Site icon Vistara News

NPS Cancellation: ರಾಜ್ಯದಲ್ಲಿ ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

Belagavi Winter Session and NPS and OPS

ಬೆಳಗಾವಿ: ರಾಜ್ಯದಲ್ಲಿ ಹಳೇ ಪಿಂಚಣಿ ಪದ್ಧತಿಯನ್ನೇ (Old Pension Scheme) ಮರು ಜಾರಿ ಮಾಡಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಬೇಕು (NPS Cancellation) ಎಂದು ಆಗ್ರಹಿಸುತ್ತಿರುವ ಸರ್ಕಾರಿ ನೌಕರರಿಗೆ (Government employees) ಈ ಬಾರಿ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌ ಸಿಗಲಿದೆಯೇ? ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಇರುವ ಸಮಿತಿಯನ್ನು 10 ದಿನದೊಳಗೆ ಪುನಾರಚನೆ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ಹೇಳಿದ್ದಾರೆ.

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನು? ಎಂಬ ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರ್ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹಿಂದೆ ಏಕ ವ್ಯಕ್ತಿಯ ಸಮಿತಿಯನ್ನು ಮಾಡಿದ್ದರು. ಈಗ ಆ ಸಮಿತಿಯನ್ನು ಪರಿಷ್ಕರಣೆ ಮಾಡಿ ನಾಲ್ಕೈದು ಸದಸ್ಯರ ನೇಮಕ ಮಾಡಲಾಗುವುದು. ಬಳಿಕ ಆ ಸಮಿತಿ ಕಾರ್ಯವ್ಯಾಪ್ತಿ ಅಳವಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ವಾಜಪೇಯಿ ಬಗ್ಗೆ ನಮಗೆ ನಂಬಿಕೆ ಇದೆ

ಕಾಲಮಿತಿಯ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ರಾಜಸ್ಥಾನ್, ಛತ್ತೀಸಗಢ, ಪಂಜಾಬ್‌ನಿಂದ ಇದರ ಬಗೆಗ ಆದೇಶ ಆಗಿದೆ. ಆದರೆ, ಅಲ್ಲಿ ಇನ್ನು ಜಾರಿಗೊಳಿಸಿಲ್ಲ. ಯಾರನ್ನು ಪಿಂಚಣಿಯಿಂದ ಹೊರಗಿಡುವ ಪ್ರಶ್ನೆ ಇಲ್ಲ. ನಾನು ಅಟಲ್‌ ಬಿಹಾರಿ ವಾಜಪೇಯಿಯವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವರ ಆಡಳಿತದ ಬಗ್ಗೆಯೂ ನಂಬಿಕೆ ಇಟ್ಟಿದ್ದೇನೆ. ವಾಜಪೇಯಿ ಅವರು ಎನ್‌ಪಿಎಸ್ ತರುವಾಗ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುತ್ತಾರೆ. ಆದರೆ, ನಿಮಗೆ ಅವರ ನಿರ್ಧಾರದ ಬಗ್ಗೆ ಗೌರವ ಇಲ್ಲದಿರಬಹುದು, ನಮಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

10 ದಿನದೊಳಗೆ ಸಮಿತಿ ಪುನರ್ ರಚನೆ

ಅನುದಾನಿತ ಸಂಸ್ಥೆಯಲ್ಲಿ ಸಿಬ್ಬಂದಿಗೆ ತೊಂದರೆ ಆಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಶಿಕ್ಷಣ ಸಂಸ್ಥೆಯವರು ಕೊಡುಗೆ ನೀಡಬೇಕು. ನಮಗೆ ಅದನ್ನು ಪರಿಹರಿಸುವ ಮನಸ್ಸಿದೆ. ಅದನ್ನ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸೂಚನೆ ಕೊಟ್ಟಿದ್ದಾರೆ. 10 ದಿನದೊಳಗೆ ಸಮಿತಿ ಪುನರ್ ರಚನೆ ಮಾಡುತ್ತೇವೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಶೀಘ್ರದಲ್ಲೇ ಆರ್ಥಿಕ ಇಲಾಖೆ ಜತೆ ಸಿಎಂ ಸಭೆ

ಎನ್‌ಪಿಎಸ್‌ ತೆಗೆದು ಒಪಿಎಸ್‌ ಅನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರೆ ಮುಂದಾಗುವ ಸಾಧಕ – ಬಾಧಕಗಳು ಏನು? ರಾಜ್ಯದ ಮೇಲೆ ಆಗುವ ಆರ್ಥಿಕ ಹೊರೆ ಏನು? ಈಗಿರುವ ಎಲ್ಲ ಲೆಕ್ಕಾಚಾರಗಳ ನಡುವೆ ಅದನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬಹುದಾ ಎಂದು ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಜತೆ ಶೀಘ್ರದಲ್ಲಿಯೇ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nandini Milk: ಮತ್ತೆ ನಂದಿನಿ ಹಾಲಿನ ದರ ಏರಿಕೆ? ಯಾವಾಗ? ಎಷ್ಟು ಹೆಚ್ಚಳ ಮಾಡಬಹುದು?

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ ನಡೆಯುತ್ತಲಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲು ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಎನ್‌ಪಿಎಸ್‌ ನೌಕರರು ಈ ಸಮಾವೇಶದಲ್ಲಿ ಒಪಿಎಸ್‌ ಜಾರಿಗಾಗಿ ಸಿಎಂ ಎದುರು ಹಕ್ಕೊತ್ತಾಯವನ್ನು ಮಂಡನೆ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಮೊದಲೇ ಸಾಧಕ – ಬಾಧಕಗಳ ಬಗ್ಗೆ ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರೆ ಸಮಾವೇಶದಲ್ಲಿ ಘೋಷಣೆ ಮಾಡಲು ಅನುಕೂಲ ಆಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಆಗಿದೆ ಎಂದು ಹೇಳಲಾಗಿದೆ. ಆದರೆ, ಇನ್ನು 10 ದಿನದಲ್ಲಿ ಸಮಿತಿಯನ್ನು ಪುನಾರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಸದ್ಯಕ್ಕೆ ಹಳೇ ಪಿಂಚಣಿ ಬಗ್ಗೆ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಕಡಿಮೆಯೇ ಎಂದು ಹೇಳಲಾಗಿದೆ.

Exit mobile version