ಬೆಂಗಳೂರು: ಬೆಳಗಾವಿ ಬಿಜೆಪಿಯ ಕತೆ ಮುರಿದು ಬಿದ್ದ ಮನೆಯಂತಾಗಿದೆ. ಚುನಾವಣೆಯ ಹೊತ್ತಿಗಾದರೂ ಮನೆ ದುರಸ್ತಿ ಮಾಡೋಣ ಎಂದು ರಾಜ್ಯ ನಾಯಕರು ಪ್ರಯತ್ನಿಸಲು ಹೋದರೆ ಜಾರಕಿಹೊಳಿ ಬ್ರದರ್ಸ್ ʻಎಲ್ಲ ಕೆಲಸ ನಾವು ಹೇಳಿದ ಹಾಗೇ ಮಾಡ್ಬೇಕುʼ ಎಂದು ಹುಕುಂ ಹೊರಡಿಸುತ್ತಿದ್ದಾರೆ! (Karnataka Election Inside Story) ಇದು ಬಿಜೆಪಿ ನಾಯಕರಿಗೆ ತಲೆನೋವು ತಂದಿದೆ.
ಲೇಟೆಸ್ಟ್ ಸುದ್ದಿ ಏನೆಂದರೆ ಬೆಳಗಾವಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ, ʻಸಾಹುಕಾರ್ ಸಹೋದರರುʼ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೇ ಸವಾಲೊಡ್ಡಿದ್ದು, ʻನಾವೇ ಎಲ್ಲ, ನಮ್ಮಿಂದಲೇ ಎಲ್ಲʼ ಎಂದು ಮಾತನಾಡಿದ್ದಾರೆ. ʻಬಿಜೆಪಿಗಿಂತ ನಾವು ದೊಡ್ಡವರು, ನಾವು ಪಕ್ಷೇತರರಾಗಿ ನಿಂತರೂ ಗೆಲ್ತಿವಿ. ನಿಮ್ಮ ಬಿಟ್ಟಿ ಸಲಹೆ ಬೇಡʼ ಎಂದು ನೇರವಾಗಿಯೇ ಹೇಳುವ ಧೈರ್ಯ ತೋರಿಸಿದ್ದಾರೆ! ಹೀಗೆ ಯಡಿಯೂರಪ್ಪ ಮತ್ತು ಜಾರಕಿಹೊಳಿ ಬ್ರದರ್ಸ್ ನಡುವೆ ಮಾತಿನ ಚಕಮಕಿ ನಡೆಯಲು ಕಾರಣವಾಗಿದ್ದು, ಅಥಣಿ ಕ್ಷೇತ್ರದ ಟಿಕೆಟ್ ನೀಡುವ ವಿಷಯ.
ಈ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅಥಣಿ ಟಿಕೆಟ್ ಅನ್ನು ಮಹೇಶ್ ಕುಮಟಳ್ಳಿಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸರಿಯಾಗಿ ಸ್ಪಂದನೆ ದೊರೆಯದಿದ್ದಾಗ, ʻಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಕ್ಕೇ ನಾವೇ ಕಾರಣ. ನಾವು 17 ಜನ ಬರದಿದ್ರೆ ನೀವು ಅದು ಹೇಗೆ ಸಿಎಂ ಆಗುತ್ತಿದ್ರಿʼ ಎಂದೆಲ್ಲಾ ಸಾಹುಕಾರ್‌ಗತ್ತಿನಲ್ಲಿ ಮಾತನಾಡಿದ್ದಾರೆ.
ʻʻನಾವೇ ಸರ್ಕಾರ ತಂದ್ವಿ…ನಾವೇ ಸರ್ಕಾರ ತಂದ್ವಿʼʼ ಎಂಬ ಮಾತನ್ನು ಕೇಳಿ ಕೇಳಿ ಬೇಸತ್ತು ಹೋಗಿರುವ ಯಡಿಯೂರಪ್ಪ ʻʻನೀವು ಹಿಂಗೆಲ್ಲಾ ಈ ಸಭೆಯಲ್ಲಿ ಮಾತನಾಡುವ ಹಾಗಿಲ್ಲ. ಇದು ಕಾಂಗ್ರೆಸ್ ಪಕ್ಷದ ಸಭೆಯಲ್ಲ, ಹೀಗೆ ಬೇಕಾಬಿಟ್ಟಿ ಮಾತನಾಡಿದ್ರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆʼʼ ಎಂದು ರೇಗಿದ್ದಾರೆ.
