ಬೆಳಗಾವಿ: ಕಾಂಗ್ರೆಸ್‌ನವರು ಒಂದು ಮತಕ್ಕೆ ಮೂರು ಸಾವಿರ ರೂ. ನೀಡಿದರೆ ತಾವು ಆರು ಸಾವಿರ ರೂ. ನೀಡುವುದಾಗಿ ಹೇಳಿಕೆ ನೀಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 2023ರ ಚುನಾವಣೆಯಲ್ಲಿ ಸರಳ ಬಹುಮತಕ್ಕೆ ಸ್ವಲ್ಪ ಕೊರತೆ ಆದರೂ ಸರಿ, ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂದಿದ್ದಾರೆ.
ಗೋಕಾಕ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ರಮೇಶ್ ಜಾರಕಿಹೊಳಿ, ನಮ್ಮ ಕುಟುಂಬ ನಾವು ಎಲ್ಲ ಜಾತಿಗಳನ್ನೂ ಒಟ್ಟಾಗಿ ಕರೆದುಕೊಂಡುಹೋಗುತ್ತೇವೆ. ಮುಸಲ್ಮಾನರಿಂದ ಮತ ಪಡೆಯಲು ಕಾಂಗ್ರೆಸ್‌ನವರು ಕೆಲಸ ಮಾಡುತ್ತಾರೆ. ಬಿಜೆಪಿಯವರು ಮುಸ್ಲಿಮರನ್ನು, ದೇಶದ ವಿಚಾರವಾಗಿ ಧ್ವೇಷ ಮಾಡುತ್ತಾರೆಯೇ ವಿನಃ ವೈಯಕ್ತಿಕ ಕಾರಣಕ್ಕೆ ಅಲ್ಲ. ಕಾಂಗ್ರೆಸ್‌ನವರು ಯಾವುದೇ ಅಭಿವೃದ್ಧಿ ಮಾಡುವುದಿಲ್ಲ. ಅದಕ್ಕಾಗಿ ಮುಸ್ಲಿಮರು, ಅರಭಾವಿಯಂತೆಯೇ ಗೋಕಾಕ್‌ನಲ್ಲೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ, ಒಳ್ಳೆಯ ಅಭಿವೃದ್ಧಿ ಮಾಡೋಣ. ಯಾವುದೇ ಕಾರಣಕ್ಕೆ ಕಾಂಗ್ರೆಸ್ ಬರಲ್ಲ. ಸುಮ್ಮನೆ ಅವರು ಹವಾ ಮಾಡುತ್ತಾರೆ. ಹೆಂಗಾದರೂ ಮಾಡಿ ಬಿಜೆಪಿ ಸರ್ಕಾರ ಮಾಡುತ್ತೇವೆ, ಬಿಡುವುದಿಲ್ಲ. ಶಕ್ತಿಯುತ ಬಿಜೆಪಿ ಸರ್ಕಾರ ಬರುತ್ತದೆ. ಸ್ವಲ್ಪ ಕಡಿಮೆಯಾದರೂ ಏನಾದರೂ ಮಾಡಿ, ಗುದ್ದಾಡಿ ಬಿಜೆಪಿ ಸರ್ಕಾರ ಮಾಡೇ ಮಾಡುತ್ತೇವೆ. 2023ರಲ್ಲಿ ಬಿಜೆಪಿ ಮುಖ್ಯಮಂತ್ರಿಯೇ ಇರುತ್ತಾರೆ ಎಂದರು.
ನಾನು ಬಿಜೆಪಿ ಪಕ್ಷವನ್ನು ಬಿಡುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೆ ಬಿಜೆಪಿ ಬಿಡುವುದಿಲ್ಲ ಇಲ್ಲಿ ಒಂದು ಇತಿಹಾಸ ನಿರ್ಮಾಣ ಮಾಡಿಯೇ ಹೋಗುತ್ತೇನೆ ನಾನು ಎಂದರು.
ಜನವರಿ 21ರಂದು ಬೆಳಗಾವಿಯಲ್ಲಿ ಮಾತನಾಡಿದ್ದ ಜಾರಕಿಹೊಳಿ, ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಟೀಕೆ ಮಾಡಿದ್ದರು. ಅವರು ವಿವಿಧ ಉಡುಗೊರೆ ನೀಡುತ್ತಿದ್ದಾರೆ, ಅದರ ಒಟು ಮೌಲ್ಯ 3 ಸಾವಿರ ರೂ. ಆಗಬಹುದು. ನಾವು ಆರು ಸಾವಿರ ರೂ. ಕೊಟ್ಟರೆ ನಮಗೆ ಮತ ನೀಡಿ ಎಂದಿದ್ದರು. ಈ ವಿಚಾರವನ್ನು ಬಳಸಿಕೊಂಡಿರುವ ಕಾಂಗ್ರೆಸ್, ಈ ರೀತಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದರೂ ಚುನಾವಣಾ ಆಯೋಗ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿತ್ತು.
ಇತ್ತೀಚೆಗೆ ಸಿ.ಪಿ. ಯೋಗೇಶ್ವರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಮುಂದೆ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ. ಮಾವಿನ ಹಣ್ಣು ಮರದಲ್ಲೇ ಹಣ್ಣಾಗಬೇಕು ಎಂದಿಲ್ಲ. ಅದನ್ನು ಕಿತ್ತ ನಂತರವೂ ಹಣ್ಣು ಮಾಡಬಹುದು ಎಂದಿದ್ದರು. ಅಂದರೆ, ಸರಳ ಬಹುಮತಕ್ಕೆ ಸ್ವಲ್ಪ ಕಡಿಮೆಯಾದರೂ ನಿರ್ವಹಣೆ ಮಾಡಲಾಗುತ್ತದೆ ಎಂದಿದ್ದರು. ಆದರೆ ಈ ಆಡಿಯೋ ತಮ್ಮದಲ್ಲ ಎಂದು ಸಿ.ಪಿ. ಯೋಗೇಶ್ವರ್ ನಿರಾಕರಿಸಿದ್ದರು.