆ 8 ಟಿಎಂಸಿ ಹಂಚಿಕೆ ಮಾಡಲಾಯಿತು.
ಇದನ್ನೂ ಓದಿ | Dog bite | ಬೆಳಗಾವಿಯಲ್ಲಿ 6 ತಿಂಗಳಲ್ಲಿ 14 ಸಾವಿರ ನಾಯಿ ಕಡಿತ ಪ್ರಕರಣ!
ಆದರೆ ಕರ್ನಾಟಕ ಕುಡಿಯುವ ನೀರಿಗೆ 7.56 ಟಿಎಂಸಿ ನೀಡುವಂತೆ ಬೇಡಿಕೆ ಇಟ್ಟಿತ್ತು. ನ್ಯಾಯಮಂಡಳಿ ತೀರ್ಪು ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2019ರ ಫೆಬ್ರವರಿ 20 ರಂದು ತಿರಸ್ಕರಿಸಿತ್ತು. ಅಲ್ಲದೇ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿಯೊಂದಿಗೆ ಯೋಜನೆಗೆ ಚಾಲನೆ ನೀಡಬಹುದು ಎಂದೂ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಇದರಿಂದ ಖುಷಿಗೊಂಡಿದ್ದ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಮಹದಾಯಿ ಯೋಜನೆಗೆ ಬಜೆಟ್‍ನಲ್ಲಿ 500 ಕೋಟಿ ರೂಪಾಯಿ ಮೀಸಲಿರಿಸಿದ್ದರು.
ಕಳೆದ ಬಜೆಟ್‍ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಮಹದಾಯಿ ಯೋಜನೆ ಜಾರಿಗೆಗೆ 1 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರ ಯೋಜನೆಗೆ ಹಣವನ್ನೂ ಮೀಸಲಿರಿಸಿದೆ. ಇತ್ತ ಸುಪ್ರೀಂಕೋರ್ಟ್ ಕೂಡ ಯೋಜನೆಗೆ ಹಸಿರು ನಿಶಾನೆ ತೋರಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಯೋಜನೆಗೆ ಅನುವು ಮಾಡಿ ಕೊಡುತ್ತಿಲ್ಲ. ಇದು ಈ ಭಾಗದ ರೈತರು, ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಮಿತ್ ಶಾ ಕೊಟ್ಟ ಭರವಸೆ ಹುಸಿ
2018ರ ವಿಧಾನಸಭೆ ಚುನಾವಣೆಯಲ್ಲಿ ಮಹದಾಯಿ ವಿಷಯ ಹೆಚ್ಚು ಚರ್ಚೆ ಆಗಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಬಿಜೆಪಿಯ ಆನಂದ ಮಾಮನಿ ಪರ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ್ರೆ 24 ಗಂಟೆಯಲ್ಲಿ ಯೋಜನೆಗೆ ಚಾಲನೆ ಸಿಗಲಿದೆ ಎಂದಿದ್ದರು. ಆಪರೇಷನ್ ಕಮಲದ ಸಹಾಯದಿಂದ 14 ತಿಂಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ ಮತ್ತೊಂದು ವಿಧಾನಸಭೆ ಚುನಾವಣೆಗೆ ರಾಜ್ಯ ಈಗ ಅಣಿಯಾಗುತ್ತಿದೆ. ಅಂದು ಅಮಿತ್ ಶಾ ನೀಡಿದ ಭರವಸೆ ಹುಸಿಯಾಗಿದೆ.
ಬೊಮ್ಮಾಯಿ ಮೌನವೇಕೆ?
ಕಳೆದ ಚುನಾವಣೆ ವೇಳೆ ಮಹದಾಯಿ ಯೋಜನೆ ಬಗ್ಗೆ ಅತಿಹೆಚ್ಚು ಮಾತನಾಡಿದವರಲ್ಲಿ ಮಾಜಿ ಸಿಎಂ ಬಿಎಸ್‌ವೈ ಕೂಡ ಒಬ್ಬರು. ಎರಡು ವರ್ಷ ಸಿಎಂ ಆಗಿದ್ದ ಅವರು, ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ. ಕೇಂದ್ರ ಸರ್ಕಾರದ ಭಾಗವಾಗಿರುವ ರಾಜ್ಯದ ಪ್ರಭಾವಿ ನಾಯಕ ಪ್ರಲ್ಹಾದ ಜೋಶಿ ಕೂಡ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಮಹದಾಯಿ ಹೋರಾಟದ ಮೂಲಕವೇ ರಾಜಕೀಯ ಪ್ರವೇಶಿಸಿದ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಯೋಜನೆ ಜಾರಿಗೆ ಆದ್ಯತೆ ನೀಡುತ್ತಿಲ್ಲ. ಬಜೆಟ್‌ನಲ್ಲಿ 1 ಸಾವಿರ ಕೋಟಿ ನೀಡಿದ್ದಾರೆ. ಆದರೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಕ್ರಮವಹಿಸುತ್ತಿಲ್ಲ ಎಂಬ ಕೊರಗು ಈ ಭಾಗದ ಜನರಲ್ಲಿದೆ.