ರಮೇಶ್ ಜಾರಕಿಯೊಳಿ ಮಾತಿಗೆಲ್ಲಾ ಗಡ್ಡ ಸವರಿಕೊಂಡು ತಲೆಯಾಡಿಸುತ್ತಾ ಕುಳಿತಿದ್ದ ಬಾಲಚಂದ್ರ ಜಾರಕಿಹೊಳಿ, ಆಗ ಇದ್ದಕ್ಕಿದ್ದಂತೆ ಎದ್ದು ನಿಂತು, ʻʻನಮ್ಮ ಮೇಲೆ ಏನು ನೀವು ಕ್ರಮ ತೆಗೆದುಕೊಳ್ಳುವುದು ಸರ್, ಜಿಲ್ಲೆಯ ವಿಷಯ ಮಾತನಾಡಿದರೆ ಕ್ರಮ ತೆಗೆದುಕೊಳ್ಳುವಿರಾ? ನೀವೆಷ್ಟು ದೊಡ್ಡವರು ಅಂತ ನಮಗೆ ಗೊತ್ತು, ಇಲ್ಲಿ ಎಲ್ಲ ವಿಷಯಗಳ ಕುರಿತೂ ಚರ್ಚೆ ನಡೆಯಲಿ. ಬೆಳಗಾವಿಯಿಂದ ಶಿವಮೊಗ್ಗದವರೆಗೂ ಯಾವೆಲ್ಲಾ ನಾಯಕರು ಯಾರ ಸಂಪರ್ಕಕ್ಕೆ ಬಂದ ಬಳಿಕ ಕಾಂಗ್ರೆಸ್ ಸೇರುತ್ತಿದ್ದಾರೆ? ಯಾರನ್ನು ಪಕ್ಷ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನೂ ಚರ್ಚೆ ಮಾಡೋಣ. ಪಕ್ಷದ ವರಿಷ್ಠರ ಮುಂದೆಯೂ ತೆಗೆದುಕೊಂಡು ಹೋಗೋಣ, ಯಾರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ನೋಡೋಣʼʼ ಎಂದು ಖಾರವಾಗಿಯೇ ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಜಾರಕಿಹೊಳಿ ಬ್ರದರ್ಸ್ ನಡುವಿನ ಹಳೇ ಜಗಳ, ಚುನಾವಣೆಯ ಹೊತ್ತಿನಲ್ಲಿ ಹೊಸ ಹೊಸ ವಿಷಯಗಳೊಂದಿಗೆ ಮತ್ತೆ ಆರಂಭವಾಗುತ್ತಿರುವುದನ್ನು ಕಂಡು ಬೆಚ್ಚಿದ ಸಭೆಯಲ್ಲಿದ್ದ ನಾಯಕರಾದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಬ್ಬರನ್ನೂ ಸುಮ್ಮನಾಗಿಸಿಲು ಹರಸಾಹಸ ಪಟ್ಟಿದ್ದಾರೆ. ʻಈ ರೀತಿಯ ಮಾತುಗಳು ಈ ಸಭೆಯಲ್ಲಿ ಬೇಡ, ಬೆಳಗಾವಿಯ ಚುನಾವಣೆ ವಿಷಯವ್ನನಷ್ಟೇ ಚರ್ಚೆ ಮಾಡೋಣʼ ಎಂದು ಹೇಳಿ ಸಭೆಯನ್ನು ಸರಿ ದಾರಿಗೆ ತರಲು ಯತ್ನಿಸಿ, ಕೊನೆಗೆ ಸಾಧ್ಯವಾಗದೇ ಸಭೆಯನ್ನೇ ಮುಗಿಸಿದ್ದಾರೆ.
ರಾಜಕೀಯದ ಇತರ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಈ ಸಭೆಯ ವಿಷಯ ಬೆಳಗಾವಿ ಜಿಲ್ಲಾ ಬಿಜೆಪಿ ವಲಯದಲ್ಲಿ ಗುಸುಗುಸು ಚರ್ಚೆಗೆ ಕಾರಣವಾಗುತ್ತಿದೆ. ಈ ನಡುವೆ ಜಾರಕಿಹೊಳಿ ಬ್ರದರ್ಸ್‌ರೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ʻʻನೀವು ಹೀಗೆ ಪಕ್ಷದಲ್ಲಿ ರಾಡಿ ಎಬ್ಬಿಸುತ್ತಿದ್ದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಈ ವಿಷಯವನ್ನು ಪಕ್ಷದ ಹೈಕಮಾಂಡ್ ಗಮನಕ್ಕೂ ತರಲಾಗಿದೆʼʼ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯ ನಾಯಕರ ಈ ʻಶಿಸ್ತಿನʼ ಮಾತಿನ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳದ ಸಾಹುಕಾರರು, ʻಆನೆ ನಡೆದಿದ್ದೇ ದಾರಿʼ ಎಂಬಂತೆ ನಡೆಯುತ್ತಾ ಮುಂದೆ ಸಾಗುತ್ತಿದ್ದಾರೆ!
ಇದನ್ನೂ ಓದಿ : Inside Story: ನಕಲಿ ಅಭ್ಯರ್ಥಿ ಪಟ್ಟಿಗೆ ಬಿಜೆಪಿ ಸಭೆ ಗಲಿಬಿಲಿ: ಘಟಾನುಘಟಿಗಳಿಗೇ ಶಾಕ್ ನೀಡಿದ ಕಿಲಾಡಿಗಳು