ಬೆಳಗಾವಿ: ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧೆಡೆ ಸಮಾವೇಶಗಳನ್ನು ನಡೆಸಲಾಗುತ್ತಿದ್ದು, ಭಾನುವಾರ ಗೋಕಾಕ್‌ನಲ್ಲಿ ಆಯೋಜನೆಯಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಭಾನುವಾರ ಮದ್ಯಾಹ್ನ ಆರಂಭವಾಗುವ ಸಮಾವೇಶಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ರ‌್ಯಾಲಿ ನಡೆಯಲಿದೆ. ಬಸವೇಶ್ವರ ವೃತ್ತ ಮಾರ್ಗವಾಗಿ ಸಮಾವೇಶ ನಡೆಯುವ ಸ್ಥಳ ತಲುಪಲಿರುವ ರ‌್ಯಾಲಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಸೇರಿ ಹಲವರು ಭಾಗಿಯಾಗಲಿದ್ದಾರೆ.
ಈಗಾಗಲೆ ಅರಭಾವಿ, ಹುಕ್ಕೇರಿಯಲ್ಲಿ ಸಮಾವೇಶ ನಡೆಸಲಾಗಿದ್ದು, ವಿವಿಧೆಡೆ ಸಮಾವೇಶಗಳ ನಂತರ ಡಿಸೆಂಬರ್ 12ರಂದು 25 ಲಕ್ಷ ಜನ ಸೇರಿಸಿ ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆಗೆ ನಿರ್ಧಾರ ಮಾಡಲಾಗಿದೆ. ಇದರ ಪೂರ್ವಭಾವಿಯಾಗಿ ತಾಲೂಕು ಮಟ್ಟದಲ್ಲಿ ಬೃಹತ್ ಪಂಚಮಸಾಲಿ ಸಮಾವೇಶ ಆಯೋಜನೆಯಾಗುತ್ತಿದೆ.
ಯತ್ನಾಳ್‌ಗೆ ಎಚ್ಚರಿಕೆ ಸಂದೇಶ
ಪಂಚಮಸಾಲಿ ಸಮಾವೇಶಕ್ಕೆ ಆಗಮಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಬಂಬಲಿಗರು ಎಚ್ಚರಿಕೆ ನೀಡಿದ್ದಾರೆ.
ಹೋರಾಟವನ್ನು ಹೊರತುಪಡಿಸಿ ಸತೀಶ್ ಬಗ್ಗೆ ಮಾತನಾಡಬಾರದು. ಯಡಿಯೂರಪ್ಪ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತನಾಡಿದ ಹಾಗೆ ಇಲ್ಲಿ ಏನಾದರೂ ನಾಟಕ ಮಾಡಿದರೆ ಗೋಕಾಕ್ ಬಿಟ್ಟು ಹೋಗುವುದು ಕಷ್ಟ ಆಗುತ್ತದೆ. 2ಎ ಮೀಸಲಾತಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ನೀನು ಬಂದಾ ಪುಟ್ಟ ಹೋದಾ ಪುಟ್ಟ ಅಷ್ಟೇ ಇರಬೇಕು.
ಅದನ್ನ ಬಿಟ್ಟು ಬೇರೆ ಮಾತನಾಡಿದರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ. ನಮ್ಮ ಸಾಹುಕಾರ್ ಹೆಸರು ವೇದಿಕೆ ಮೇಲೆ ತೆಗೆದರೆ ಸರಿ ಇರುವುದಿಲ್ಲ. ಧಮ್ ಇದ್ದರೆ, ತಾಕತ್ ಇದ್ದರೆ ನಮ್ಮ ಸಾಹುಕಾರ್ ಹೆಸರು ವೇದಿಕೆಯಲ್ಲಿ ತೆಗೆ, ಆಮೇಲೆ ಇದೆ ನಿನಗೆ ಎಂದಿದ್ದಾರೆ.
ಬಿಗಿ ಭದ್ರತೆ
ಪಂಚಮಸಾಲಿ ಸಮಾವೇಶದ ಸಲುವಾಗಿ ಗೋಕಾಕ್ ನಗರದಾದ್ಯಂತ ಪೊಲೀಸ್ ಕಣ್ಗಾವಲಿದೆ. ೫ ಡಿಎಸ್‌ಪಿ, ೧೨ ಸಿಪಿಐ, ೨೦ ಪಿಎಸ್‌ಐ, ೩೧ ಎಸ್ಐ, ೪೨೦ ಪಿಸಿ, ಎರಡು ಕೆಎಸ್‌ಆರ್‌ಪಿ, ಹಾಗೂ ಎರಡು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ | Panchamasali | ಬೆಳಗಾವಿಯ ಜಿಲ್ಲೆಯ ಗೋಕಾಕ್‌ನಲ್ಲಿ ಇಂದು ಬೃಹತ್ ಪಂಚಮಸಾಲಿ ಸಮಾವೇಶ