ಚಿಕ್ಕೋಡಿ: ಭಾನುವಾರ ತಡರಾತ್ರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನ ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಯಕ್ಸಂಬಾ ಪಟ್ಟಣದ ನಿವಾಸಿ ಮಹೇಶ ಕುರ್ಣಿ (48) ಕೊಲೆಯಾದವನು.
ಯಕ್ಸಂಬಾ ಪಟ್ಟಣದ ಬೀರೇಶ್ವರ ಕಾಲೋನಿಯಲ್ಲಿ ಈ ಕೃತ್ಯ ನಡೆದಿದೆ. ಮುಂಜಾನೆ ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಂತಕರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Train Accident: ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲು ಡಿಕ್ಕಿ; 5 ಮಂದಿ ಸಾವು
ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದ ಬಾಯ್‌ಫ್ರೆಂಡ್‌ನನ್ನು ಕೊಂದು ಮುಗಿಸಿದ ಮಗ
ಬೆಂಗಳೂರು ಗ್ರಾಮಾಂತರ: ನಿರ್ಮಾಣ ಹಂತದ ಕಟ್ಟಡದಲ್ಲಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ (Murder Case) ನಡೆಸಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲು ಗ್ರಾಮದ ಸಾಯಿ ಮೆಡೋಸ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಕೃಷ್ಣೋಜಿ ರಾವ್ (37) ಕೊಲೆಯಾದವನು.
ಶಿವಕುಮಾರ್, ರಾಜೇಶ್ವರಿ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಮದುವೆಯಾಗಿದ್ದ ರಾಜೇಶ್ವರಿ ಪತಿಯಿಂದ ದೂರಾಗಿದ್ದಳು. ಬಳಿಕ ಕೆಲ ವರ್ಷಗಳ ಹಿಂದೆ ಕೃಷ್ಣೋಜಿರಾವ್ ಜತೆ ರಾಜೇಶ್ವರಿ ಸಂಬಂಧ ಹೊಂದಿದ್ದಳು. ಇವರಿಬ್ಬರು ಗಂಡ-ಹೆಂಡತಿ ಎಂದು ಹೇಳಿಕೊಂಡು ಗಾರೆ ಕೆಲಸ ಮಾಡಿಕೊಂಡು ಒಟ್ಟಿಗೆ ವಾಸವಿದ್ದರು.
ಕೃಷ್ಣೋಜಿರಾವ್, ರಾಜೇಶ್ವರಿ ಮತ್ತು ಆಕೆಯ ಮಗ ಶಿವಕುಮಾರ್ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಿದ್ದರು. ಇತ್ತೀಚೆಗೆ ಕೃಷ್ಣೋಜಿರಾವ್ ದಿನನಿತ್ಯ ಕುಡಿದು ಬಂದು ರಾಜೇಶ್ವರಿಗೆ ಹಲ್ಲೆ ಮಾಡುತ್ತಿದ್ದ. ಇದರಿಂದಾಗಿ ರಾಜೇಶ್ವರಿ ಹಾಗೂ ಆಕೆಯ ಮಗ ಶಿವಕುಮಾರ್ ಬೇಸತ್ತು ಹೋಗಿದ್ದರು.
ನಿನ್ನೆ ಭಾನುವಾರ ಸಂಜೆ ಕಂಠ ಪೂರ್ತಿ ಕುಡಿದು ಬಂದಿದ್ದ ಕೃಷ್ಣೋಜಿರಾವ್, ರಾಜೇಶ್ವರಿ ಜತೆಗೆ ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ರಾಜೇಶ್ವರಿ ಮಗ ಶಿವಕುಮಾರ್ ದೊಣ್ಣೆಯಿಂದ ಕೃಷ್ಣೋಜಿರಾವ್ ತಲೆಗೆ ಹೊಡೆದಿದ್ದ.
ಆಗ ಶಿವಕುಮಾರನ ತಾಯಿ ರಾಜೇಶ್ವರಿ ಅವನನ್ನು ಬಿಡಬೇಡ ಮುಗಿಸಿಬಿಡು ಎಂದು ಹೇಳಿದ್ದಾಳೆ. ಆಗ ಮತ್ತೆ ದೊಣ್ಣೆಯಿಂದ ಮುಖ ಹಾಗೂ ತಲೆಗೆ ಹೊಡೆದು ಕೊಂದು ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