ಬದಲಾಗುತ್ತಾ ಪ್ಲ್ಯಾನ್?
ಮಹದಾಯಿ ನ್ಯಾಯಾದೀಕರಣದ ತೀರ್ಪಿನಲ್ಲಿ 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದೆ. ಕಳಸಾ 1.72 ಟಿಎಂಸಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ನೀರು ಸಿಕ್ಕಿದೆ. ಕಳಸಾ ನೀರು ಬಳಕೆಗೆ ಕಳಸಾ-ಹಲತಾರ ಡ್ಯಾಂ ಹಾಗೂ ಬಂಡೂರಿ ನೀರು ಬಳಸಲು ಒಂದು ಡ್ಯಾಂ ಹಾಗೂ ಅರಣ್ಯ ಪ್ರದೇಶದಲ್ಲಿ ಟನಲ್ ನಿರ್ಮಾಣ ಮಾಡಬೇಕಿದೆ. ಈ ಕಾಮಗಾರಿ ಕೈಗೊಂಡರೆ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತದೆ. ಈ ಕಾರಣಕ್ಕೆ ಕೇಂದ್ರ ಪರಿಸರ, ವನ್ಯಜೀವಿ ಮಂಡಳಿ ಅನುಮತಿ ನೀಡುತ್ತಿಲ್ಲ. ಈ ಯೋಜನೆ ಜಾರಿಯಿಂದ 500ಹೆಕ್ಟರ್ ಪ್ರದೇಶದ ಅರಣ್ಯ ನಾಶವಾಗುವ ಭೀತಿ ಇದೆ.
ಕಾಂಗ್ರೆಸ್ ಪಾದಯಾತ್ರೆ ಮೊದಲೇ ರಾಜ್ಯ ಸರ್ಕಾರ ಹೊಸ ಪ್ಲ್ಯಾನ್ ಹಾಕಿದೆ. ರಾಜ್ಯದ ಪಾಲಿನ ನೀರನ್ನು ಪೈಪ್‌ಲೈನ್ ಮೂಲಕ ಡಂಪ್ ಮಾಡಲು ಹೊಸ ಯೋಜನೆ ಸಿದ್ಧವಾಗುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ನಾಶ ಆಗುವುದಿಲ್ಲ ಎಂಬುದು ಅಧಿಕಾರಿಗಳ ವಾದ. ಅಧಿಕಾರಿಗಳ ತಂಡ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದೆ. ವರದಿ ಸಿದ್ಧವಾದ ಬಳಿಕ ಕೇಂದ್ರದಿಂದ ಅನುಮತಿ ಪಡೆದು ಕಾಮಗಾರಿ ಚಾಲನೆ ಕೊಡುವ ಪ್ಲ್ಯಾನ್ ಸರ್ಕಾರ ಹಾಕಿಕೊಂಡಿದೆ. ಮಹದಾಯಿ ಯೋಜನೆ ಜಾರಿ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಬಿಜೆಪಿ ಭರವಸೆ ನೀಡುತ್ತಲೇ ಬಂದಿದೆ.
ಕೃಷ್ಣಾ-ಕಾವೇರಿಯಂತೆ ಮಹದಾಯಿ ಯೋಜನೆಗೀಗ ಕಾನೂನು ತೊಡಕಿಲ್ಲ. ಯೋಜನೆಗೆ ಚಾಲನೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ನಮ್ಮ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆ. ಬಿಜೆಪಿ ಸರ್ಕಾರಗಳು ಇಚ್ಛಾಶಕ್ತಿ ತೋರಿ, ಯೋಜನೆಗೆ ಚಾಲನೆ ನೀಡಬೇಕು.
-ಅಶೋಕ ಚಂದರಗಿ, ಮಹದಾಯಿ ಹೋರಾಟಗಾರ
ಇದನ್ನೂ ಓದಿ | ಮೊದಲು ಕಾಂಗ್ರೆಸ್, ಆಮೇಲೆ ಸಿದ್ದರಾಮಯ್ಯ ಅಂದ್ರು ಜಮೀರ್; ಬೆಳಗಾವಿಯಲ್ಲಿ ಡಿಕೆಶಿಗೆ ಟಾಂಗ್