Site icon Vistara News

40% Commission | ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾದ ಸಿದ್ದರಾಮಯ್ಯ: 15 ವರ್ಷದ್ದು ಚರ್ಚಿಸೋಣ ಎಂದ ಮಾಧುಸ್ವಾಮಿ

assembly-session-siddarmaiah lashes out over ashwathnarayan statement

ವಿಧಾನಸಭೆ: ಈಗಾಗಲೆ ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ 40% ಭ್ರಷ್ಟಾಚಾರ (40% Commission) ಎನ್ನುವುದನ್ನು ಬ್ರ್ಯಾಂಡ್‌ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್‌ ಇದೀಗ ಸದನದ ಒಳಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ.

ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಚರ್ಚೆ ಮಾಡಲು ಸದನದಲ್ಲಿ ನಯಮ 50ರಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದ್ದಾರೆ.

“ರಾಜ್ಯದಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಪ್ರಕರಣಗಳು ತೀವ್ರಗೊಂಡು ಕುದಿಬಿಂದುವಿನ ಮಟ್ಟಕ್ಕೆ ತಲುಪಿವೆ. ಭ್ರಷ್ಟಾಚಾರದ ಹೆಚ್ಚಳದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಹೇಮಾವತಿ ನಾಲೆ, ಕೃಷ್ಣಾ ಜಲಾನಯನ ಪ್ರದೇಶದ ನಾರಾಯಣಪುರ ಬಲದಂಡೆ ಕಾಲುವೆ ರಿಪೇರಿ ಮುಂತಾದ ಕಾಮಗಾರಿಗಳಲ್ಲಿ ಶೇ.50 ಕ್ಕೂ ಹೆಚ್ಚಿನ ಪ್ರಮಾಣದ ಭ್ರಷ್ಟಾಚಾರ ನಡೆದಿದೆಯೆಂದು ದಾಖಲೆಗಳು ಸಾಕ್ಷ್ಯ ನುಡಿಯುತ್ತಿವೆ. ರಾಜ್ಯದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರುಗಳು ಸರ್ಕಾರದ ಭ್ರಷ್ಟಾಚಾರದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಪ್ರತಿಭಟಿಸುತ್ತಲೇ ಇದ್ದಾರೆ”.

“ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಜನರ ಏಳಗೆಗಾಗಿ ವಿನಿಯೋಗಿಸುವ ಗಂಗಾ ಕಲ್ಯಾಣ ಯೋಜನೆಯಲ್ಲೂ ವ್ಯಾಪಕ ಅಕ್ರಮ ನಡೆದಿದೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನಗಳ ಮೂಲ ಉದ್ದೇಶದಿಂದ ಮಾರ್ಪಡಿಸುವ ಮೂಲಕ ಸಾವಿರಾರು ಕೋಟಿ ರೂಗಳಷ್ಟು ಅಕ್ರಮವೆಸಗಲಾಗಿದೆ. ಇವುಗಳಷ್ಟೇ ಅಲ್ಲದೆ ಸರ್ಕಾರವು ನಡೆಸುವ ಹಲವು ರೀತಿಯ ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳಿಗೆ ನಡೆಸುವ ನೇಮಕಾತಿ, ಬಡ್ತಿ ಮತ್ತು ವರ್ಗಾವಣೆಗಳು, ಖರೀದಿಗಳು, ಮಾರಾಟಗಳು ಹಾಗೂ ಸರ್ಕಾರವು ಒದಗಿಸುವ ವಿವಿಧ ಸೇವೆಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿವೆಯೆಂದು ಅಡಳಿತ ಪಕ್ಷದ ಸದಸ್ಯರ ಹೇಳಿಕೆಗಳನ್ನು ಕೊಟ್ಟಿದ್ದಾರೆ”.

“ಅಬಕಾರಿ ಇಲಾಖೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿರುವುದಕ್ಕೆ ದಾಖಲೆಗಳವೆ. ಪೊಲೀಸರು ವರ್ಗಾವಣೆಗಾಗಿ 70-80 ಲಕ್ಷ ರೂಪಾಯಿಗಳಷ್ಟು ಲಂಚ ಕೊಡಬೇಕೆಂದು ಸರ್ಕಾರದ ಭಾಗವಾಗಿರುವ ಸಚಿವರು ಹೇಳಿದ್ದಾರೆ. ವಿಶ್ವ ವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ 5-6 ಕೋಟ ರೂ ಕೂಡಬೇಕಾಗಿದೆಯೆಂದು ಹಾಗೂ ಶಿಕ್ಷಕರ, ಉಪನ್ಯಾಸಕರ ಅರ್ಹತಾ ಪರೀಕ್ಷೆ ಮಾಡುವುದಕ್ಕೂ ಲಂಚ ಕೊಡಬೇಕೆಂದು ಅಡಳಿತ ಪಕ್ಷದ ಸದಸ್ಯರು ಹೇಳಕೆ ನೀಡಿದ್ದಾರೆ. ಮತ್ತೊಬ್ಬರು ಆಡಳಿತ ಪಕ್ಷದ ಸದಸ್ಯರ ಚುನಾವಣೆಗೆ ಕೋಟ್ಯಂತರ ರೂ. ನೀಡಲಾಗಿದೆಯೆಂದು ಹೇಳಿದ್ದಾರೆ. ಕೃಷಿ ಚಟುಟಿಕೆಗಳಲ್ಲಿ ಬಳಸುವ ಗೊಬ್ಬರ, ರಾಸಾಯನಿಕಗಳು, ಚಿತ್ತನೆ ಬೀಜಗಳು, ಕ್ರಿಮಿನಾಶಕಗಳು ಮುಂತಾದವುಗಳಲ್ಲಿ ಕಳಪೆ ವಸ್ತುಗಳನ್ನು ಹೆಚ್ಚು ಮಾರಾಟ ಮಾಡಲು ಬಿಟ್ಟು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿರುವುದರಿಂದ ರೈತರ ಕೃಷಿ ಭೂಮಿಗಳು ಬಂಜರಾಗುತ್ತಿವೆ”.

“ಇಷ್ಟೆಲ್ಲ ಆದರೂ ಸಹ ರಾಜ್ಯ ಸರ್ಕಾರವು ಭ್ರಷ್ಟಾಚಾರವನ್ನು ನಿಗ್ರಹಿಸುವ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದಾಗಿ ಸರ್ಕಾರದ ಖಜಾನೆ ಲೂಟಿಯಾಗುತ್ತಿದೆ. ಭ್ರಷ್ಟಾಚಾರ ಹೆಚ್ಚುತ್ತಿರುವುದರಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಬಂಡವಾಳ ವೆಚ್ಚಗಳು ನಿಷ್ಪಲವಾಗಿ ಒಟ್ಟಾರೆ ರಾಜ್ಯದ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ. ಆದ್ಧರಿಂದ ಸಾರ್ವಜನಿಕವಾಗಿ ಅತ್ಯಂತ ಮುಖ್ಯವಾದ ಈ ವಿಷಯದ ಕುರಿತು ನಿಯಮ 50ರ ಮೇರೆಗೆ ದಿನಾಂಕ 25-10-2022 ರಂದು ಪ್ರಸ್ತಾಪಿಸಲು ನಿಲ್ಲುವ ಸೂಚನೆಯನ್ನು ಕೊಡುತ್ತೇನೆ” ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಸದನದಲ್ಲಿ ಪ್ರಶ್ನೋತ್ತರ ವೇಳೆಯ ನಂತರ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸೂಚನೆಯಲ್ಲಿ ಯಾವುದೇ ನಿರ್ದಿಷ್ಟ ಆರೋಪ ಮಾಡಿಲ್ಲ. ಹೀಗಾಗಿ ನಿಲುವಳಿ ಸೂಚನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಬೇರೆ ರೂಪದಲ್ಲಿ ಚರ್ಚೆಗೆ ನೀಡಬಹುದು ಎಂದರು.

ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ಯಾವುದೇ ನಿರ್ದಿಷ್ಟ ಆರೋಪ ಮಾಡಿಲ್ಲ. ಇತ್ತೀಚೆಗೆ ನಡೆದಿರುವ ವಿಚಾರ ಆಗಿದ್ದರೆ ಮಾತ್ರ ಈ ನಿಯಮದಲ್ಲಿ ಅವಕಾಶ ನೀಡಲಾಗುತ್ತದೆ. ಭ್ರಷ್ಟಾಚಾರದ ಕುರಿತು ಚರ್ಚೆಗೆ ನಾವೂ ಸಿದ್ಧರಿದ್ದೇವೆ. ಕಳೆದ 15 ವರ್ಷಗಳಿಂದಲೂ ಏನೇನಾಗಿದೆ ಎಲ್ಲವನ್ನೂ ಚರ್ಚೆ ಮಾಡೋಣ ಎಂದರು.

ಇದನ್ನೂ ಓದಿ | Corruption charge | ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಿದ ಕೋರ್ಟ್‌

Exit mobile version